ಹಾಸನ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 7
ಜಿಲ್ಲೆಯಾದ್ಯಂತ ಸವರ್ಣಿಯರಿಂದ ದಲಿತರ ಮೇಲಿನ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸಾಮಾಜಿಕ ಅರ್ಥಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕವಾಗಿ ಎಲ್ಲರೂ ಸಮಾನತೆಯಿಂದ ಬದುಕುವ ಅವಕಾಶ ದೇಶದಲ್ಲಿದ್ದರೂ ದಲಿತರು ಮಾತ್ರ ಈ ಎಲ್ಲ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮೇಲ್ಜಾತಿಯವರಿಂದ ಪ್ರತಿನಿತ್ಯ ಹಲ್ಲೆ, ಅತ್ಯಾಚಾರ, ಕೊಲೆ, ದೊಂಬಿ, ಅಮಾನವೀಯ ದೌರ್ಜನ್ಯಕ್ಕೆ ದಲಿತರು ಬಲಿಯಾಗುತ್ತಿದ್ದಾರೆ. ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ದಲಿತರ ಮಾನ, ಪ್ರಾಣ, ರಕ್ಷಣೆ ಮಾಡಲು ಸಂಪೂರ್ಣ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವರ್ಣೀಯರಿಂದ ದಲಿತರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ನಡೆದಿದೆ. ಈಚೆಗೆ ಜಿಲ್ಲೆಯ ನಾನಾ ಭಾಗಗಳಲ್ಲಿ ದಲಿತರ ಹತ್ಯೆ, ಸಾಮಾಜಿಕ ಬಹಿಷ್ಕಾರ, ಅಮಾನುಷ ಕೃತ್ಯಗಳು ನಡೆಯುತ್ತಲೆ ಇದ್ದರೂ ಅದು ಸುಳ್ಳು ಪ್ರಕರಣಗಳು ಎಂದು ಹೇಳುವ ಮೂಲಕ ದೌರ್ಜನ್ಯ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿವೆ ಎಂದು ದೂರಿದರು.
ಬೇಲೂರು ತಾಲೂಕಿನ ದಲಿತ ಮುಖಂಡ ಹುಲಿಕೆರೆ ಕುಮಾರ್ ಮೇಲೆ ಗ್ರಾಮದ ಕೆಲ ಸಮುದಾಯದ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರನ್ನು ಬಂಧಿಸದೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಆಲೂರು ತಾ. ಕೆಂಚಮ್ಮನ ಹೊಸಕೋಟೆಯ ಕಿತ್ತಗೆರೆ ಗ್ರಾಮದ ದಲಿತ ರೇವಣ್ಣ ಮತ್ತು ಆತನ ಕುಟುಂಬದ ಮೇಲೆ ನಡೆದ ದೌರ್ಜನ್ಯ ಪ್ರಕರಣ ದಾಖಲಿಸಿ ನೊಂದ ಕುಟುಂಬಕ್ಕೆ ರಕ್ಷಣೆ ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ಪಾಳ್ಯ ಹೋಬಳಿ ಬೆಳ್ಳಾವರೆ ಗ್ರಾಮದ ದಲಿತ ರಂಗಯ್ಯ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಕ್ರಮ ಕೈಂಡಿಲ್ಲ. ಆಲೂರು ತಾ. ಕಸಬಾ ಹೋಬಳಿ ಮರಸು ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 34ರಲ್ಲಿ ದಲಿತರು ಬಗರ್ ಸಾಗುವಳಿ ಮಾಡಿರುವ ಜಮೀನನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಆಲೂರು ತಾಲ್ಲೂಕಿನ ತಾಳೂರು ಗ್ರಾಮದ ದಲಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಬೇಕು ಜತೆಗೆ ಬಹುದಿನಗಳ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.            
ಪ್ರತಿಭಟನೆಯಲ್ಲಿ ಒಕ್ಕೂಟದ ಬಿ.ಪಿ.ಜಯರಾಂ, ಅರೆಹಳ್ಳಿ ನಿಂಗರಾಜ್, ಈರಪ್ಪ, ಎಚ್.ಪಿ.ಪುಟ್ಟರಾಜ್, ಸಾತೇನಹಳ್ಳಿ ರಮೇಶ್, ಕುಮಾರಸ್ವಾಮಿ, ನಿಂಗರಾಜ್, ಸೋಮಶೇಖರ್,ಶಂಕರ್ಬಾಬು, ಕುಮಾರಸ್ವಾಮಿ,ವೆಂಕಟೇಶ್ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.