ಅರಿವು ಮೂಡಿಸಲು ಕಾನೂನು ಯಾತ್ರೆ
ಅರಸೀಕೆರೆ: ಹಿರಿಯ ನಾಗರಿಕರ ಹಿತಾಶಕ್ತಿ ಹಾಗೂ ಮಹಿಳೆಯರ ಸಂರಕ್ಷಣೆ ಕುರಿತಂತೆ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಾನೂನು ಸಾಕ್ಷರತಾ ರಥ ಯಾತ್ರೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಪಟ್ಟಣದ ಜೆಎಂಎಫ್ಸಿ ಪ್ರಧಾನ ನ್ಯಾಯಾಧೀಶ ದೇವಾನಂದ ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಮುದುಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಂಚಾರಿ ಜನತಾ ನ್ಯಾಯಾಲಯ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಮೇಲಿನ ಪ್ರೀತಿ ವಾತ್ಸಲ್ಯದಿಂದಾಗಿ ತಮ್ಮ ಆಸ್ತಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ನೀಡುತ್ತಾರೆ.
ಅದರೆ ಅಂತಹ ಮಕ್ಕಳು ತಮ್ಮ ವೃದ್ಧ ತಂದೆ-ತಾಯಿ ಅವರನ್ನು ಕೊನೆಯ ಹಂತದಲ್ಲಿ ಕಡೆಗಣಿಸುತ್ತಿರುವುದು ಕಾನೂನು ರೀತಿ ಅಪರಾಧವೇ ಆಗಿದ್ದು, ಅಂತಹ ನಿರ್ಲಕ್ಷ್ಯಕ್ಕೆ ಒಳಗಾದ ಪೋಷಕರು ಕಾನೂನಿನ ನೆರವು ಪಡೆದುಕೊಳ್ಳಬಹುದೆಂದರು.
ಅಂತೆಯೇ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ನಿಟ್ಟಿನಲ್ಲಿ ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳನ್ನು ತಡೆಯುವ ಪ್ರಯತ್ನದಲ್ಲಿ ಹಲವು ವಿಶೇಷ ಕಾನೂನುಗಳು ಜಾರಿಯಲ್ಲಿದ್ದು, ನೊಂದ ಮಹಿಳೆಯರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸಲಹಾ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಕಾನೂನು ಸಲಹೆಗಳನ್ನು ಪಡೆದುಕೊಳ್ಳಲು ಕೋರಿದರು.
ಸರ್ಕಾರಿ ಸಹಾಯಕ ಅಭಿಯೋಜಕಿ ಮಮತಾ ಮಾತನಾಡಿ, ನಾರಿಯೂ ಎಲ್ಲಿ ಪೂಜಿಸಲ್ಪಡುತಾಳೋ ಅಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆ ಎಂದು ಮನುಸ್ಮೃತಿಯಲ್ಲಿ ತಿಳಿಸಿದೆ. ಆದರೆ ಪುರಷ ಪ್ರಧಾನ ಈ ಕೌಟುಂಬಿಕ ವ್ಯವಸ್ಥೆಯಲ್ಲಿ ನೂರಾರು ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಒಳಗಾಗುತ್ತಿರುವುದು ವಿಪರ್ಯಾಸದ ಸಂಗತಿ.
ಪ್ರತಿನಿತ್ಯ ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ಆತ್ಯಾಚಾರ ಮತ್ತು ಕೊಲೆ ಇತ್ಯಾದಿ ಪ್ರಕರಣಗಳು ಸಾಮಾನ್ಯ ವಿಷಯವಾಗಿದೆ ಎಂದು ವಿಷಾದಿಸಿದರು.
ವಕೀಲ ನಟರಾಜ್, ನಾಗರಿಕರ ಹಕ್ಕುಗಳ ಹಾಗೂ ಸಿದ್ದಮಲ್ಲಪ್ಪ ಮಹಿಳಾ ಮತ್ತು ಮಕ್ಕಳು ಸಂರಕ್ಷಣೆ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಮುದುಡಿ ಗ್ರಾಪಂ ಅಧ್ಯಕ್ಷೆ ಮುಧುಬಾಯಿ ಅಧ್ಯಕ್ಷತೆ ವಹಿಸಿದ್ದರು.
ಪ್ರಭಾರಿ ಡಿವೈಎಸ್ಪಿ ಶೃತಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಎನ್.ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಸರ್ವೇಶ್, ವಕೀಲರಾದ ಕೆಂಪೇಗೌಡ, ಆದಿಹಳ್ಳಿ ಲೋಕೇಶ್, ವಿಜಯಕುಮಾರ್, ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಹಿರಿಯ ನ್ಯಾಯಾಧೀಶೆ ಸರಸ್ವತಿ ವಿ.ಕೋಸಂದರ್ ಕಾನೂನು ರಥ ಯಾತ್ರೆಗೆ ಹಸಿರು ನಿಶಾನೆ ತೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

