ಟಿಂಬರ್ ಉದ್ಯಮಕ್ಕೆ ಟ್ರಬಲ್
ಕ.ಪ್ರ. ವಾರ್ತೆ ಸಲೇಶಪುರ ಅ.10
ಈ ಭಾಗದ ಅವಿಭಾಜ್ಯ ಅಂಗವಾಗಿರುವ ಟಿಂಬರ್ ಉದ್ಯಮಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಲ್ಲಸಲ್ಲದ ಅಡಚಣೆ ಮಾಡುವ ಮೂಲಕ ಬೆಳೆಗಾರರಿಗೆ ವೃಥಾ ತೊಂದರೆ ನೀಡುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಬೆಳೆಗಾರರು ಹಿಡುವಳಿ ಜಮೀನಿನಲ್ಲಿ ಬೆಳೆದ ಮರಗಳನ್ನು ಕಟಾವು ಮಾಡಲು ಅವೈಜ್ಞಾನಿಕ ಕಾನೂನುಗಳನ್ನು ಮುಂದು ಮಾಡಿ ಸಲ್ಲದ ಕುಂಟು ನೆಪ ಹೇಳುತ್ತಾ ಊರಿನ ಆರ್ಥಿಕ ಸಮತೋಲನವನ್ನೆ ಬುಡ ಮೇಲು ಮಾಡಲಾಗುತ್ತಿದೆ.
ಸಕಲೇಶಪುರದಲ್ಲಿ ಅತಿಯಾದ ಮಳೆಯಿಂದಾಗಿ ಶೇ.100 ರಷ್ಟು ಮೆಣಸು ಬೆಳೆ ನಾಶವಾಗಿದ್ದರೆ, ಶೇ. 75 ಕಾಫಿ ಶೇ. 95 ಏಲಕ್ಕಿ, ಶೇ. 50 ರಷ್ಟು ಭತ್ತ ನಷ್ಟವಾಗಿದೆ. ಬೆಳೆಗಾರರಿಗೆ ಕಷ್ಟಕಾಲದಲ್ಲಿ ಆಸರೆಯಾಗಿರುವ ಟಿಂಬರ್ ಮರಗಳನ್ನು ಕಡಿಯಲು ಅರಣ್ಯಾಧಿಕಾರಿಗಳು ಪರಿಸರ ಸಂಕ್ಷಣೆಯ ಅವೈಜ್ಞಾನಿಕ ಕಥೆ ಹೇಳುತ್ತ ಎರಡು ವರ್ಷಗಳಿಂದ ಅನುಮತಿ ನೀಡದ ಪರಿಣಾಮ ಸಕಲೇಶಪುರ ತಾ. ಆರ್ಥಿಕವಾಗಿ ಅವನತಿಯತ್ತ ಸಾಗಿದೆ. ಇದರಿಂದ ಬೆಳೆಗಾರರು, ಲಾರಿ ಮಾಲೀಕರು, ಟೆಂಬರ್ ಉದ್ಯಮಿಗಳು, ಕಾರ್ಮಿಕರು ಕಂಗಾಲಾಗಿದ್ದಾರೆ. ಜನರ ಬಳಿ ಹಣ ಹರಿದಾಡದ ಪರಿಣಾಮ ಸಕಲೇಶಪುರ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಎಲ್ಲಾ ವಹಿವಾಟು ಸ್ತಬ್ಧಗೊಂಡಿವೆ. ಹೋಟೆಲ್, ಲಾಡ್ಜ್ಗಳು, ದಿನಸಿ, ಬಟ್ಟೆ ಅಂಗಡಿಗಳು, ವಾಹನ ಅವಲಂಬಿ ಉದ್ಯಮಿಗಳು, ಆಹಾರ ಪದಾರ್ಥ (ತರಕಾರಿ, ಮಾಂಸ) ವ್ಯಾಪಾರಿಗಳು, ಸಂಚಾರಿ ವ್ಯಾಪಾರಸ್ಥರು ನೆಲಕಚ್ಚಿದ್ದಾರೆ. ಹಣದ ಬೆಳೆಯಾಗಿ ಬೆಳೆಸಿದ್ದ ಮರಗಳು ಕಾಫಿ, ಏಲಕ್ಕಿ ತೋಟಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಪರಿಣಾಮ ತೋಟಗಳಲ್ಲಿ ನೆರಳು ಹೆಚ್ಚಾಗಿದ್ದು, ಬೆಳೆಗಳಿಗೆ ಬಾರಿ ನಷ್ಟವಾಗಿದೆ.
ಮನೆ ನಿರ್ಮಾಣದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಡಕಾಗಿದೆ. ವಿಶೇಷವಾಗಿ ಸಕಲೇಶಪುರದ ಹಿಂದುಳಿದ ಭಾಗಗಳಾಗಿರುವ ಹೆತ್ತೂರು, ಯಸಳೂರು ಹೋಬಳಿಗಳ ಜನರ ಬದುಕಿನ ನಿರ್ವಹಣೆ ತುಂಬಾ ಶೋಚನಿಯವಾಗಿದೆ.
ಮರ ಕಡಿಯಲು ಅನುಮತಿಗೆ ಮಂತ್ರಿಗಳಿಗೆ ಮನವಿ: ಮರ ಕಡಿಯಲು ಅನುಮತಿ ನೀಡುವಂತೆ ಬೆಳೆಗಾರರು ಮನವಿ ಮಾಡಿಕೊಂಡಿದ್ದಾರೆ. ಗುಂಪು ಗುಂಪಾಗಿ ರಾಜ್ಯ ಹಾಗೂ ದೇಶದ ಪ್ರಮುಖ ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಿ ಈ ಬಗ್ಗೆ ತಮ್ಮ ಅಳಲು ತೋಡಿ ಕೊಂಡಿದ್ದಾರೆ.
ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್.ಸಿ. ಮಹ ದೇವಪ್ಪ, ಕೇಂದ್ರ ಮಂತ್ರಿ ವೈ. ರಮೇಶ್, ವೀರಪ್ಪಮೊಯಿಲಿ ಮುಂತಾದವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ.
ಪಕ್ಕದ ಕೇರಳ ರಾಜ್ಯದಲ್ಲಿ 53 ಜಾತಿಯ ಮರ ಕಡಿಯಲು ಯಾವುದೇ ಪರವಾನಿಗೆ ಬೇಕಾಗಿಲ್ಲ. ಮಹಾರಾಷ್ಟ್ರ ಅಸ್ಸಾಂ ರಾಜ್ಯದಲ್ಲೂ ಮರ ಕಡಿಯಲು ಯಾವುದೇ ತೊಂದರೆಗಳಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲ ಸಲ್ಲದ ಅಡಚಣೆ ಇದ್ದು ರಾಜ್ಯದ ಅಧಿಕಾರಿಗಳು ಬೆಳೆಗಾರರ ಜೀವನದೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ. ಹಾಸನ ಜಿಲ್ಲಾಧಿಕಾರಿಯಾಗಿ ಬರುವವರು ಸಹ ಬೆಳೆಗಾರರಿಗೆ ಅನಾನುಕೂಲವಾಗುವ ರೀತಿಯಲ್ಲೆ ವರ್ತಿಸುತ್ತಾರೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಅಶ್ವತ್ ನಾರಾಯಣಗೌಡ ಹೊರತು ಪಡಿಸಿದರೆ ಎಲ್ಲಾ ಜಿಲ್ಲಾಧಿಕಾರಿಗಳು ಮೊದಲಿಗೆ ಮರ ಕಡಿಯಲು ಅನುಮತಿ ನಿರಾಕರಿಸಿ ನಂತರ ನೀಡಿದ್ದಾರೆ. ಈಚೆಗೆ ಬಂದಿರುವ ಜಿಲ್ಲಾಧಿಕಾರಿ ಅನ್ಬುಕುಮಾರ್ ಕಡತಗಳನ್ನು ಅರಣ್ಯ ಇಲಾಖೆಗೆ ನೀಡಲು ನಿರಾಕರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಅರಣ್ಯ ಇಲಾಖೆಗೆ ರವಾನಿಸಬೇಕು. ಸಕಲೇಶಪುರ ಜನರ ದುರಾದೃಷ್ಟವೇ ಇರಬೇಕು. ಅಧಿಕಾರಿಗಳು ಸಹ ರಾಜಕಾರಣಿಗಳಂತೆ ಅಧಿಕಾರ ಚಲಾಯಿಸಿ ಪ್ರಾದೇಶಿಕ ತಾರತಮ್ಯಕ್ಕೆ ಮುಂದಾಗುತ್ತಿದ್ದಾರೆ.
ಅವೈಜ್ಞಾನಿಕ ಆನೆ ಕಾರಿಡಾರ್ ಯೋಜನೆ: ಆನೆ ಕಾರಿಡಾರ್ ಎಂಬ ಗುಮ್ಮನಿಂದಾಗಿ ಹೆತ್ತೂರು ಮತ್ತು ಯಸಳೂರು ಪ್ರದೇಶಗಳಲ್ಲಿ ಹಿಡುವಳಿದಾರರು ತೋಟಗಳನ್ನು ಅಭಿವೃದ್ಧಿ ಪಡಿಸಲಾಗದೆ ಜಿಜ್ಞಾಸೆಯಲ್ಲಿದ್ದಾರೆ. ಸರಕಾರ ಹಿಡುವಳಿ ಭೂಮಿಯನ್ನು ಸೂಕ್ತ ಪರಿಹಾರ ನೀಡಿ ಖರೀದಿಸುವುದಾಗಿ ಭರವಸೆ ಮಾತ್ರ ನೀಡಿದೆ. ಪರಿಹಾರದ ಮೊತ್ತ ನಿಗದಿಪಡಿಸಿಲ್ಲ. ಏಲಕ್ಕಿ ಬೆಳೆಯಿಂದ ಕಂಗಲಾಗಿರುವ ಬೆಳೆಗಾರರು ಕಾಫಿ ಬೆಳೆಯತ್ತ ಭೂಮಿಯನ್ನು ಪರಿವರ್ತಿಸುತ್ತಿದ್ದಾರೆ. ಈ ಅವೈಜ್ಞಾನಿಕ ಆನೆ ಕಾರಿಡಾರ್ ಯೋಜನೆಯಿಂದಾಗಿ ಬೆಳೆಗಾರರು ತಲೆಯ ಮೇಲೆ ಕೈಹೊತ್ತಿ ಕುಳಿತು ಕೊಳ್ಳುವಂತಾಗಿದೆ.
1976ರಲ್ಲಿ ಹೈಕೋರ್ಟ್ ನೀಡಿದ ಆದೇಶ ಮನಸೋಇಚ್ಛೆ ಅರ್ಥೈಸಿಕೊಂಡಿರುವ ಅರಣ್ಯಾಧಿಕಾರಿಗಳು, ಇದನ್ನೆ ಆಧಾರವಾಗಿಟ್ಟು ಕೊಂಡು ಬೆಳೆಗಾರರಿಗೆ ಸಲ್ಲದ ತೊಂದರೆ ನೀಡುತ್ತಿದ್ದಾರೆ. ಹಿಂದಿನ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ಯೋಗೇಶ್ವರ್ 1976ರ ಆದೇಶವನ್ನು ಎತ್ತಿಹಿಡಿದರು. ದಟ್ಟವಾಗಿ ಬೆಳೆದಿದ್ದ ಕಾಡನ್ನು ಅರಣ್ಯ ಎಂದು ಇದರಲ್ಲಿ ಹಿಡುವಳಿದಾರ ಅಥವಾ ಸರಕಾರಿ ಎಂದು ನಮೂದಿಸಲು ಬರುವುದಿಲ್ಲ ಎಂಬ ವಾದವನ್ನು ಅಧಿಕಾರಿಗಳು ಮಂಡಿಸಿದರು.
ಹಿಡುವಳಿದಾರರು ಬೆಳೆದ ಮರಗಳನ್ನು ಅರಣ್ಯ ಎಂದು ಪರಿಗಣಿಸುವುದು ಸರಿಯಲ್ಲ. 2.5 ಹೆಕ್ಟೇರ್ ಪ್ರದೇಶದಲ್ಲಿ 750 ಕಾಫಿ ಗಿಡಗಳಿದ್ದರೆ ಕಾಡುಜಾತಿಯ ಮರಗಳನ್ನು ಕಡಿಯಲು ಅನುಮತಿಯ ಅಗತ್ಯವಿಲ್ಲ. 1976ರಲ್ಲಿ ಹೈಕೋರ್ಟ್ ನೀಡಿದ ಆದೇಶದಲ್ಲಿ ಅರಣ್ಯ ಅಧಿಕಾರಿಗಳಿಗೆ ಮರಗಳನ್ನು ಪರಿಶೀಲಿಸಿ ಅನುಮತಿ ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳುತ್ತಾರೆ.
ಸಿಲ್ವರ್ ಮರಗಳತ್ತ ಒಲವು: ಹಿಡುವಳಿ ಜಮೀನಿನಲ್ಲಿ ಮರ ಕಡಿದರೆ ಅರಣ್ಯ ನಾಶವಾಗುತ್ತದೆ ಎನ್ನುವ ಲೆಕ್ಕಾಚಾರ ಮೂರ್ಖರ ವಾದ ವಾಗಿದ್ದು, ಸಕಲೇಶಪುರ ಬೆಳೆಗಾರರು ಸ್ವಂತ ಪರಿಶ್ರಮದಿಂದ ಬೆಳೆದಷ್ಟು ಮರಗಳನ್ನು ಸರಕಾರ ಕೋಟಿ ಕೋಟಿ ಹಣ ಸುರಿದು ಬೆಳೆದಿಲ್ಲ. ಈ ಎಲ್ಲ ಸಂಕಷ್ಟಗಳೇ ಬೇಡೆನ್ನುವ ಲೆಕ್ಕಾಚಾರಕ್ಕೆ ಬಂದಿರುವ ಕೆಲವು ಬೆಳೆಗಾರರು ಸಿಲ್ವರ್ ಮರಗಳತ್ತ ಒಲವು ತೋರುತ್ತಿದ್ದಾರೆ. ಇದರಿಂದ ಪರಿಸರಕ್ಕೆ ಭಾರಿ ಹಾನಿಯಾಗುತ್ತಿದ್ದು, ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿದೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳು ಭವಿಷ್ಯದಲ್ಲಿ ಹೊಣೆಗಾರರಾಗಲಿದ್ದಾರೆ. ಸರಕಾರವೇ ಬೆಳೆಗಾರರ ಮನೆ ಬಾಗಿಲಿಗೆ ಹೋಗಿ ಕಾಡು ಜಾತಿಯ ಮರ ಬೆಳೆಯಿರಿ ಎಂದವರು ಬೆಳೆಗಾರರ ಸಂಕಷ್ಟ ನಿವಾರಿಸಲು ಬಾರದೇ ಇರುವುದು ವಿಪರ್ಯಾಸ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

