ಯುಪಿಎ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ
ಕನ್ನಡಪ್ರಭ ವಾರ್ತೆ ಹಾಸನ ಅ. 10
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಜನತೆ ಅಗತ್ಯ ವಸ್ತುಗಳ, ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರು, ಜನಸಾಮಾನ್ಯರು ಜೀವನ ನಡೆಸುವುದೇ ಬಹು ಕಠಿಣವಾಗುತ್ತಿದೆ. ಅವರು ನಿಸ್ಸಾಯಕರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಲೇ ಇದೆ ಎಂದು ಸಿಪಿಎಂ ಜಿಲ್ಲಾ ಮುಖಂಡ ಧರ್ಮೇಶ್ ಟೀಕಿಸಿದರು.
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದ ಸಿಪಿಎಂ ಪ್ರಚಾರಾಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೃಷಿ ಭೂಮಿ ಹೆಚ್ಚಾಗಿ ಕಾರ್ಪೋರೇಟುಗಳ, ಗಣಿ ಕಂಪೆನಿಗಳ ಮತ್ತು ರಿಯಲ್ ಎಸ್ಟೇಟ್ಕೋರರ ವಶವಾಗುತ್ತಿದೆ ಎಂದು ಹೇಳಿದರು.
ಎನ್ಎಸ್ಎಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಜನವರಿ 2010 ರಿಂದ ಜನವರಿ 2012ರ ನಡುವಿನ ಎರಡು ವರ್ಷಗಳಲ್ಲಿ ನಿರುದ್ಯೋಗ ಶೇಕಡಾ 10.2ರಷ್ಟು ಹೆಚ್ಚಾಗಿದೆ. 5 ವರ್ಷ ಒಳಗಿನ ಮಕ್ಕಳಲ್ಲಿ ಶೇಕಡಾ 40ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿವೆ. 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಪೈಕಿ ಕೇವಲ ಶೇ. 16ರಷ್ಟು ಮಕ್ಕಳು ಮಾತ್ರ 12ನೇ ತರಗತಿಗೆ ತಲುಪುತ್ತವೆ. ಔಷಧಿಗಳು ಮತ್ತು ಆರೋಗ್ಯ ಸೌಲಭ್ಯಗಳು ಸಾಮಾನ್ಯ ಜನರ ಕೈಗೆಟುಕದಂತಾಗಿವೆ ಎಂದು ಹೇಳಿದರು.
ಕೇಂದ್ರ ಕಾಂಗ್ರೆಸ್ ಸರ್ಕಾರದ ಔದಾರ್ಯ: ಬಜೆಟ್ನಲ್ಲಿ ಕಾರ್ಪೋರೇಟುಗಳಿಗೆ ಮತ್ತು ಸಿರಿವಂತರಿಗೆ 5 ಲಕ್ಷ ಕೋಟಿ ರು.ಗಳಷ್ಟು ತೆರಿಗೆ ರಿಯಾಯ್ತಿ ನೀಡಿ ಕೇಂದ್ರ ಕಾಂಗ್ರೆಸ್ ಸರ್ಕಾರ ಔದಾರ್ಯ ಮೆರೆದಿದೆ.
ಪೆಟ್ರೋಲಿಯಂ ಉತ್ಪನ್ನ ಹಾಗೂ ರಸಗೊಬ್ಬರಗಳ ಸಬ್ಸಿಡಿಗಳನ್ನು ಕಡಿತಮಾಡಿದೆ. ಶ್ರೀಮಂತರಿಗೆ ರಿಯಾಯ್ತಿಗಳ ಕೊಡುಗೆ. ಬಡವರಿಗೆ ಸೌಲಭ್ಯಗಳ ಕಡಿತದ ಶಿಕ್ಷೆಯಾಗದಿದೆ. ಜನತೆಯ ಹಿತವನ್ನು ಕಡೆಗಣಿಸಿ ವಿದೇಶಿ ಹಣಕಾಸು ಬಂಡವಾಳವನ್ನು ಸಂತುಷ್ಟಗೊಳಿಸುವುದೇ ಕೇಂದ್ರ ಯುಪಿಎ ಸರ್ಕಾರದ ಆದ್ಯತೆಯಾಗಿದೆ ಎಂದು ಟೀಕಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್.ನವೀನ್ಕುಮಾರ್ ಮಾತನಾಡಿ, ರಾಜ್ಯದ ಜನತೆ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ದುರಾಡಳಿತ ತಿರಸ್ಕರಿಸಿ ಅನಿವಾರ್ಯವಾಗಿ, ಬೇರೆ ಪರ್ಯಾಯವನ್ನು ಕಂಡುಕೊಳ್ಳಲಾಗದೆ ಭ್ರಷ್ಟ ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಹಲವು ಒಳ ವೈರುಧ್ಯಗಳಿಂದ ನರಳುತ್ತಿದ್ದರೂ, ಮುಂಬರುವ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಜನಾಕರ್ಷಕ ಯೋಜನೆಗಳನ್ನು ಜಾರಿಗೆ ತರಲು ಹೊರಟಿದೆ ಎಂದು ದೂರಿದರು.
ಲಕ್ಷಾಂತರ ಸಣ್ಣ ವ್ಯಾಪಾರಸ್ಥರು ಮತ್ತು ಅವರ ಅವಲಂಬಿತರನ್ನು ಬೀದಿ ಪಾಲು ಮಾಡಲಿರುವ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಲಾಭಕೋರ ಕಾರ್ಪೋರೇಟ್ ಕಂಪೆನಿಗಳನ್ನು ಆಹ್ವಾನಿಸಿ, ಅವರಿಗೆ ನ್ಯಾಯಬಾಹಿರ ರಿಯಾಯ್ತಿಗಳನ್ನು ನೀಡಿ ಅವರು ತಮ್ಮ ಲಾಭಕ್ಕಾಗಿ ಇಲ್ಲಿ ಬಂಡವಾಳ ಹೂಡುವಂತೆ ಮಾಡಲು ಸರ್ಕಾರ ತುದಿಗಾಲ ಮೇಲೆ ನಿಂತಿದೆ ಎಂದರು.
145ಕ್ಕೂ ಹೆಚ್ಚು ಹೋಬಳಿಗಳಲ್ಲಿ ಭೀಕರ ಬರ: 145ಕ್ಕೂ ಹೆಚ್ಚು ಹೋಬಳಿಗಳಲ್ಲಿ ಭೀಕರ ಬರ ಆವರಿಸಿಕೊಂಡಿದ್ದು ಪರಿಹಾರಕ್ಕಾಗಿ, ಪರಿಹಾರ ಕಾಮಗಾರಿಗಳಿಗಾಗಿ, ಕುಡಿಯುವ ನೀರಿಗಾಗಿ ಆದ್ಯತೆಯ ಮೇಲೆ ಹೆಚ್ಚಿನ ಹಣವನ್ನು ಒದಗಿಸಲು ಸರ್ಕಾರ ಮುಂದಾಗಿಲ್ಲ. ರಾಜ್ಯದ ಸಂಪತ್ತನ್ನು ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ಕಾರ್ಮಿಕರು ಮುಖ್ಯವಾಗಿ ಅಸಂಘಟಿತ ವಲಯದ ಕಾರ್ಮಿಕ ನೌಕರರಿಗೆ ಜೀವನಾವಶ್ಯಕ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಯಾವುದೇ ಯೋಜನೆ ಈ ಸರ್ಕಾರಕ್ಕೆ ಇದ್ದಂತೆ ಕಾಣುವುದಿಲ್ಲ ಎಂದು ಟೀಕಿಸಿದರು.
ಮುಂದಿನ ಲೋಕಸಭಾ ಚುನಾವಣೆಗೆ ತಮ್ಮ ನಾಯಕನೆಂದು ಬಿಜೆಪಿ ಬಿಂಬಿಸಲು ಹೊರಟಿರುವ ನರೇಂದ್ರ ಮೋದಿ ಪ್ರತಿಗಾಮಿ ಮಿಶ್ರಣದ ಸಂಕೇತವಾಗಿದ್ದಾರೆ. ಕಾರ್ಪೋರೇಟ್ ಕಂಪನಿಗಳು ಮತ್ತು ಕೆಲ ಮಾಧ್ಯಮಗಳು ಮೋದಿಯನ್ನು ಹಾಡಿ ಹೋಗಳುತ್ತಿರಬಹುದು. ಆದರೆ ಅವರಿಂದ ಬಡಜನರ, ಆದಿವಾಸಿಗಳ ದುಸ್ಥಿತಿ ಮರೆಮಾಚಲು ಸಾಧ್ಯವಿಲ್ಲ ಹೇಳಿದರು.
ಬಿಜೆಪಿ ಎಂದಿಗೂ ಕಾಂಗ್ರೆಸಿಗೆ ಪರ್ಯಾಯವಲ್ಲ: ಕಾರ್ಯಕ್ರಮ ಮತ್ತು ಧೋರಣೆಗಳ ಆಧಾರದಲ್ಲಿ ಬಿಜೆಪಿ ಎಂದಿಗೂ ಕಾಂಗ್ರೆಸಿಗೆ ಪರ್ಯಾಯವನ್ನು ಒದಗಿಸಲಾರದು. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅದೇ ದಿವಾಳಿಕೋರ ನವಉದಾರೀಕರಣ ಧೋರಣೆಗಳನ್ನು ಅದು ಜಾರಿ ಮಾಡಿತ್ತು. ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿಯೂ, ಈಗ ಗುಜರಾತ್ನಲ್ಲಿ ನಡೆಯುತ್ತಿರುವಂತೆ, ಬಿಜೆಪಿ ರಾಜ್ಯ ಸರ್ಕಾರಗಳು ಅದೇ ಉದಾರೀಕರಣದ ಸುಧಾರಣೆಗಳಿಗೆ ಬದ್ಧವಾಗಿ ಕೆಲಸಮಾಡಿವೆ. ಆದ್ದರಿಂದ ಬಿಜೆಪಿ ವಿರುದ್ಧ ಹೋರಾಡಿ ಅದನ್ನು ಹಿಮ್ಮೆಟ್ಟಿಸಬೇಕಾಗಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯುವುದು ಎಲ್ಲ ದೇಶಪ್ರೇಮಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಕರ್ತವ್ಯವಾಗಿದೆ ಎಂದು ನುಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ ಮಾತನಾಡಿ, ದೇಶದ ಒಕ್ಕೂಟ ವ್ಯವಸ್ಥೆ ಇನ್ನೂ ಹೆಚ್ಚು ಬಲಗೊಳ್ಳಬೇಕಾಗಿದೆ.
ಕೇಂದ್ರದಲ್ಲೇ ಇರುವ ಎಲ್ಲ ಅಧಿಕಾರದ ಮತ್ತು ಸಂಪನ್ಮೂಲಗಳ ಕೇಂದ್ರೀಕರಣ ಕಡಿಮೆಯಾಗಬೇಕು. ಸಂಪನ್ಮೂಲಗಳ ವಿತರಣೆಯ ವಿಷಯದಲ್ಲಿ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಎಡಪಕ್ಷಗಳು, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಂತಹ ಒಂದು ಪರ್ಯಾಯ ಧೋರಣೆಗಳ ವೇದಿಕೆಯನ್ನು ರೂಪಿಸಿಕೊಂಡಿವೆ ಎಂದು ತಿಳಿಸಿದರು.
ಸಿಪಿಎಂ ಸ್ಥಳೀಯ ಮುಖಂಡ ರವಿ ಕೆಲವತ್ತಿ ಸ್ವಾಗತಿಸಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಾವೆಲ್ ಹಮೀದ್, ವಸಂತಕುಮಾರ್, ಅರವಿಂದ್, ಪ್ರಸನ್ನ, ಮಂಜುನಾಥ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

