ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ
ಚನ್ನರಾಯಪಟ್ಟಣ: ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಯಪ್ರಕಾಶ್ ನಾರಾಯಣ್ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವ ಜನತೆ ಹಾಗೂ ಆರಕ್ಷಕರ ಪಾತ್ರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ ಕೆಲ ಠಾಣೆಗಳಲ್ಲಿ ನ್ಯಾಯ ಪಂಚಾಯಿತಿ ಹಾಗೂ ರಾಜಿ ಕಾರ್ಯಗಳು ನಡೆಯುತ್ತಿವೆ. ಹಾಗೂ ದೂರು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಎಂಬ ದೂರು ಬಂದ ನಂತರ ಜಿಲ್ಲೆಯ 29 ಠಾಣೆಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗು ತ್ತಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿಯೇ ಕುಳಿತು ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ನಡೆಯುವ ಎಲ್ಲಾ ವ್ಯವಹಾರಗಳನ್ನು ವೀಕ್ಷಿಸಬಹುದಲ್ಲದೆ, ತಮ್ಮ ಸಿಬ್ಬಂದಿಗಳು ನಡೆಸುವ ಕರ್ತವ್ಯವನ್ನು ವೀಕ್ಷಿಸಬಹುದಾಗಿದೆ ಎಂದರು.
ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಲು ಠಾಣೆಗೆ ಬಂದ ಸಂದರ್ಭದಲ್ಲಿ ಮೊದಲು ದೂರು ದಾಖಲು ಆ ನಂತರದಲ್ಲಿ ನ್ಯಾಯ ಅನ್ಯಾಯದ ಬಗ್ಗೆ ಚರ್ಚಿಸಿ ತಿಳಿದು ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ಠಾಣೆಯ ಸಬ್ಇನ್ಸ್ಪೆಕ್ಟರ್ಗಳಿಗೆ ತಿಳಿಸಲಾಗಿದೆ. ಸಾರ್ವಜನಿಕರು ನೀಡುವ ದೂರನ್ನು ತೆಗೆದುಕೊಳ್ಳದಿದ್ದರೆ ನೇರವಾಗಿ ತಮ್ಮ ಇಲಾಖೆ ತೆರೆದಿರುವ ಸಹಾಯವಾಣಿಯನ್ನು ಸಂಪರ್ಕಿಸಬೇಕಾಗಿ ಕೋರಿದರು.
ಸಾರ್ವಜನಿಕವಾಗಿ ಯಾವುದೇ ಅಪರಾದ ನಡೆದರೂ ಅದನ್ನು ನೇರವಾಗಿ ಅಥವಾ ತಮ್ಮ ಸಹಾಯವಾಣಿಗೆ ತಿಳಿಸಿದರೆ ತಾವು ಅದಕ್ಕೆ ತಕ್ಕ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಹೆಚ್ಚು ಅಪರಾಧಗಳು ನಡೆಯುತ್ತಿರುವ ಬಗ್ಗೆ ತಮಗೆ ಅರಿವಿದ್ದು, ಮುಂದಿನ ದಿನಗಳಲ್ಲಿ ಅಪರಾಧಗಳಿಗೆ ಕಡಿವಾಣ ಹಾಕುವುದು ತಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ನುಡಿದರು.
ತಾಲೂಕಿನ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ಎನ್ಸಿಸಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಪೋಲಿಸರಿಗೆ ನೀಡುವ ಎಲ್ಲಾ ತರಬೇತಿ ನೀಡಿ ಅವರನ್ನು ಸಂಚಾರಿ ನಿಯಂತ್ರಣ ಮಾಡಲು ನಿಯೋಜಿಸಲಾಗುವುದು. ಈ ನಿಟ್ಟಿನಲ್ಲಿ ನ.8ರಂದು ಪಟ್ಟಣದಲ್ಲಿ ಸಂಚಾರಿ ವಾರ್ಡ್ಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.
ತಮ್ಮ ಸಿಬ್ಬಂದಿ ಯಾರೇ ಇರಬಹುದು ಅವರು ಸಾರ್ವಜನಿಕವಾಗಿ ಅಥವಾ ಬೇರೆ ರೀತಿಯಲ್ಲಿ ಲಂಚ ನೀಡುವಂತೆ ಕೇಳಿದರೆ ತಮಗಾಗಲಿ ಅಥವಾ ಡಿಎಸ್ಪಿ ಅವರ ಗಮನಕ್ಕೆ ತಂದರೆ ಅದು ಸಾಬಿತಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಯುವಕರು ದಾರಿ ತಪ್ಪಬಾರದು... ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವ ಸಮುದಾಯದ ಜವಬ್ದಾರಿ ಹೆಚ್ಚಾಗಿದ್ದು, ಅಪರಾಧಗಳನ್ನು ಮಾಡುತ್ತಿರುವಲ್ಲಿಯೂ ಇವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಂದೆ ತಾಯಿಗಳು ಹಾಗೂ ಗುರುವೃದ ತಿದ್ದುವಲ್ಲಿ ಮುಂದಾಗಬಹುದಾಗಿದೆ ಎಂದು ತಿಳಿಸಿದರು.
ಸಮಾಜದ ಭ್ರಷ್ಟಾಚಾರಿಗಳನ್ನು ಬದಲಿಸುವುದು ಕಷ್ಟಕರವಾಗಿದೆ. ಆದರೆ ಯುವ ಸಮುದಾಯ ತಾವು ಸೇವೆಗೆ ಸೇರಿದ ದಿನದಿಂದ ಭ್ರಷ್ಟಾಚಾರವನ್ನು ವಿರೋಧಿಸಿ ಇಲಾಖೆ ನೀಡುವ ವೇತನಕ್ಕೆ ಸೀಮಿತವಾಗಿ ಜೀವನ ಸಾಗಿಸಿದಾಗಿ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವಲ್ಲಿ ಸಮಯವನ್ನು ಕಳೆಯುವಲ್ಲಿ ಮುಂದಾಗುತ್ತಿದ್ದು, ಅದನ್ನು ಮರೆತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ವ್ಯಕ್ತಿಯ ಚರಿತ್ರೆಯನ್ನು ಓದಿ ಅದರಿಂದ ತಿಳಿದು ತಾವು ಯಾವುದಾದರೊಂದು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ತಹಸೀಲ್ದಾರ್ ನಾಗರಾಜ್ ಮಾತನಾಡಿ ದೇಶದಲ್ಲಿ ಯುವ ಸಮುದಾಯದಿಂದಲೇ ಶೇ.75 ಕ್ಕೂ ಹೆಚ್ಚು ಅಪರಾಧ ನಡೆಯುತ್ತಿರುವ ವರದಿಯಾಗಿದ್ದು, ಯುವ ಸಮುದಾಯ ರಕ್ಷಣಾ ಇಲಾಖೆ ಜತೆ ಕೈಜೋಡಿಸಿದರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.
ಗುರುವನ್ನು ಪೂಜ್ಯ ಭಾವನೆಯಲ್ಲಿ ನೋಡುವುದು ಇಂದು ಮರೆಯಾಗಿದ್ದು, ಅವರ ಹೇಳಿದ ಪಾಠವನ್ನು ಕಲಿಯದೆ ಅವರನ್ನೇ ಕೊಲೆ ಮಾಡುವ ಮಟ್ಟಕ್ಕೆ ಇಂದಿನ ಯುವಕರು ಬಂದಿರುವುದು ವಿಷಾದನೀಯ ಎಂದು ತಿಳಿಸಿದರು.
ಯುವಕರು ತಮ್ಮದೇ ಆದ ಗುರಿಯನ್ನಿಟ್ಟುಕೊಂಡು ಸಮಾಜ ವಿರೋಧಿ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಶಪಥ ಮಾಡಿ ತಾವೊಬ್ಬ ನಾಯಕನಾಗಬೇಕೆಂಬ ಗುಣವನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜು ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಹೊಳೆನರಸೀಪುರ ಡಿಎಸ್ಪಿ ವಿನಾಯಕ ರಾವ್ ಪಾಟೀಲ್, ಸರ್ಕಲ್ ಇನ್ಸ್ಪೆಕ್ಟರ್ ಶೈಲೇಂದ್ರ, ಎಸ್ಐ ರೇಖಾಬಾಯಿ, ನಾಗರಾಜು ಕಾಲೇಜು ಪ್ರಾಂಶುಪಾಲ ಸೋಮಸುಂದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

