ಹಾಸನ

ರೇಷ್ಮೆ ಬೆಳೆಗಾರರ ಅಧ್ಯಯನ ಪ್ರವಾಸಕ್ಕೆ ಚಾಲನೆ

Published On :

ಹೊಳೆನರಸೀಪುರ: ಜಿಲ್ಲಾ ಪಂಚಾಯ್ತಿ ಹಾಗೂ ರೇಷ್ಮೆ ಇಲಾಖೆಯಿಂದ ತಾಲೂಕಿನಿಂದ ಆಯ್ಕೆ ಮಾಡಲಾದ 50 ರೇಷ್ಮೆ ಬೆಳೆಗಾರರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಅಧ್ಯಯನ ಪ್ರವಾಸಕ್ಕೆ ಜಿಪಂ ಸದಸ್ಯೆ ಗೌರಮ್ಮ ಚಾಲನೆ ನೀಡಿದರು.
ನೋಡಿ ಕಲಿಯುವುದು ಹಾಗೂ ಮಾಡಿ ತಿಳಿಯುವುದು ಮನುಷ್ಯನ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಾಗಿದ್ದು, ಇದರಿಂದಾಗಿ ರೈತರು ಆರ್ಥಿಕವಾಗಿ ಪ್ರಬಲರಾಗಲು ಹಾಗೂ ಜ್ಞಾನ ಹೊಂದಲು ಈ ರೀತಿಯ ಅಧ್ಯಯನ ಪ್ರವಾಸಗಳು ಸಹಕಾರಿಯಾಗಿದೆ ಎಂದು ರೇಷ್ಮೆ ತಾಂತ್ರಿಕ ಸೇವಾ ಕೇಂದ್ರದ ಪ್ರಭಾರಿ ರೇಷ್ಮೆ ಸಹಾಯಕ ನಿರ್ದೇಶಕ ಕೈಲಾಸಮೂರ್ತಿ ತಿಳಿಸಿದರು.
ರೇಷ್ಮೆ ಬೆಳೆಗಾರರು ಹಾಗೂ ಪ್ರಗತಿಪರ ರೈತರನ್ನು ಈ ಪ್ರವಾಸದಲ್ಲಿ ತಾಲೂಕಿನಿಂದ ಕರೆದೊಯ್ದಿರುವ ರೇಷ್ಮೆ ಬೆಳೆಗಾರರಿಗೆ ಪರಿಚಯಿಸಿ ಅವರು ಅಳವಡಿಸಿರುವ ಹೊಸ ತಂತ್ರಜ್ಞಾನಗಳನ್ನು ನೋಡಿ ಕಲಿತು ಕೃಷಿಯಲ್ಲಿಯೂ ಬಳಕೆ ಮಾಡುವ ಮೂಲಕ ಹೆಚ್ಚಿನ ಪ್ರತಿ ಸಾಧಿಸಲು ಹಾಗೂ ರೇಷ್ಮೆ ಬೆಳೆಯಲ್ಲಿ ಅಧಿಕ ಇಳುವರಿಯನ್ನು ಪಡೆಯಲು ಈ ಪ್ರವಾಸ ರೈತರಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಕೈಲಾಸಮೂರ್ತಿ ಅವರು, ತಾಲೂಕಿನ ವಿವಿಧ ಗ್ರಾಮಗಳಿಂದ ಆಯ್ಕೆ ಮಾಡಲಾದ 50 ರೇಷ್ಮೆ ಬೆಳೆಗಾರರನ್ನು ಜಿಲ್ಲೆ ಹಾಗೂ ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿನ ಪ್ರಗತಿಪರ ರೇಷ್ಮೆ ಬೆಳೆಗಾರರನ್ನು ಭೇಟಿ ಮಾಡಿಸಲಾಗುವುದು ಎಂದರು.
ಎರಡು ದಿನಗಳ ಅಧ್ಯಯನ ಪ್ರವಾಸದಲ್ಲಿ ಮೈಸೂರು ಜಿಲ್ಲೆಯಲ್ಲಿನ ರೇಷ್ಮೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವೈಜ್ಞಾನಿಕ ತಂತ್ರಜ್ಞಾನಗಳ ಪರಿಚಯ, ರೇಷ್ಮೆ ಕೃಷಿಯಲ್ಲಿ ಯಾಂತ್ರೀಕರಣ, ಪ್ರಚಲಿತ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲಾಗುವುದು ಎಂದು ತಿಳಿಸಿದ ಅವರು, ಜೆ.ಎಸ್.ಎಸ್ ರೇಷ್ಮೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಮೈಸೂರಿನಲ್ಲಿರುವ ಪ್ರಗತಿಪರ ದ್ವಿತಳಿ ಬಿತ್ತನೆ ಬೆಳೆಗಾರರನ್ನು ಭೇಟಿ ಮಾಡಿಸಲಾಗುವುದು. ಅಲ್ಲದೆ ರೇಷ್ಮೆ ತಂತ್ರಜ್ಞಾನಗಳ ಕುರಿತಾದ ಪರಿಚಯ, ಹಿಪ್ಪುನೇರಳೆ ಕೃಷಿಯಲ್ಲಿ ಅಳವಡಿಸಿರುವ ಹೊಸ ಬೇಸಾಯ ಕ್ರಮಗಳು, ಸಾವಯವ ಬೇಸಾಯ ಕ್ರಮಗಳು, ದ್ವಿತಳಿ ಬಿತ್ತನೆ ಗೂಡುಗಳ ಉತ್ಪಾದನೆಯ ವೈಜ್ಞಾನಿಕ ಕ್ರಮಗಳು, ವೈಜ್ಞಾನಿಕವಾಗಿ ಚಾಕಿ ಸಾಕಾಣಿಕಾ ಕೇಂದ್ರಗಳ ನಿರ್ವಹಣೆಯ ಕುರಿತಂತೆಯೂ ಈ ಸಂದರ್ಭದಲ್ಲಿ ರೈತರಿಗೆ ಪರಿಚಯಿಸಲಾಗುವುದು ಎಂದು ರೇಷ್ಮೆ ಅಧಿಕಾರಿ ಕೈಲಾಸಮೂರ್ತಿ ರೇಷ್ಮೆ ಅಧ್ಯಯನದ ಪ್ರವಾಸದ ಕುರಿತಾಗಿ ವಿವರ ನೀಡಿದರು.
ಈ ಸಂದರ್ಭದಲ್ಲಿ ರೇಷ್ಮೆ ನಿರೀಕ್ಷಕ ಮಲ್ಲೇಶಯ್ಯ, ರೇಷ್ಮೆ ಪ್ರದರ್ಶಕ ಪ್ರಸನ್ನ ಹಾಗೂ ಇಲಾಖೆಯ ಸಿಬ್ಬಂದಿ ಪುಟ್ಟರಾಜಶೆಟ್ಟಿ, ಪರಮೇಶ್, ದೊಡ್ಡಯ್ಯ ತಂಡದ ಜೊತೆಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.