ಹಾಸನ

ಸಮಾನ ಮನಸ್ಕರ ಒಗ್ಗೂಡಿಸುವ ಉದ್ದೇಶ: ಡಾ. ಆಳ್ವಾ

Published On :

ಜಾವಗಲ್: ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಗ್ರಾಮೀಣ ಕೇಂದ್ರ ಜಾವಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ಇತ್ತೀಚೆಗೆ ಆಳ್ವಾಸ್ ಸಾಂಸ್ಕೃತಿಕ ವೈಭವ ದೇಶಿಕಲೆಯು ಸಹಸ್ರಾರು ಸಭಿಕರ ಮನಸೂರೆಗೊಂಡಿತು.
 ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಸ್ವಲ್ಪ ಅಡಚಣೆಯಾದರೂ 2 ಗಂಟೆ ಕಾಲ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮಣಿಪುರಿ, ಶ್ರೀಲಂಕಾ, ಒರಿಸ್ಸಾ, ಕೇರಳ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ 140ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಪ್ರದರ್ಶನ ಅಚ್ಚುಕಟ್ಟಾಗಿ ಮೂಡಿಬಂತು.  ನೃತ್ಯ ಪ್ರದರ್ಶನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಧರಿಸಿದ್ದ ವೇಷಭೂಷಣ ಕಲಾರಸಿಕರ ಮನದಾಳದಲ್ಲಿ ಶಾಶ್ವತವಾಗಿ ನೆಲೆಯೂರಿತು.
 ಮೋಹಿನಿಯಾಟ್ಟಮ್, ಆಂಧ್ರದ ಜನಪದ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ, ರಾಜ್ಯದ ಬಡಗುತಿಟ್ಟು ಯಕ್ಷಗಾನ ಪ್ರಯೋಗ-ದಶಾವತಾರ, ಕಥಕ್, ಸಮ್ಮೋಹನಮ್, ಪಶ್ಚಿಮಬಂಗಾಳದ ಪುರುಲಿಯಾಸಿಂಹದ ಭೇಟೆ, ಮಣಿಪುರಿಸ್ಟಿಕ್ ಡ್ಯಾನ್ಸ್, ಮಣಿಪುರಿದೋಲ್ ಚಲಮ್ ನೃತ್ಯಗಳು ಪ್ರೇಕ್ಷಕರ ಮನಸೆಳೆದವು.
 ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ಶಾಸಕ ರುದ್ರೇಶ್ಗೌಡ ಕಾರ್ಯಕ್ರಮ ಉದ್ಘಾಟಿಸಿ,  ಗ್ರಾಮೀಣ ಪ್ರದೇಶ ಜಾವಗಲ್ನಲ್ಲಿ ಆಳ್ವಾಸ್ ವೈಭವ ಏರ್ಪಡಿಸಿರುವುದಕ್ಕೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳಲ್ಲಿ ದೇಶಿಕಲೆ, ಸಾಹಿತ್ಯ, ಸಂಸ್ಕೃತಿ ಮೂಡಿಸುವಲ್ಲಿ ಸಂಸ್ಥೆಯು ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು.
 ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಮಾತನಾಡಿ,  ವಿಶ್ವಾದ್ಯಂತ ಕನ್ನಡನುಡಿ, ಕಲೆ, ಸಂಸ್ಕೃತಿ  ಬಗ್ಗೆ ಆಸಕ್ತಿ ಹೊಂದಿದ ಸಮಾನಮನಸ್ಕರನ್ನು ಒಗ್ಗೂಡಿಸುವುದೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
 ಕಾರ್ಯಕ್ರಮ ನಿರ್ವಾಹಕ ಉದಯ್ ಮಂಜುನಾಥ್, ಜಾವಗಲ್ ಘಟಕದ ಗೌರವಾಧ್ಯಕ್ಷ ಜೆ.ಆರ್. ವಸಂತಕುಮಾರ್, ಜೆ.ಎಚ್.ಪ್ರಸನ್ನಕುಮಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಎಪಿಎಂಸಿ ನಿರ್ದೇಶಕ ಕೆ.ಸಿ ನಾಗರಾಜು, ಎನ್.ಬಿ. ರಾಜಶೇಖರ್, ತಾಪಂ ಮಾಜಿ ಸದಸ್ಯ ಜೆ.ಕೆ. ಸಿದ್ದೇಗೌಡ, ಬೆಳುವಳ್ಳಿ ಮಹದೇವಪ್ಪ, ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಲಲಿತಾ ಜಯಣ್ಣ, ಘಟಕ ಅಧ್ಯಕ್ಷ ಜೆ.ಎಂ ಅನಿಲ್ಕುಮಾರ್, ಕೃಷ್ಣಮೂರ್ತಿ ರಂಗ ನಿರ್ದೇಶಕ ಜೀವನ್ ರಾಮು ಲೀಲಾಧರ್ ತಣ್ಣೀರುಬಾವಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.