ಹಾಸನ

24ಕ್ಕೆ ಹಾಸನಾಂಬೆ ದರ್ಶನ ಭಾಗ್ಯ

Published On :

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ನಗರದ ಪ್ರಸಿದ್ಧ ಶ್ರೀ ಹಾಸನಾಂಬ ದೇವಾಲಯದ ಬಾಗಿಲು ಅ.24 ರಂದು  ಮಧ್ಯಾಹ್ನ 12.30ಕ್ಕೆ ತೆರೆದು, ನ.5 ಮಧ್ಯಾಹ್ನ 12.30ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. 250 ರು. ಕೊಟ್ಟವರಿಗೆ ವಿಶೇಷ ದರ್ಶನದ ಅವಕಾಶವಿದೆ ಎಂದು ಶುಕ್ರವಾರ ಡಿಸಿ ಅನ್ಬುಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ವಿಶೇಷವೆಂದರೆ ತಮಿಳುನಾಡಿನ ದೇವಾಲಯಗಳಲ್ಲಿ ನೀಡುವಂತೆ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ಪುಳಿಯೊಗರೆ ಮತ್ತು ಪೊಂಗಲ್ ವಿತರಿಸಲಾಗುವುದು. ಲಾಡು ಎಂದಿನಂತೆ ಲಭ್ಯ. ಸುವ್ಯವಸ್ಥಿತವಾಗಿ ದರ್ಶನ ನಡೆಯಲು ಪೊಲೀಸ್, ಹೋಂಗಾರ್ಡ್,ಕಂದಾಯ ಇಲಾಖೆಯ 200 ಅಧಿಕಾರಿಗಳು ಕಾರ್ಯ ನಿರ್ವಹಿಸುವರು.
ಕಂಚಿನ ಕಳಸದಿಂದ ಕಂಗೊಳಿಸುವಂತಿಲ್ಲ:  ಈ ವರ್ಷವೂ ದೇವಾಲಯದ ರಾಜಗೋಪುರಗಳು ಕಂಚಿನ ಕಳಸದಿಂದ ಕಂಗೊಳಿಸುವಂತಿಲ್ಲ. ಇದಕ್ಕೆ ಕಾರಣ ರಾಜಗೋಪುರಗಳ ನಿರ್ಮಾಣ ಕಾಮಗಾರಿ ಅಪೂರ್ಣ ಮತ್ತು ಕಳಸಗಳ ಪ್ರತಿಷ್ಠಾಪನೆ ಸೂಕ್ತ ವೇಳೆ ಸಿಕ್ಕಿಲ್ಲ. ಹಾಗೆಯೇ ದೇವಾಲಯ ಸುತ್ತಲೂ ಇರುವ 9 ಮನೆಗಳನ್ನು ಸ್ಥಳಾಂತರಿಸಲು ಇನ್ನೂ 2 ವರ್ಷ ಬೇಕಾಗಿದೆ ಎಂಬುದು ಜಿಲ್ಲಾಡಳಿತದ ಹೇಳಿಕೆ. ಅ.25 ರಿಂದ  ನ.5 ರವರೆಗೆ  ಬೆಳಗ್ಗೆ  7 ರವರೆಗೆ  ಮಾತ್ರ ದೇವಿ  ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ. ಭಕ್ತಾದಿಗಳು ಯಾವುದೇ ತೊಂದರೆ ಇಲ್ಲದಂತೆ ತಾಯಿಯ ದರ್ಶನ ಮಾಡುವ ಬಗ್ಗೆ ಬೇಕಾದ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ದೇವಿ ದರ್ಶನದ ವೇಳಾಪಟ್ಟಿಯನ್ನು ಭಕ್ತರ ಗಮನಕ್ಕಾಗಿ ಬಸ್, ರೇಲ್ವೆ ನಿಲ್ದಾಣ, ಸಂತೆ ನಡೆಯುವ ಸ್ಥಳ  ಮುಂತಾದ ಪ್ರಮುಖ ಆಯಕಟ್ಟಿನ ಜಾಗದಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಮಂದಿ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ್ದರಿಂದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ದೇವಾಲಯ ಮುಂಬಾಗಿಲ ಪ್ರವೇಶ ದ್ವಾರದ ಬಳಿ, ದೇವಾಲಯ ಹಿಂಭಾಗ ವಿಶೇಷ ದರ್ಶನದ ಕ್ಯೂ ಹತ್ತಿರ ಹಾಗೂ ಟಿಕೆಟ್ ಕೌಂಟರ್ ಹತ್ತಿರ ಹೀಗೆ ಮೂರು ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
2 ಲಾಡು ಮತ್ತು ಕುಂಕುಮ ಪ್ರಸಾದ:  ಸುಗಮ ದರ್ಶನಕ್ಕಾಗಿ 250 ರು. ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ದರ್ಶನ  ಟಿಕೆಟ್ ಪಡೆದವರಿಗೆ 2 ಲಾಡು ಮತ್ತು ಕುಂಕುಮ ಪ್ರಸಾದ ನೀಡಲಾಗುವುದು ಎಂದು ಹೇಳಿದರು. ದರ್ಶನ ಮುಗಿಸಿದ ಭಕ್ತರಿಗೆ ಮಂಗಳಾರತಿ, ತೀರ್ಥ, ಹೂ, ಪ್ರಸಾದವ್ಯವಸ್ಥೆ ಸಹ ಏರ್ಪಡಿಸಲಾಗಿದೆ. ಈ ವರ್ಷದಿಂದ ಇಲಾಖಾ ವತಿಯಿಂದ ಭಕ್ತರಿಗೆ ದರ್ಶನದ ನಂತರ ಉಚಿತ ಪ್ರಸಾದ ವಿತರಣೆ ಪ್ರಾರಂಭಿಸಲಾಗುತ್ತಿದೆ. ಆಸಕ್ತ ದಾನಿಗಳು ಧವಸ ಧಾನ್ಯಗಳನ್ನು ನೀಡಬಹುದಾಗಿದೆ ಎಂದರು.
ಹಿಂದಿನ ವರ್ಷದಂತೆ ಈ ಬಾರಿಯೂ ಭಕ್ತರ ಹಿತದೃಷ್ಟಿಯಿಂದ ದೇಗುಲ ಆಯಾ ಕಟ್ಟಿನ ಜಾಗದಲ್ಲಿ 10 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಭಕ್ತರ ವಾಹನ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ವಸು ್ತಪ್ರದರ್ಶನ ಸ್ಥಳ ಮುನ್ಸಿಪಲ್ ಕಚೇರಿ ಬಳಿ, ಜಂಟಿ ನಿರ್ದೇಶಕರ ಕಚೇರಿ ಆವರಣ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರು ಮತ್ತು ವಯೋವೃದ್ಧರಿಗೆ  ವಿಶೇಷ ಕ್ಯೂನಲ್ಲಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಭಕ್ತರಿಗೆ ದರ್ಶನ ವೇಳೆ, ನೈವೇದ್ಯ ಪೂಜೆಗಾಗಿ ಬಾಗಿಲು ಮುಚ್ಚುವ ವೇಳೆ ಮತ್ತು ಕೊನೆಯ ದಿನ ಬಾಗಿಲು ಮುಚ್ಚುವ ವೇಳೆಯನ್ನು ಖಚಿತವಾಗಿ ತಿಳಿಸಲು ಸಂಬಂಧಪಟ್ಟ ಅರ್ಚಕರಿಗೆ  ಸೂಚಿಸಲಾಗಿದೆ. ಅರ್ಚಕರಿಂದ ಸ್ಪಷ್ಟ ಮಾಹಿತಿ ಪಡೆದು ದೇವಿ ದರ್ಶನದ ವೇಳೆ ನೈವೇದ್ಯಕ್ಕೆ ಬಾಗಿಲು ಮುಚ್ಚುವ ವೇಳೆ ಕೊನೆಯ ದಿನ ಬಾಗಿಲು  ಮುಚ್ಚುವ ವೇಳೆಯನ್ನು  ಭಕ್ತರ ಗಮನಕ್ಕಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ.
ನಿರಂತರ ವಿದ್ಯುತ್ ಸೌಲಭ್ಯ:  ಲೈಟ್, ವಿದ್ಯುತ್ ದೀಪಾಲಂಕಾರ, ಮೈಕ್, ಜನರೇಟರ್ ಬ್ಯಾರಿಕೇಡಿಂಗ್ ವ್ಯವಸ್ಥೆಯನ್ನು ಟೆಂಡರ್ ಮೂಲಕ ನೀಡುವ ಬಗ್ಗೆ ಪ್ರಸ್ತುತ ದೇವಾಲಯದ ಲೈಟಿಂಗ್ ವ್ಯವಸ್ಥೆ, ಮೈಕ್ ಹಾಗೂ ಬ್ಯಾರಿಕೇಡಿಂಗ್ ಸೌಕರ್ಯವನ್ನು  ಟೆಂಡರ್ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಮಹೋತ್ಸವ ಸಂದರ್ಭದಲ್ಲಿ ನಿರಂತರವಾಗಿ  ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸಹ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಾಲಯ ವತಿಯಿಂದ ಸೂಕ್ತ ದರ ನಿಗದಿಪಡಿಸಿ ಅಧಿಕೃತ ಚೀಟಿಯನ್ನು ಮುದ್ರಿಸಿ ಚಪ್ಪಲಿ ನೋಡಿಕೊಳ್ಳುವ  ಜವಾಬ್ದಾರಿಯನ್ನು ಯಾರಿಗಾದರೂ ಕಮೀಷನ್ ಆಧಾರದ ಮೇಲೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ.
4 ದೊಡ್ಡ ಕಾಣಿಕೆ ಹುಂಡಿ:   ದೇವಾಲಯದಲ್ಲಿ ಈ ವರ್ಷದಿಂದ  ಹೊಸದಾಗಿ 4 ದೊಡ್ಡ ಕಾಣಿಕೆ ಹುಂಡಿ ಹಾಗೂ ಭಕ್ತರಿಂದ ಕಾಣಿಕೆ ರೂಪದಲ್ಲಿ ಅಕ್ಕಿ, ಎಣ್ಣೆ ಇತರೆ ಆಹಾರ ಸಾಮಾಗ್ರಿಗಳು ಹಾಗೂ ಸೀರೆ ಮುಂತಾದ ವಸ್ತ್ರಗಳನ್ನು  ಸಂಗ್ರಹಿಸಲು 5  ಕಂಟೈನರ್ಗಳನ್ನು ಇಡಲಾಗುತ್ತಿದೆ. ಭಕ್ತರ ಹರಕೆ ಸ್ವೀಕರಿಸಲು ಕಂದಾಯ ಇಲಾಖೆಯ ಸಿಬ್ಬಂದಿ  ನೇಮಿಸಲಾಗಿದೆ.
ವಿಶೇಷ ದರ್ಶನದ ಪಾಸ್ ಪಡೆದವರಿಗೆ ಎರಡು ಲಾಡು ಮತ್ತು ಕುಂಕುಮಾರ್ಚನೆ ಪ್ರಸಾದವನ್ನು ಶ್ರೀ ಹಾಸನಾಂಬ ದೇವಿ ದರ್ಶನ ಮಹೋತ್ಸವ ಎಂದು ಮುದ್ರಿತ ಚಿಕ್ಕ ಪ್ಯಾಕೇಟ್ನಲ್ಲಿ  ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸರತಿ ನಿಯಂತ್ರಿಸಲು ಪೊಲೀಸ್ ಇಲಾಖೆ, ಹೋಂಗಾರ್ಡ್ಸ್ನವರನ್ನು, ಮಹಿಳಾ  ಪೊಲೀಸ್ ಸಿಬ್ಬಂದಿಯನ್ನು ಅಗತ್ಯ ಸಂಖ್ಯೆಯಲ್ಲಿ ನೇಮಿಸಲಾಗುತ್ತಿದೆ.
ತಾತ್ಕಾಲಿಕ ಆಫೀಸ್:  ಹೆಚ್ಚಿನ ಸಂಖ್ಯೆಯಲ್ಲಿ ವಿಐಪಿಗಳು ಆಗಮಿಸುವಾಗ ಶಿಷ್ಟಾಚಾರ  ಉಲ್ಲಂಘನೆಯಾಗುವ ಸಾಧ್ಯತೆ ಇರುವುದರಿಂದ ವಿಐಪಿಗಳಿಗೆ ವ್ಯವಸ್ಥಿತವಾಗಿ ಶಿಷ್ಟಾಚಾರ ನಿರ್ವಹಿಸಲು ದೇವಾಲಯದ ಹೊರ ಭಾಗದಲ್ಲಿ ಕಂದಾಯ ಇಲಾಖೆಯಿಂದ ಅಧಿಕಾರಿ ಮಟ್ಟದ ಒಂದು ಯೂನಿಟ್ ತೆರೆಯುವುದು ಸೂಕ್ತವೆಂದು ಕಂಡುಬಂದಿದ್ದು, ದೇವಾಲಯದ  ಹೊರ ಭಾಗದಲ್ಲಿ ತಾತ್ಕಾಲಿಕ ಆಫೀಸ್ ತೆರೆಯಲಾಗುತ್ತಿದೆ. ಹರಕೆ ರೂಪದಲ್ಲಿ ಬರುವ ಸೀರೆ, ವಸ್ತ್ರಗಳನ್ನು ಪ್ರಸಾದ ರೂಪದಲ್ಲಿ ಸಾಂಕೇತಿಕ ರೂಪದಲ್ಲಿ ನೀಡಲು ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಶ್ರೀ ಲಲಿತ  ಸಹಸ್ರ ನಾಮಾರ್ಚನೆ ಹೋಮ ನಡೆಸಲಾಗುವುದು. ಇದೆಲ್ಲವನ್ನು ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನೇತೃತ್ವದ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಉಪ ವಿಭಾಗಾಧಿಕಾರಿ ಶರತ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್. ಗೋಪಾಲಕೃಷ್ಣ, ನಗರಸಭೆ ಆಯುಕ್ತ ನಾಗಭೂಷಣ, ತಹಸೀಲ್ದಾರ್ ಮಂಜುನಾಥ್, ಆಹಾರ ಇಲಾಖೆ ಉಪ ನಿರ್ದೇಶಕ ಮಹಾದೇವಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.