ಹಾಸನ

ಕೊಳ್ಳೆ ಹೊಡೆದ ಮೇಲೆ ದಂಡ!

Published On :


ಹೊಳೆನರಸೀಪುರ: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರಂತೆ ಎನ್ನುವ ಹಾಗೆ ವರ್ಷಾನುಗಟ್ಟಳೆ ಹಗಲಿರುಳು ಎನ್ನದೇ ರಾಜಾರೋಷವಾಗಿಯೇ ಹೇಮಾವತಿ ನದಿಯಿಂದ ಆಕ್ರಮವಾಗಿ ಮರಳು ತೆಗೆದು, ನಿತ್ಯವೂ ನೂರಾರು ಲೋಡುಗಟ್ಟಳೆ ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಿಸಿದ ನಂತರ ಈಗ ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ಸತ್ಯಹರಿಶ್ಚಂದ್ರನೇ ಮೈಮೇಲೆ ಬಂದವರಂತೆ ಮರಳು ಲಾರಿ ಹಾಗೂ ಟ್ರಾಕ್ಟರ್ಗಳನ್ನು ಹಿಡಿದು ದಂಡ ಹಾಕಲು ಮುಂದಾಗಿದ್ದಾರೆ.
ಕಳೆದ ಐದಾರು ವರ್ಷಗಳಿಂದಲೂ ನಿತ್ಯವೂ ತಾಲೂಕಿನ ಹೇಮಾವತಿ ನದಿ ಪಾತ್ರದಲ್ಲಿ, ಹೊಳೆಯಿಂದ ಯಾವುದೇ ಪೂರ್ವಾನುಮತಿ ಇಲ್ಲದೇ, ಮೊದಲಿಗೆ ಕಾನೂನಿನ ಹಾಗೂ ಯಾವುದೇ ಅಧಿಕಾರಿಗಳ ಭಯವೂ ಇಲ್ಲದೇ ಹಗಲು ರಾತ್ರಿ ನೂರಾರು ಲಾರಿಗಳು ಎಲ್ಲರೆದುರೇ ನಿರ್ಭಯವಾಗಿ ಮರಳನ್ನು ಹೊತ್ತು ದೂರದ ಬೆಂಗಳೂರು ಮೊದಲಾದ ನಗರಗಳಿಗೆ ಸಾಗಿಹೋದವು.
ಪ್ರಾಮಾಣಿಕತೆ ಅರೆದು ಕುಡಿದವರಂತೆ: ಆಗೆಲ್ಲಾ ಪೊಲೀಸರ ಮುಂದೆಯೇ ಮರಳು ಲಾರಿಗಳು ಹಾದು ಹೋದರೂ ಕಣ್ಣಿಗೆ ಕಾಣದಂತಿದ್ದವರು, ಈಗ ಸತ್ಯ ಧರ್ಮ ಪ್ರಾಮಾಣಿಕತೆಯನ್ನೇ ಅರೆದು ಕುಡಿದವರಂತೆ ನೋಡುವವರ ಕಣ್ಣಿಗೆ ಕಾಣುವ ಹಾಗೆ ಅಲ್ಲಲ್ಲಿ ಒಮ್ಮೆ ಮರಳು ಲಾರಿಗಳು ಹಾಗೂ ಟ್ರಾಕ್ಟರ್ಗಳನ್ನು ಹಿಡಿದು ದಂಡ ಹಾಕತೊಡಗಿದ್ದಾರೆ.
ಈ ಮೊದಲು ಇಲ್ಲಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜ್ 2 ವರ್ಷ ಕಾಲ ಮರಳು ಮಾಫಿಯಾ ವಿರುದ್ಧ ಸಮರ ಸಾರಿದವರಂತೆ ಸಿಕ್ಕ ಸಿಕ್ಕ ಮರಳು ಲಾರಿಗಳನ್ನೆಲ್ಲಾ ಹಿಡಿದು ತಂದು ನಿಲ್ಲಿಸಿದರೂ, ಇಲ್ಲಿನ ಪೊಲೀಸರು ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದಾಗಿ ಈ ತಹಸೀಲ್ದಾರರ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು. ಮರಳು ಮಾಫಿಯಾಗೆ ಅಡ್ಡಿಯುಂಟುಮಾಡಿದ ಕಾರಣಕ್ಕಾಗಿ ಮೂರು ಬಾರಿ ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಮೇಲೆ ಹಲ್ಲೆ ಯತ್ನಗಳೂ ನಡೆದಿದ್ದವು.
ಪ್ರಭಾವಿ ವ್ಯಕ್ತಿಗಳಿಂದಲೇ ಲೂಟಿ:  ಆದರೆ ಈಗ ಅದೆಲ್ಲವೂ ಇತಿಹಾಸ. ನಂತರದ ದಿನಗಳಲ್ಲಿ ತಾಲೂಕಿನಾದ್ಯಂತ ಮರಳು ಮಾಫಿಯಾ ಕೇಳುವವರಿಲ್ಲದಂತಾಯಿತು. ಇದರಿಂದಾಗಿ ನಿತ್ಯವೂ ಇಲ್ಲಿನ ನದಿಯಿಂದ ಕೋಟಿಗಟ್ಟಳೆ ಮೌಲ್ಯದ ಮುತ್ತಿನಂತಹ ಮರಳು ಇಲ್ಲಿನ ಕೆಲವು ಪ್ರಭಾವಿ ವ್ಯಕ್ತಿಗಳಿಂದಲೇ ರಾಜಾರೋಷವಾಗಿಯೇ ಲೂಟಿಯಾಗಿ ಹೋಯಿತು. ಅಲ್ಲದೇ ಇಂದಿಗೂ ಇಲ್ಲಿನ ಕೆಲವು ಪ್ರಭಾವಿ ಜನಪ್ರತಿಧಿಗಳ ಕೃಪಾಕಟಾಕ್ಷದಿಂದ ಹಾಗೂ ಖುದ್ದು ಪ್ರಭಾವಿಗಳೇ ಮರಳು ಸಾಗಿಸುವ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಲ್ಲಿದ್ದರೂ, ಇದುವರೆವಿಗೂ ಯಾರೊಬ್ಬರನ್ನೂ ಬಂಧಿಸುವುದಿರಲಿ ಪ್ರಶ್ನಿಸುವ ಗೋಜಿಗೂ ಇಲ್ಲಿನ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು, ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೋಗಿಲ್ಲ ಎಂದರೆ ಇಲ್ಲಿನ ಮರಳು ಮಾಫಿಯಾ ಇನ್ನೆಷ್ಟು ಪ್ರಭಾವಶಾಲಿ ಹಾಗೂ ಆಳವಾಗಿ ಬೇರೂರಿದೆ ಎಂಬುದರ ಅರಿವಾಗುತ್ತದೆ.
ಯಾರೂ ಚಕಾರ ಎತ್ತುತ್ತಿಲ್ಲ:  ಇಲ್ಲಿ ನಡೆಯುತ್ತಿರುವ ಮರಳು ದಂಧೆ ಕುರಿತಂತೆ ಈಗಲೂ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಆದರೆ ಇದರ ನೇರ ಪರಿಣಾಮ ಬೀರುತ್ತಿರುವುದು ಜನಸಾಮಾನ್ಯರ ಮೇಲೆಯೇ ಹೊರತು ಮೇಲ್ವರ್ಗದವರ ಮೇಲಲ್ಲ ಎಂಬುದು ಸತ್ಯ ಸಂಗತಿ. ಹೊರ ಊರುಗಳಿಗೆ ಅವ್ಯಾಹತವಾಗಿ ತಾಲೂಕಿನಿಂದ ಮರಳು ಸಾಗಣೆಯಾಗುತ್ತಿರುವ ಕಾರಣದಿಂದಾಗಿ ಬೆಂಗಳೂರಿನಲ್ಲಿ ಒಂದು ಲಾರಿ ಲೋಡು ಮರಳು 35-40 ಸಾವಿರ ರು.ಗೆ  ಮಾರಾಟವಾಗುತ್ತಿದೆ.
ಈಗ ತಾಲೂಕಿನಲ್ಲಿ ಮರಳು ಲಾರಿಗಳನ್ನು ಹಿಡಿದು ದಂಡ ವಿಧಿಸಲು ಮುಂದಾಗಿರುವ ಕಾರಣದಿಂದಾಗಿ ಪಟ್ಟಣದಲ್ಲಿ ಮನೆ, ಕಟ್ಟಡ ಹಾಗೂ ಕಾಮಗಾರಿಗಳನ್ನು ಮಾಡುವವರಿಗೆ ಮರಳಿನ ಅಭಾವ ಹೆಚ್ಚಾಗ ತೊಡಗಿದೆ. ಅಲ್ಲದೇ ಕೇವಲ 300-400 ರು.ಗೆ  ಮಾರಾಟವಾಗುತ್ತಿದ್ದ ಒಂದು ಟ್ರ್ಯಾಕ್ಟರ್ ಮರಳಿನ ಬೆಲೆ ಇಂದು ಪಟ್ಟಣಕ್ಕೆ 3500-4000 ರು. ನೀಡಿದರೂ ಒಳ್ಳೆಯ ಮರಳು ಸಿಗುತ್ತಿಲ್ಲ.
ಲಾರಿ ಮರಳಿನ ಬೆಲೆ ರು. 14 ಸಾವಿರ:  ಅಲ್ಲದೇ 4-5 ಸಾವಿರ ರು.ನಷ್ಟು ಇದ್ದ ಲಾರಿ ಮರಳಿನ ಬೆಲೆ ಈಗ 12-14 ಸಾವಿರ ರು. ತಲುಪಿದೆ. ಇಷ್ಟೊಂದು ದುಬಾರಿ ಹಣ ತೆತ್ತು ಅವರು ಕೊಟ್ಟ ಮಣ್ಣು ಮಿಶ್ರಿತ ಮರಳನ್ನೇ ಅದು ಸಿಕ್ಕರೆ ಉಂಟು ಇಲ್ಲದಿದ್ದಲ್ಲಿ ಇಲ್ಲ ಎನ್ನುವಂತೆ ಕಾದು ಮರಳನ್ನು ಕೊಳ್ಳಬೇಕಾದ ದುಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.
ನಮ್ಮದೇ ಸಂಪತ್ತು ನಮಗೇ ದುಬಾರಿಯಾಗಿ ಮದುವೆ ಬೇಕಾದರೆ ಮಾಡಿ ಬಿಡಬಹುದು. ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ ಎನ್ನುವಂತಹ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಈಗ ಎಚ್ಚೆತ್ತವರಂತೆ ಎಲ್ಲರೂ ಮರಳು ದಂಧೆಕೋರರ ಮೇಲೆ ಮುಗಿಬೀಳುತ್ತಿರುವ ಪರಿಣಾಮವಾಗಿ ಜನಸಾಮಾನ್ಯರ ಮನೆ ಕಟ್ಟುವ ಕನಸು ನನಸಾಗಲು ಪ್ರಮುಖ ಅಡ್ಡಿಯೇ ಮರಳಿನ ಕೊರತೆಯಾಗಿದೆ.
ಈಗಲೂ ಕಾಲ ಮಿಂಚಿಲ್ಲ ಹೊರ ಊರುಗಳಿಗೆ ಆಕ್ರಮವಾಗಿ ಸಾಗಿಸುತ್ತಿರುವ ಮರಳಿನ ಮೇಲೆ ಅಧಿಕಾರಿಗಳು ಯಾವುದೇ ಕ್ರಮವನ್ನಾದರೂ ಕೈಗೊಳ್ಳಲಿ, ಎಷ್ಟು ದಂಡವನ್ನಾದರೂ ವಿಧಿಸಲಿ. ಆದರೆ ತಾಲೂಕಿನ ವ್ಯಾಪ್ತಿಯಲ್ಲಿ ತೆಗೆಯುವ ಮರಳನ್ನು ಪಟ್ಟಣದಲ್ಲಿ ಮನೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ಲಭ್ಯತೆಯ ಆಧಾರದ ಮೇಲೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದೊಂದಿಗೆ ಇಲ್ಲಿನ ಜವಾಬ್ದಾರಿಯುತ ಪುರಸಭೆ ಕೂಡ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.
ಪಟ್ಟಣ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮನೆ ಕಟ್ಟಡ ಅಥವಾ ಕಾಮಗಾರಿ ಕೈಗೊಳ್ಳುವವರು ಸದರಿ ಪುರಸಭೆ, ಪಂಚಾಯಿತಿಯಿಂದ ಸದರಿ ಕಟ್ಟಡದ ನಿರ್ಮಾಣಕ್ಕೆ ನಿರಾಪೇಕ್ಷಣ ಪತ್ರವನ್ನು ಪಡೆದುಕೊಂಡಾಗಲೇ, ನಿರ್ಮಾಣ ಕಾರ್ಯಕ್ಕಾಗಿ ಅವಶ್ಯಕವಿರುವ ಮರಳನ್ನು ಪಡೆಯಲು ಹಾಗೂ ಮರಳನ್ನು ಮಾರಾಟ ಮಾಡಲು ಸೂಕ್ತವಾದ ಮತ್ತು ಸಮಂಜಸವಾದ ಹಾಗೂ ಕಾನೂನಿನ ಉಲ್ಲಂಘನೆಯೂ ಆಗದಂತಹ ಮಾರ್ಗವನ್ನು ಜರೂರು ರೂಪಿಸಲೇಬೇಕಾದ ಅನಿವಾರ್ಯತೆ ಇದೆ.
ಈ ಕುರಿತಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಚರ್ಚಿಸಿ ಇದಕ್ಕೊಂದು ಪರಿಹಾರವನ್ನು ಶೀಘ್ರವೇ ರೂಪಿಸಿ ಜನಸಾಮಾನ್ಯರ ಆಶಯಗಳಿಗೆ ನೆರವಾಗುವರೇ ಎಂಬುದನ್ನು ಕಾದುನೋಡಬೇಕಿದೆ.
ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.