ಹಾಸನ

ಭಾಷಾಂತರ ಅವಾಂತರ....ಕನ್ನಡ ಕೊಂದ ಅಧಿಕಾರಿ

Published On :

ಹಾಸನ: ತಮ್ಮ ಜಿಲ್ಲೆಯ ಮಲೆನಾಡು ಭಾಗದ ಕಾಫಿ ಬೆಳೆಗಾರರನ್ನು ನೋಡಿ ಹಾಸನ ಜಿಲ್ಲೆ ಸಮಗ್ರ ಅಭಿವೃದ್ಧಿ ಹೊಂದಿದೆ ಎಂದು ಭಾವಿಸಲಾಗಿದೆ. ಇದು ಶುದ್ಧ ತಪ್ಪು. ಬೆಳೆಗಾರರು ಬೆಳೆಯಿಲ್ಲದೆ ತತ್ತರಿಸಿ ಹೋಗಿದ್ದಾರೆ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಿಲ್ಲೆ ಸಮಗ್ರ ಅಭಿವೃದ್ಧಿಯತ್ತ ನೋಟ ಹರಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಾಖ್ಯಾನಿಸಿದರು. ಶನಿವಾರ ನ್ಯೂ ಮಿನರ್ವ ಮಿಲ್ ಕಾರ್ಖಾನೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಗೌಡರು, ಹಾಸನ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದೆ. ಅದಕ್ಕಾಗಿ ಉದ್ಯೋಗ ನೀಡುವ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆ  ಆಗಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಣ್ಣು, ಹಾಲು ತರಕಾರಿ ಸಂಸ್ಕರಣಾ ಘಟಕ ಆರಂಭವಾಗಬೇಕಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಅಭಿವೃದ್ಧಿಗೆ ಹಮ್ಮಿಕೊಳ್ಳುವ ಕಾರ್ಯಗಳಿಗೆ ತಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು.
ಭಾಷಾಂತರದ ಅವಾಂತರ: ಸಭೆಯಲ್ಲಿ ಭಾಷಾಂತರದ ಅವಾಂತರ ಘಟಿಸಿತು. ಕೇಂದ್ರ ಸಚಿವ ಡಾ. ಕೆ. ಸಾಂಬಾಶಿವ ರಾವ್ ಮಾಡಿದ ಇಂಗ್ಲಿಷ್ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ನಿಂತ ಅಧಿಕಾರಿಯೊಬ್ಬರು ಯದ್ದಾತದ್ವಾ ತಪ್ಪುಗಳನ್ನು ಮಾಡಲಾರಂಭಿಸಿದರು. ಸಚಿವರು ಕೋಟಿ ರು. ಅಂದ್ರೆ, ಕನ್ನಡ ಭಾಷಾಂತಕಾರರು ಲಕ್ಷ ಎನ್ನುತ್ತಿದ್ದರು. ಇದರಿಂದ ಬೇಸರಗೊಂಡ ಸಭಿಕರು, ಸಚಿವರು, ಇಂಗ್ಲಿಷ್ನಲ್ಲಿ ಮಾತನಾಡಿ, ಭಾಷಾಂತರಕಾರರು ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದರು. ಆಗ ಮಧ್ಯ ಪ್ರವೇಶಿಸಿದ ದೇವೇಗೌಡರು, ಕನ್ನಡಕ್ಕೆ ತರ್ಜುಮೆ ಮಾಡುತ್ತಿರುವುದು ಸರಿಯಿಲ್ಲ ಎಂದು ಜನತೆ ಹೇಳುತ್ತಿದ್ದಾರೆ. ಸಚಿವರು ಫಾರಿನ್ ಇಂಗ್ಲಿಷ್ ಮಾತನಾಡುತ್ತಿಲ್ಲ. ಸರಳ ಇಂಗ್ಲಿಷ್ ಮಾತನಾಡುತ್ತಿದ್ದಾರೆ. ನಮ್ಮ ಕಾರ್ಖಾನೆ ನೌಕರರು, ಐಟಿಐ ಮತ್ತಿತರ ಕೋರ್ಸ್ಗಳನ್ನು ಓದಿದವರಾಗಿದ್ದಾರೆ. ಹಾಗಾಗಿ ಸಚಿವರು ಇಂಗ್ಲಿಷ್ನಲ್ಲೆ ಮಾತನಾಡಿ, ತರ್ಜುಮೆ ಬೇಡ ಎಂದರು. ಆಗ ಸಚಿವರು ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು. ಸಭೆಯಲ್ಲಿ ಕುವೆಂಪು ರಚಿಸಿದ ನಾಡಗೀತೆಯನ್ನು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಕ್ಯಾಸೆಟ್ ಮೂಲಕ ಕೇಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.