ಜೈವಿಕ ಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನೇರಳೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಭೂಚೇತನ ತರಬೇತಿ ಕಾರ್ಯಕ್ರಮ ನಡೆಯಿತು. ಸಹಾಯಕ ಕೃಷಿ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ಮಾತನಾಡಿ, ಮಣ್ಣಿನಲ್ಲಿ ಲಘುಪೋಷಕಾಂಶಗಳ ಕೊರತೆ ಇದ್ದು ಮಣ್ಣು ಪರೀಕ್ಷೆ ಆಧಾರದ ಮೇಲೆ ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶಗಳನ್ನು ಒದಗಿಸಿ ಬೇಸಾಯ ಕ್ರಮಗಳ ನ್ಯೂನತೆಗಳನ್ನು ಸರಿಪಡಿಸಿಕೊಂಡು ಬೆಳೆಗಳ ಇಳುವರಿಯನ್ನು ಕನಿಷ್ಠ ಶೇ.20ರಷ್ಟು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ ಎಂದರು.
ಈಗಾಗಲೇ ಹಳ್ಳಿಮೈಸೂರು ಹೋಬಳಿಯ ಆಯ್ದ ಗ್ರಾಮಗಳಲ್ಲಿ ಮಣ್ಣು ಪರೀಕ್ಷೆ ಮಾಡಿಸಿದ್ದು ಪ್ರಮುಖವಾಗಿ ಸತು, ಬೋರಾನ್ ಹಾಗೂ ಗಂಧಕದ ಕೊರತೆ ಇರುವುದು ಕಂಡುಬಂದಿದ್ದು, ರಸಗೊಬ್ಬರದ ಜೊತೆಗೆ ಕೊರತೆ ಇರುವ ಪೋಷಕಾಂಶ ಒದಗಿಸುವ ಲಘುಪೋಷಕಾಂಶಗಳನ್ನು ಹಾಗೂ ಜೈವಿಕ ಗೊಬ್ಬರಗಳನ್ನು ಬಳಸಿದರೆ ಬೆಳೆಗಳ ಇಳುವರಿ ಹೆಚ್ಚಿಸಬಹುದೆಂದು ತಿಳಿಸಿದ ಅವರು, ಇಲಾಖೆಯಿಂದ ಸಹಾಯಧನದಲ್ಲಿ ವಿತರಿಸಲಾಗುತ್ತಿರುವ ಬಿತ್ತನೆ ಬೀಜಗಳು, ಕೃಷಿ ಸಂಬಂಧಿಸಿದ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಇಲಾಖೆಯ ಕಾರ್ಯಕ್ರಮಗಳನ್ನು ವಿವರಿಸುತ್ತಾ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಾನಾ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ದೊರೆಯುವ ಸಹಾಯ ಧನ ಕುರಿತು ರೈತರಿಗೆ ಮಾಹಿತಿ ನೀಡಿದರು. ಅಲ್ಲದೆ ನಾನಾ ಕೃಷಿ ಯಂತ್ರೋಪಕರಣಗಳಿಗೆ ದೊರೆಯುವ ಸಹಾಯ ಧನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ರೇಷ್ಮೆ ವಿಸ್ತರಣಾಧಿಕಾರಿ ಕೈಲಾಸಮೂರ್ತಿ ಮಾತನಾಡಿ, ರೈತರು ರೇಷ್ಮೆ ಕೃಷಿಯನ್ನು ಆಧುನಿಕ ಪದ್ಧತಿಯಲ್ಲಿ ಅಳವಡಿಸಿಕೊಂಡು ರೇಷ್ಮೆ ಲಾಭದಾಯಕ ಕೃಷಿಯಾಗಿ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ರೇಷ್ಮೆ ಬೇಸಾಯದಲ್ಲಿ ನೂತನ ಆವಿಷ್ಕಾರಗಳಾಗಿದ್ದು ಇದನ್ನು ರೇಷ್ಮೆ ಕೃಷಿಯಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಚಂದ್ರಶೇಖರಸ್ವಾಮಿ ಮಾತನಾಡಿ, ನಾನಾ ಇಲಾಖೆ ಅಧಿಕಾರಿಗಳು ಉತ್ತಮ ಮಾಹಿತಿಗಳನ್ನು ಗ್ರಾಮಮಟ್ಟದಲ್ಲಿ ಬಂದು ತಿಳಿಸಿದ್ದು ರೈತರು ಮಾಹಿತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವಂತೆ ಮತ್ತು ತಮ್ಮ ಆರ್ಥಿಕ ಮಟ್ಟವನ್ನು ವೃದ್ಧಿಸಿಕೊಳ್ಳುವಂತೆ ತಿಳಿಸಿದರು.
ಬಿದರಕ್ಕ ಗ್ರಾಪಂ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿದರಕ್ಕ ಗ್ರಾಮ ಪಂಚಾಯ್ತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಹಾಗೂ ಕೃಷಿ ಇಲಾಖೆಯ ಅಧಿಕಾರಿ ಎನ್.ದೊರೆರಾಜ್ ಹಾಗೂ ಅನುವುಗಾರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

