ನ್ಯೂ ಮಿನರ್ವ ಮಿಲ್ ಕಾರ್ಖಾನೆಗೆ ಚಾಲನೆ
ಹಾಸನ: ದೇಶದ ಜವಳಿ ಉದ್ಯಮಕ್ಕೆ ಮೈಲಿಗಲ್ಲಾಗಬೇಕೆಂಬ ಆಶಯದಿಂದ ಹಾಸನ ನಗರದ ವಿಶೇಷ ಆರ್ಥಿಕ ವಲಯದ 40 ಎಕರೆ ಪ್ರದೇಶದಲ್ಲಿ 230 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನ್ಯೂ ಮಿನರ್ವ ಮಿಲ್ ಕಾರ್ಖಾನೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಕೇಂದ್ರ ಜವಳಿ ಖಾತೆ ಸಚಿವ ಡಾ. ಕೆ. ಸಾಂಬಾಶಿವ ರಾವ್ ಕಾರ್ಖಾನೆಗೆ ಚಾಲನೆ ನೀಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಷ್ಟ್ರೀಯ ಜವಳಿ ನಿಗಮದ ಅಧ್ಯಕ್ಷ ಆರ್.ಕೆ. ಸಿನ್ಹಾ ಮತ್ತಿತರರು ಇದಕ್ಕೆ ಸಾಕ್ಷಿಯಾದರು. ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸುವ ಇಂಥಹ ಕಾರ್ಖಾನೆಗಳು ದೇಶದಲ್ಲಿ ಇರುವುದು ಮೂರು. ಮಹಾರಾಷ್ಟ್ರದ ಅಚಲಪುರ, ಗುಜರಾತ್ನ ಅಹಮದ್ಬಾದ್ ಬಿಟ್ಟರೆ ಹಾಸನ. ವಿಶ್ವ ದರ್ಜೆಯ ಗುಣಮಟ್ಟದ ಬಟ್ಟೆ ಮತ್ತು ಬಟ್ಟೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಇಲ್ಲಿ ತಯಾರಾಗುವ ಶೇ. 100 ರಷ್ಟು ಉತ್ಪನಗಳು ವಿದೇಶಗಳಿಗೆ ರಫ್ತಾಗುತ್ತವೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳನ್ನು ಕಾರ್ಖಾನೆಯಲ್ಲಿ ಅಳವಡಿಸಲಾಗಿದ್ದು, ಇಲ್ಲಿ ಸುಮಾರು 2 ಸಾವಿರ ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರೆಯಲಿದೆ. ಪ್ರತಿದಿನ 6,500 ಮೀಟರ್ ಬಟ್ಟೆಯನ್ನು ಉತ್ಪಾದಿಸಲಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಸಚಿವ ಸಂಪುಟದಲ್ಲಿ ವಾಣಿಜ್ಯ ಸಚಿವರಾಗಿದ್ದ ದಿ. ಮರಸೋಳಿ ಮಾರನ್ ಅವರು, ಹಾಸನದಲ್ಲಿ ಜವಳಿ ಕಾರ್ಖಾನೆ ಆರಂಭಕ್ಕೆ ಒಪ್ಪಿಗೆ ನೀಡಿದ್ದರು. ನಂತರದ ದಿನಗಳಲ್ಲಿ ಕಾರ್ಖಾನೆ ಸರ್ವ ಸನ್ನದ್ಧವಾಗಿ ಆರಂಭವಾಗಲಿಲ್ಲ. ಈಗ ಕಾರ್ಖಾನೆಯಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸಿ ವಿಶ್ವ ದರ್ಜೆಯ ಬಟ್ಟೆಗಳು ಮತ್ತು ಅದಕ್ಕೆ ಪೂರಕವಾಗಿ ಕಚ್ಚಾವಸ್ತುಗಳನ್ನು ತಯಾರಿಸಲು ಚಾಲನೆ ನೀಡಲಾಗಿದೆ.
ಸಬ್ಸಿಡಿ ಹೆಚ್ಚಳ: ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವ ಡಾ. ಕೆ. ಸಾಂಬಶಿವರಾವ್ ಅವರು, ಜವಳಿ ಉದ್ಯಮಕ್ಕೆ ಪೂರಕವಾದ ಎಲ್ಲಾ ಕೈಗಾರಿಕೆಗಳಿಗೆ ಶೇ. 35 ರಷ್ಟು ಸಬ್ಸಿಡಿಯನ್ನು ಈಗ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಸಲಾಗುವುದು. ಈಗ ಪ್ರತಿದಿನ ಜವಳಿ ಉದ್ಯಮಕ್ಕೆ ಸಂಬಂಧಿಸಿದ 33 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 43 ಬಿಲಿಯನ್ ಡಾಲರ್ ವಸ್ತುಗಳನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ.
ದೇಶದ ರುಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣ ರಫ್ತಿನ ಪ್ರಮಾಣ ಕುಗ್ಗಿ, ಆಮದಿನ ಪ್ರಮಾಣ ಹೆಚ್ಚಾಗಿರುವುದು. ಮುಂದಿನ ದಿನಗಳಲ್ಲಿ ಇದನ್ನು ತಡೆಯಲು ದೇಶದೊಳಗೆ ವಿಶ್ವ ದರ್ಜೆಯ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಬೇಕಾದ ಸವಾಲು ಮತ್ತು ಅನಿವಾರ್ಯತೆ ದೇಶಕ್ಕೆ ಇದೆ. ಗುಣಮಟ್ಟದ ವಸ್ತುಗಳನ್ನು ತಯಾರಾಗಬೇಕಾದರೆ ಕಾರ್ಮಿಕರು ಕೌಶಲ್ಯತೆ ಪಡೆಯಬೇಕು. ಅದಕ್ಕಾಗಿ 19 ಸಾವಿರ ಕೋಟಿ ರು. ಗಳನ್ನು ವೆಚ್ಚ ಮಾಡಿ, ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಚೀನಾ, ಜಪಾನ್, ಮಲೇಷಿಯಾ ಮತ್ತಿತರ ದೇಶಗಳು ಅಭಿವೃದ್ಧಿ ಹೊಂದಲು ಪ್ರಮುಖ ಕಾರಣ, ಅಲ್ಲಿ ಅತ್ಯುತ್ತಮ ರೀತಿಯಲ್ಲಿ ತರಬೇತಿ ಪಡೆದು ಕೌಶಲ್ಯತೆ ಪಡೆದಿರುವ ಕಾರ್ಮಿಕರು ಇರುವುದರಿಂದ. ಭಾರತದಲ್ಲಿ ಕಾಯಕ ಸಂಸ್ಕೃತಿ ಕಡಿಮೆ. ಕೈ ಕೆಸರಾಗದೇ ಊಟ ಮಾಡುವ ಪರಿಸ್ತಿತಿ ಇದೆ. ಅಮೇರಿಕಾದಲ್ಲಿ ಶೇ. 2 ರಷ್ಟು ಮಾತ್ರ ಕೃಷಿಕರು ಇದ್ದರೆ, ಭಾರತದಲ್ಲಿ ಶೇ. 70 ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದು ದೇಶದ ಪ್ರಗತಿಗೆ ಕೈಗಾರಿಕೆ ತನ್ನದೇ ಆದ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಗ್ರಾಮೀಣ ಭಾಗದ ಯುವಕ, ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಕೈಗಾರಿಕೋದ್ಯಮದಲ್ಲಿ ಉದ್ಯೋಗ ಒದಗಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ರು. 178 ಕೋಟಿ ಘಟಕ ಸ್ಥಾಪನೆ: ಕಾರ್ಮಿಕರು ಕೇವಲ ಬೇಡಿಕೆಗಳನ್ನು ಇಟ್ಟರೇ ಸಾಲದು. ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಗಮನಹರಿಸಬೇಕು. ಆಗ ಲಾಭದಾಯಕವಾಗಿ ಸಂಸ್ಥೆ ನಡೆಯಲು ಕಾರಣವಾಗಿ, ಸಹಜವಾಗಿ ಸಂಬಳ, ಸಾರಿಗೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಾಧ್ಯ.
ಮಾಜಿ ಪ್ರಧಾನಿ ದೇವೇಗೌಡರ ಕೋರಿಕೆಯಂತೆ ಮುಂದಿನ ವರ್ಷ ಹಾಸನದಲ್ಲಿ 178 ಕೋಟಿ ರು. ವೆಚ್ಚದ ಜವಳಿ ಉದ್ಯಮಕ್ಕೆ ಪೂರಕವಾದ ಪರಿಷ್ಕರಣೆ ಘಟಕ ಆರಂಭಿಸಲಾಗುವುದು. ಈಗ ಆರಂಭವಾಗಿರುವ ಕಾರ್ಖಾನೆ ನೌಕರರ ಕೆಲಸವನ್ನು ಕಾಯಂ ಮಾಡಿ, ವಸತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ರಾಜ್ಯ ಜವಳಿ ಖಾತೆ ಸಚಿವ ಬಾಬುರಾವ್ ಮಾತನಾಡಿದರು. ಶಾಸಕ ಎಚ್.ಎಸ್. ಪ್ರಕಾಶ್, ಪಟೇಲ್ ಶಿವರಾಂ, ನ್ಯಾಷನಲ್ ಟೆಕ್ಸ್ಟೈಲ್ ಕಾರ್ಪೋರೇಷನ್ ಅಧ್ಯಕ್ಷ ಆರ್.ರೆ. ಸಿನ್ಹಾ, ಉನ್ನತ ಅಧಿಕಾರಿ ಆರ್. ಕೆ. ಶರ್ಮ, ಪಿ.ಸಿ. ವ್ಯಾಸ್, ಬಿ. ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

