ಹಾಸನ

ಅತಿವೃಷ್ಟಿ, ಕಾಡಾನೆ ದಾಳಿಗೆ ರೈತರು ತತ್ತರ

Published On :

ಸಕಲೇಶಪುರ: ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಅತಿವೃಷ್ಟಿಗೆ ಸಿಲುಕಿ ಅತಿ ಹೆಚ್ಚು ಬತ್ತದ ಗದ್ದೆಗಳು ಹಾನಿಗೊಳಗಾಗಿದ್ದರೆ, ಈಗ ಕಾಡಾನೆ ಹಾವಳಿಯಿಂದ ಬತ್ತದ ಗದ್ದೆಗಳನ್ನು ರಕ್ಷಿಸಿಕೊಳ್ಳಲು ರೈತರು ಹೆಣಗಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಗಸ್ಟ್‌ನಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ 5 ಸಾವಿರ ಎಕರೆ ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಸುಮಾರು 3 ಸಾವಿರ ಎಕರೆ ಬತ್ತದ ಗದ್ದೆಗಳಲ್ಲಿ ತುಂಬಿದ್ದ ಹೂಳನ್ನು ತೆಗೆದು ಮರು ನಾಟಿ ಮಾಡಿರುವ ರೈತರಿಗೆ ಈಗ ಕಾಡಾನೆ ಹಾವಳಿಯ ಸಮಸ್ಯೆ ಎದುರಿಸ ಬೇಕಾಗಿದೆ. ಇತ್ತ ಅತಿವೃಷ್ಟಿಗೆ ಪರಿಹಾರವೂ ಇಲ್ಲ. ಅತ್ತ ಕಾಡಾನೆಗಳಿಂದ ಅರಣ್ಯ ಇಲಾಖೆ ರಕ್ಷಣೆಯೂ ಇಲ್ಲದೇ ರೈತರು, ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಹಾಸನಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಅತಿವೃಷ್ಟಿಯಿಂದಾದ ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಹಣ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಿಲ್ಲ. ಕೇವಲ ಅಧಿಕಾರಿಗಳ ಸಭೆ ನಡೆಸಿ, ಅವರು ನೀಡಿದ ಕಾಗದದ ಮೇಲಿನ ಅಂಕಿ ಅಂಶಗಳನ್ನು ನೋಡಿ ಹೋದರು. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ನೀಡಿದ ಹಾರತುರಾಯಿ ಸ್ವೀಕರಿಸಿ ಸಿಎಂ ಉಲ್ಲಾಸಗೊಂಡರು. ಆದರೆ ನಮ್ಮ ಕಷ್ಟನಷ್ಟಗಳ ಪರಿಹಾರ ಮಾಡುವ ನಿಟ್ಟಿನಲ್ಲಿ ಏನು ಹೇಳಲಿಲ್ಲ ಎಂಬ ಅಸಮಾಧಾನವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಯಸಳೂರು ಹೋಬಳಿ ದೊಡ್ಡಕಲ್ಲೂರು ಸುತ್ತಮುತ್ತಲಿನ ಸುಮಾರು 20 ಕ್ಕೂ ಗ್ರಾಮಗಳು, ಹೆತ್ತೂರು ಹೋಬಳಿಯ ಭೂಮರಹಳ್ಳಿ, ಹರಗರಹಳ್ಳಿ ಗ್ರಾಮದ ಸುಮಾರು 20 ಗ್ರಾಮಗಳು. ಹಾನುಬಾಳ್ ಹೋಬಳಿಯ ಅಲುವಳ್ಳಿ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಡಾನೆಗಳು ನಿರಂತರ ದಾಳಿ ಹಾವಳಿ ನಡೆಸುತ್ತಿವೆ.
ಬತ್ತದ ತೆನೆ ಮೂಡಲು ಕೆಲವೇ ದಿನಗಳಿರುವಂತೆ ಹಿಂಡು ಹಿಂಡು ಕಾಡಾನೆಗಳು ಬತ್ತದ ಗದ್ದೆಗೆ ಇಳಿದು ಬುಡಸಮೇತ ತಿನ್ನುತ್ತಿರುವುದು ಹಾಗೂ ಮರಿಗಳೊಂದಿಗೆ ಚಿನ್ನಾಟವಾಡುವುದರಿಂದಾಗಿ ಸಾಕಷ್ಟು ಬತ್ತದ ಪೈರು ನಾಶವಾಗಿದೆ. ಕೃಷಿ ಇಲಾಖೆ ಅಂದಾಜಿನ ಪ್ರಕಾರ ಸುಮಾರು 500 ಎಕರೆ  ಬತ್ತದ ಗದ್ದೆಗಳು ಆನೆಯ ಕಾಲ್ತುಳಿತಕ್ಕೆ ಸಿಲುಕಿ ಹಾಳಾಗಿದೆ.  ಇದರಿಂದ ಕಂಗೆಟ್ಟಿರುವ ಗ್ರಾಮಸ್ಥರು ಗದ್ದೆಗಳ ಸಮೀಪವೆ ಗುಡಿಸಲು ನಿರ್ಮಿಸಿ ಕಾಡಾನೆಗಳಿಂದ ಗದ್ದೆಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದು ಅರಣ್ಯ ಇಲಾಖೆ ನೀಡುವ ಪಟಾಕಿಗಳನ್ನು ಸಿಡಿಸುವ ಮೂಲಕ ಕಾಡಾನೆಗಳು ಗದ್ದೆಗಳಿಗೆ ಇಳಿಯದಂತೆ ತಡೆಯಲು ಪ್ರಯತ್ನ ನಡೆಸುತ್ತಿದ್ದರೂ ಫಲ ನೀಡದಾಗಿದೆ.
ಎರಡು ದಿನಗಳಿಂದ ಕ್ಯಾನಹಳ್ಳಿ ಹಾಗೂ ಮಂಚಹಳ್ಳಿ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿರುವ 17 ಕಾಡಾನೆಗಳ ಹಿಂಡು ಹಗಲುವೇಳೆ ಗ್ರಾಮದೊಳಕ್ಕೆ ಸಂಚರಿಸುವ ಮೂಲಕ ಆತಂಕ ಉಂಟುಮಾಡಿದ್ದರೆ, ಈ ಎರಡು ಗ್ರಾಮಗಳಲ್ಲೇ ಸುಮಾರು 20 ಎಕರೆ  ಬತ್ತದ ಗದ್ದೆಗಳು ಕಾಡಾನೆ ಕಾಲ್ತುಳಿತಕ್ಕೆ ನಾಶವಾಗಿದೆ. ಒಟ್ಟಿನಲ್ಲಿ ಅತಿವೃಷ್ಟಿಯಿಂದ ಸುಧಾರಿಸಿಕೊಂಡಿದ್ದ ಬತ್ತ ಬೆಳೆಯುವ ರೈತರು ಈಗ ಕಾಡಾನೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ.
ಅತಿವೃಷ್ಟಿಯಿಂದಾದ ನಷ್ಟಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿಲ್ಲ. ಇತ್ತ ಅರಣ್ಯ ಇಲಾಖೆ ಕಾಡಾನೆಗಳಿಂದ ರೈತರಿಗೆ ರಕ್ಷಣೆ ನೀಡುತ್ತಿಲ್ಲ. ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆಯನ್ನು ಕಾಟಾಚಾರಕ್ಕೆ ಎಂಬಂತೆ ನಡೆಸಿ ಹೋದರೆ ಹೊರತು ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ನಯಾ ಪೈಸೆ ಪರಿಹಾರ ನೀಡಲಿಲ್ಲ ಎಂಬ ಅಸಮಾಧಾನ ರೈತರಲ್ಲಿ ವ್ಯಕ್ತವಾಗಿದೆ.
ಕಾಡಾನೆ ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆಗೆ ವಿನಂತಿಸಿದರೆ ಗ್ರಾಮಸ್ಥರಿಗೆ ಪಟಾಕಿ ನೀಡುವ ಮೂಲಕ ಇಲಾಖೆಯವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕಾಡಾನೆ ದಾಳಿಯಿಂದ ಸಾಕಷ್ಟು ಬತ್ತದ ಗದ್ದೆಗಳು ನಾಶವಾಗಿವೆ - ದಿನೇಶ್,  ಅರೆಕೆರೆ ಗ್ರಾಮಸ್ಥ.


-ಎಸ್.ಎಂ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.