ಆಹಾರ ಭದ್ರತೆಯಲ್ಲಿ ಹೆಚ್ಚಿನ ಕಾಳಜಿ ಶ್ಲಾಘನೀಯ
ಕ.ಪ್ರ.ವಾರ್ತೆ , ಹಾಸನ , ಅ.18
ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಆಹಾರ ಭದ್ರತೆಯಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುವುದು ಶ್ಲಾಘನೀಯ ಎಂದು ಕಾರೆಕೆರೆ ಕೃಷಿ ಕಾಲೇಜಿನ ಡೀನ್ ಡಾ.ಎಲ್. ಮಂಜುನಾಥ್ ತಿಳಿಸಿದರು.
ಕಾರೆಕೆರೆ ಕೃಷಿ ಮಹಾವಿದ್ಯಾಲಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಹೊಳೆನರಸೀಪುರ ತಾಲೂಕು ದೊಡ್ಡಚಾಕೇನಹಳ್ಳಿಯಲ್ಲಿ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕಾಂಶ ಕೊರತೆಯು ಶೇ. 40ರಷ್ಟು ಇದ್ದು ಇದನ್ನು ನೀಗಿಸಲು ಸಮತೋಲನ ಆಹಾರ ಪೂರೈಕೆ ಮತ್ತು ಬಳಕೆಯನ್ನು ಕಾಪಾಡಿಕೊಂಡು ಬರುವುದು ಆರೋಗ್ಯ ದೃಷ್ಟಿಯಿಂದ ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದ ಸಂಯೋಜಕ ಡಾ. ಬಿ.ಎಸ್. ಬಸವರಾಜ್ ಮಾತನಾಡಿ, ಪ್ರತಿಯೊಬ್ಬ ವಯಸ್ಕ ವ್ಯಕ್ತಿಗೆ ಒಂದು ದಿನಕ್ಕೆ 350-400 ಗ್ರಾಂ ಏಕದಳ ಧಾನ್ಯ, 40-60 ಗ್ರಾಂ ದ್ವಿದಳ ಧಾನ್ಯ, 150 ಗ್ರಾಂ ಹಣ್ಣು, 150 ಗ್ರಾಂ ತರಕಾರಿ, 20 ಗ್ರಾಂ ಎಣ್ಣೆ, 30-40 ಗ್ರಾಂ ಸಕ್ಕರೆ ಅಂಶ ಮತ್ತು 200 ಮಿ.ಲೀ. ಹಾಲಿನ ಶಿಫಾರಸ್ಸಿದ್ದರೂ ಸಮರ್ಪಕ ಬಳಕೆಯಲ್ಲಿ ವಿಫಲರಾಗಿರುವುದರಿಂದ ನಾವು ಶೇಕಡ 40 ರಷ್ಟು ಪೌಷ್ಠಿಕ ಕೊರತೆಯನ್ನು ಅನುಭವಿಸುತ್ತಿದ್ದೇವೆಂದು ತಿಳಿಸಿದರು.
ಕೃಷಿ ಕಾಲೇಜಿನ ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ರಾಮ್ಕುಮಾರ್ ಮಾತನಾಡಿ, ಈ ದಿನದ ಮಹತ್ವವೇನೆಂದರೆ ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ ಯು 1945ರಲ್ಲಿ ಜಾರಿಗೆ ಬಂದ ಸವಿನೆನಪಿಗಾಗಿ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಆದಾಗ್ಯೂ ಭಾರತದಲ್ಲಿಯೂ ಬಡತನವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಒಂದೆಡೆ ಹಸಿವು ಮತ್ತೊಂದೆಡೆ ಪೋಷಕಾಂಶದ ಕೊರತೆಯನ್ನು ಹೊಡೆದೋಡಿಸಲು ಸುಸ್ಥಿರ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿಯನ್ನು ಪ್ರತಿ ರೈತರು ಅನುಸರಿಸಲು ಕರೆ ನೀಡಿದರು. ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಬಿ. ಸತೀಶ್ ಮಾತನಾಡಿ, ಆಹಾರ ಸುಧಾರಣೆಯಲ್ಲಿ ಹಣ್ಣು ತರಕಾರಿಗಳ ಯಥೇಚ್ಛ ಬಳಕೆ ಬಗ್ಗೆ ವಿವರಿಸುತ್ತಾ ತೋಟಗಾರಿಕೆ ಇಲಾಖೆಯ ಯೋಜನೆಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲು ತಿಳಿಸಿದರು.
ಶಾಂತಿ ಗ್ರಾಮದ ಕೃಷಿ ಅಧಿಕಾರಿ ಸವಿತ ಮಾತನಾಡಿ, ಏಕದಳ-ದ್ವಿದಳ ಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆದು ಮನೆ ಬಳಕೆಗೆ ಹೆಚ್ಚಾಗಿ ಉಪಯೋಗಿಸಿಕೊಂಡು ಸಮತೋಲನ ಆಹಾರ ಪದ್ಧತಿಗೆ ಅನುಕೂಲ ಮಾಡಿಕೊಳ್ಳಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಹೊಯ್ಸಳ ಹಾಸನ ಅಧ್ಯಕ್ಷ ಎಂ. ಈ ಚಂದ್ರೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಹಾಲು, ಮೊಸರು ಬೆಣ್ಣೆ, ತುಪ್ಪ, ಏಕದಳ ದ್ವಿದಳ ಧಾನ್ಯಗಳನ್ನು ರೈತರು ಬಳಸುತ್ತಿರುವುದರಿಂದ ಪಟ್ಟಣಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಆರೋಗ್ಯ ಸುಧಾರಣೆ ಇದ್ದರೂ ಕೂಡ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸಲು ಸಲಹೆ ನೀಡಿದರು.
ಗ್ರಾಮದ ಹಿರಿಯ ಲಕ್ಷ್ಮೇಗೌಡ ಅಧ್ಯಕ್ಷತೆ ವಹಿಸಿ, ಸುಸ್ಥಿರ ಆಹಾರ ಪದ್ಧತಿ ಅಳವಡಿಸಿಕೊಳ್ಳಲು ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರ ಕಂದಲಿಯ ಪಶು ವಿಜ್ಞಾನ ವಿಭಾಗದ ವಿಷಯ ತಜ್ಞ ಡಾ. ಕೆ.ಜೆ. ಕಾಂತರಾಜ್ ನಿರೂಪಿಸಿದರು. ದೊಡ್ಡಚಾಕೇನಹಳ್ಳಿಯ ಕುಮಾರ್ ನಂಜುಂಡಪ್ಪ ಮತ್ತು ರಂಗೇಗೌಡ ಸುತ್ತಲಿನ ಗ್ರಾಮಸ್ಥರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

