ಕನ್ನಡನಾಡಲ್ಲೇ ಕನ್ನಡಕ್ಕಾಗಿ ಹೋರಾಟ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಅ.18
ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ವಿಷಾದ ವ್ಯಕ್ತಪಡಿಸಿದರು
ಕಾವಲುಪಡೆಯ ಮೂರನೇ ವರ್ಷದ ಯಶಸ್ವಿ ಹೋರಾಟದ ಹಿನ್ನೆಲೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಜೊತೆಗೆ ಕನ್ನಡಿಗರು ಕನ್ನಡವನ್ನು ಹೆಚ್ಚೆಚ್ಚು ಬಳಸುವ ಮೂಲಕ ಕನ್ನಡ ಬೆಳೆಸಬೇಕಲ್ಲದೇ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಕನ್ನಡ ಭಾಷೆ ಬಗ್ಗೆ ಒಲವು ತೋರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಡವರಿಗೆ ತೊಂದರೆ ಬಂದಾಗ ಹೋರಾಟದ ಮೂಲಕ ನ್ಯಾಯ ಕೊಡಿಸುವಲ್ಲಿ ಸಂಘ ಸಂಸ್ಥೆಗಳು ಮುಖ್ಯ ಪಾತ್ರ ವಹಿಸುತ್ತವೆ. ಜಿಲ್ಲೆಯಲ್ಲಿ ನಾನಾ ಜ್ವಲಂತ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಧ್ವನಿ ಎತ್ತುವ ಮೂಲಕ ಜನಪರ ಹೋರಾಟ ಮಾಡಬೇಕಾಗಿದೆ. ಜನಪರ ಕೆಲಸ ಹೆಚ್ಚು ಮಾಡಬೇಕು. ಆದರೆ ಎಂಥ ಪರಿಸ್ಥಿತಿಯಲ್ಲೂ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಸಲಹೆ ನೀಡಿದರು.
ನೃತ್ಯ ಪ್ರದರ್ಶನ: ಇದಕ್ಕೆ ಮೊದಲು ಪ್ರಸಿದ್ಧ ಹಾಸನಾಂಬೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಸಿದ್ಧ ಸಾಹಿತಿಗಳ ಭಾವಚಿತ್ರವನ್ನು ಆಟೋ ಮೇಲೆ ಕೂರಿಸಿದ್ದು, ಆಕರ್ಷಣೀಯವಾಗಿತ್ತು. ನೃತ್ಯಾಂಜಲಿ ಕಲಾನಿಕೇತನದವರು ದೇಶ ಭಕ್ತಿ ಗೀತೆಗಳಿಗೆ ಅಮೋಘ ನೃತ್ಯ ಪ್ರದರ್ಶನ ನೀಡಿದರು.
ತಹಸೀಲ್ದಾರ್ ಮಂಜುನಾಥ್, ಲೀಲಾವತಿ, ರವಿ ನಾಕಲಗೂಡು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್. ಜನಾರ್ದನ್, ಸುಮುಖ, ಕಾನೂನು ಸಲಹೆಗಾರ ಕೇಶವಮೂರ್ತಿ, ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಚ್.ಎನ್. ನಟೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎಸ್. ನವೀನ್ಕುಮಾರ್, ಸಯೈದ್ ಎಜಾಸ್, ತಾಲ್ಲೂಕ್ ಅಧ್ಯಕ್ಷ ಬಿ.ವಿ. ಭಾನುಪ್ರಕಾಶ್, ಮಹಿಳಾ ಅಧ್ಯಕ್ಷೆ ವೀಣಾ, ನವೀನ್, ಪ್ರಸಾದ್ ಇದ್ದರು. ಸಮಾಜ ಸೇವಕ ಆರ್.ಕೆ. ಸ್ವರೂಪ್ ನಿರೂಪಿಸಿದದರು.
ಸಾಹಿತಿಗಳ ಭಾವಚಿತ್ರದ ಮೆರವಣಿಗೆ: ಹೆಸರಾಂತ ಸಾಹಿತಿಗಳ ಭಾವಚಿತ್ರದ ಮೆರವಣಿಗೆಗೆ ಹಾಸನಾಂಬ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಖ್ಯಾತ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಕುವೆಂಪು, ದ.ರಾ. ಬೇಂದ್ರೆ, ಶಿವರಾಂ ಕಾರಂತ್, ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಡಾ. ರಾಜಕುಮಾರ್, ಗೋಕಾಕ್ ಇವರ ಭಾವಚಿತ್ರವನ್ನು ಆಟೋ ಮೇಲೆ ನಿಲ್ಲಿಸಿ ಮೆರವಣಿಗೆ ಮಾಡಿದ್ದು ಸಾರ್ವಜನಿಕರ, ಸಾಹಿತ್ಯಾಸಕ್ತರ ತೀವ್ರ ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

