ಜಾತಿಯಿಂದ ಮನುಷ್ಯನ ಗುಣ ಅಳೆಯಬಾರದು: ಬಾಲಕೃಷ್ಣ
ಚನ್ನರಾಯಪಟ್ಟಣ: ಜಾತಿಯಿಂದ ಮನುಷ್ಯನ ಗುಣ ಅಳೆಯಬಾರದು. ಆತನ ಗುಣಗಳನ್ನು ನೋಡಿ ಗೌರವಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿಯಿಂದ ಉತ್ತಮ ಸ್ಥಾನ ರೂಪುಗೊಳ್ಳುವುದಿಲ್ಲ. ಆತ ಮಾಡುವ ಕೆಲಸದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಹೆಸರು ಶಾಶ್ವತವಾಗಿ ಜನಮನದಲ್ಲಿರ ಬೇಕಾದರೆ ಅವರು ಸಮಾಜಕ್ಕೆ ನೀಡುವ ಉತ್ತಮ ಅವರ ಸಾಧನೆ ಇತಿಹಾಸ ಸೇರುವುದರಿಂದ ಎಂದಿಗೂ ಅವರ ಹೆಸರು ಉಳಿಯುತ್ತದೆ. ಸಮಾಜದಲ್ಲಿ ಗುರುತರ ಕಾಯಕ ಮಾಡಿದ ವಾಲ್ಮೀಕಿ ಅವರ ನೆನಪು ಇಂದಿಗೂ ಅಜರಾಮರವಾಗಿ ನಿಂತಿದೆ ಎಂದು ನುಡಿದರು.
ವಾಲ್ಮಿಕಿ ಭವನ ನಿರ್ಮಾಣಕ್ಕೆ ನಿವೇಶನ ನೀಡುವ ಸಂಬಂಧ ಪಟ್ಟಣದಲ್ಲಿ ನಿವೇಶನದ ಕೊರತೆಯಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರಿಂದ ತೆರವುಗೊಳಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆಎಂದು ತಿಳಿಸಿದರು.
ಅಂಬೇಡ್ಕರ್ ಭವನಕ್ಕೆ ರು. 80 ಲಕ್ಷ: ಪಟ್ಟಣದಲ್ಲಿ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನಕ್ಕೆ 80 ಲಕ್ಷ ರು. ಮಂಜೂರಾತಿ ದೊರೆತಿದ್ದು, ತಕ್ಷಣದಲ್ಲಿಯೇ ಕಾಮಗಾರಿ ಪ್ರಾರಂಭಿಸಿ ಮುಂಬರುವ ಅಂಬೇಡ್ಕರ್ ಜಯಂತಿಯನ್ನು ಹೊಸದಾಗಿ ನಿರ್ಮಾಣವಾಗುವ ಭವನದಲ್ಲಿಯೇ ನೆರವೇರಿಸುವ ಗುರಿ ಹೊಂದಲಾಗಿದೆ ಎಂದರು.
ತಾಲೂಕಿನಲ್ಲಿ ವಯೋವೃದ್ದರು, ವಿಧವಾ ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ನೀಡುವ ಸಹಾಯಧನ ಮಂಜೂರಾತಿ ಕೋರಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ನ.1ರಂದು ದಿಡಗ ಗ್ರಾಮದಲ್ಲಿ ತಾಲೂಕಿನ ಒಂದು ಸಾವಿರ ಮಂದಿಗೆ ಮಂಜೂರಾತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು. ರೈತರು ಜಮೀನಿಗೆ ಸಂಬಂದಿಸಿದಂತೆ ಸಣ್ಣ ಪುಟ್ಟ ತಿದ್ದುಪಡಿಗಾಗಿ ತಾಲೂಕು ಕೇಂದ್ರಕ್ಕೆ ಬರುವುದನ್ನು ತಪ್ಪಿಸಲು ನ.1ರಂದು ದಿಡಗ ಗ್ರಾಮ ಪಂಚಾಯಿತಿಯಿಂದಲೇ ಪಹಣಿ ತಿದ್ದುಪಡಿ, ಮ್ಯುಟೇಶನ್ ಹಾಗೂ ಪೌತಿ ಖಾತೆ ಬದಲಾವಣೆಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಉಪನ್ಯಾಸಕ ಕೆ.ಭೀಮಪ್ಪ ಅವರು ಮಾತನಾಡಿ ಮಹರ್ಷಿ ವಾಲ್ಮಿಕಿ ಅವರ ಸಾಹಿತ್ಯ ಸೇವೆ ಎಂದಿಗೂ ಮರೆಯುವಂತಿಲ್ಲ ಎಂದರು.
ಶಿರಾದ ಮಹರ್ಷಿ ವಾಲ್ಮಿಕಿ ಮಠದ ವಾಲ್ಮಿಕಿ ಸಂಜಯಕುಮಾರ ಸ್ವಾಮೀಜಿ, ತಾಪಂ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್, ಜಿಪಂ ಸದಸ್ಯ ಶಿವಶಂಕರ್ಕುಂಠೆ, ಪುರಸಭಾಧ್ಯಕ್ಷ ಮಂಜಣ್ಣ, ತಾಲೂಕು ವಾಲ್ಮಿಕಿ ನಾಯಕ ಸಂಘದ ಅಧ್ಯಕ್ಷ ಗಣೇಶ್, ತಹಸೀಲ್ದಾರ್ ಡಾ.ನಾಗರಾಜು, ಸೋಮಶೇಖರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಾಲತಾ, ತಾಪಂ ಸಿಇಓ ಮೃತ್ಯುಂಜಯ, ಸಿಪಿಐ ಶೈಲೇಂದ್ರ ಉಪಸ್ಥಿತರಿದ್ದರು. ವಾಲ್ಮಿಕಿ ಅವರ ಭಾವಚಿತ್ರ ಹಾಗೂ ಸ್ತಬ್ಧಚಿತ್ರದ ಮರವಣಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿತು.
'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಲ್ಲ ಹಿಂದುಗಳ ಗುರಿ'
ಕ.ಪ್ರ.ವಾರ್ತೆ , ಹಾಸನ , ಅ.18
ಭಾರತ ದೇಶ ಹಿಂದುತ್ವದ ಮೇಲೆ ನಿಂತಿದ್ದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ದೇಶಾದ್ಯಂತದ ರಾಮ ಭಕ್ತರ ಗುರಿಯಾಗಿದೆ ಎಂದು ಆರ್.ಎಸ್.ಎಸ್. ಹಿರಿಯ ಮುಖಂಡ ಅನಂತ ನಾರಾಯಣ ತಿಳಿಸಿದರು.
ನಗರದ ಗಣಪತಿ ಪೆಂಡಾಲಿನಲ್ಲಿ ಶುಕ್ರವಾರ ನಡೆದ ಸಂಕಲ್ಪ ದಿನ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಸಮಾಜ ಧಾರ್ಮಿಕ ಹಾಗೂ ಸಾಮಾಜಿಕ ಗುರಿಗಳನ್ನು ಒಳಗೊಂಡಿದ್ದು, ಉತ್ತಮ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ಸರ್ಕಾರ ಜನರಿಗೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸಿಲ್ಲ. ಮತಾಂತರ ಹಾಗೂ ಭಯೋತ್ಪಾದನೆ ಚಟುವಟಿಕೆಗಳನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದ ಅವರು, ರಾಮಯಣ ರಚಿಸಿದ ವಾಲ್ಮೀಕಿ ಮಹರ್ಷಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.
ಆರ್ಎಸ್ಎಸ್ ಮೈಸೂರು ವಿಭಾಗಿಯ ಕಾರ್ಯವಾಹ ಲಕ್ಷ್ಮಿನರಸಿಂಹಶಾಸ್ತ್ರಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲು ನಾವೆಲ್ಲಾ ಸಂಕಲ್ಪ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿ ಎಲ್ಲರಿಗೂ ಸಂಕಲ್ಪ ಪಠಣ ಮಾಡಿಸಿದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀನಿವಾಸ್ಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

