ಹಾಸನ

ಇಂದು ಕೋಡಿಮಠಕ್ಕೆ ವಿ. ಸೋಮಣ್ಣ ಭೇಟಿ

Published On :

ಹಾಸನ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಜಿ ಸಚಿವ ವಿ. ಸೋಮಣ್ಣ ಅ. 19 ರಂದು ಬೆಳಗ್ಗೆ 10 ಕ್ಕೆ ಅರಸೀಕೆರೆ ಸಮೀಪ ಇರುವ ಕೋಠಿಮಠಕ್ಕೆ ಭೇಟಿ ನೀಡಿ, ಅಲ್ಲಿನ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳೊಡನೆ ಮಾತುಕತೆ ನಡೆಸುವರು ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಆರ್. ರವಿ ತಿಳಿಸಿದ್ದಾರೆ. ಸೋಮಣ್ಣ ಯಾವ ಉದ್ದೇಶಕ್ಕಾಗಿ ಬರುತ್ತಿದ್ದಾರೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿಗತಿ ಏನಾಗುತ್ತದೆ ಎಂಬ ಬಗ್ಗೆ ಭವಿಷ್ಯ ಕೇಳಲು ಬರುತ್ತಿರಬಹುದು ಎಂದು ರಾಜಕೀಯ ವಲಯದಲ್ಲಿ  ಹೇಳಲಾಗುತ್ತಿದೆ.
ದೇವಾಲಯದಲ್ಲಿನ ಗಣಪತಿ ವಿಗ್ರಹ ಕಳವಿಗೆ ವಿಫಲ ಯತ್ನ
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿಯ ಇತಿಹಾಸ ಪ್ರಸಿದ್ಧ ಸದಾಶಿವ ಸ್ವಾಮಿ ದೇವಾಲಯದಲ್ಲಿನ ಗಣಪತಿ ವಿಗ್ರಹ ಕಳವು ಯತ್ನ  ವಿಫಲವಾಗಿದೆ. ಗುರುವಾರ ರಾತ್ರಿ ಕಳ್ಳರ ತಂಡ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಗೆ ಸೇರಿದ ಸದಾಶಿವ ಸ್ವಾಮಿ ದೇಗುಲದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ಕಲ್ಲಿನ ಸುಂದರ ಗಣಪತಿ ವಿಗ್ರಹವನ್ನು ದೇಗುಲದ ಕಾಂಪೌಂಡ್ ವರಗೆ ತಂದು ಅಲ್ಲಿಂದ ಸಾಗಿಸಲಾಗದೆ, ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗಣಪತಿ ಮೂರ್ತಿಯನ್ನು  ಐದು ಅಡಿಗೂ ಎತ್ತರವಿರುವ ಕಾಂಪೌಂಡಿನ ಗೋಡೆಯವರಗೆ ಎತ್ತಲಾಗದ ಕಳ್ಳರು ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಳೆದ ವರ್ಷ ನುಗ್ಗೇಹಳ್ಳಿಯ ಹೊರ ಭಾಗದಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿಯ ದೇವಸ್ಥಾನದಲ್ಲಿದ್ದ ವಿಗ್ರಹವನ್ನು ವಿರೂಪಗೊಳಿಸಲಾಗಿತ್ತು. ಈಗ ದೇವಸ್ಥಾನದಲ್ಲಿನ ಮೂರ್ತಿಯ ಕಳವು ಯತ್ನ ನಡೆದಿರುವ ಬಗ್ಗೆ ಜನತೆ ಆತಂಕಗೊಂಡಿದ್ದಾರೆ.
ವಾಲ್ಮೀಕಿ ಜಯಂತಿ ಮೆರವಣಿಗೆಗೆ ಸಚಿವ ಚಾಲನೆ
ಹಾಸನ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ಅಧಿಕಾರಿ ರಶ್ಮಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಉಪ ವಿಭಾಗಾಧಿಕಾರಿ ಬಿ.ಶರತ್, ತಹಸೀಲ್ದಾರ್ ಮಂಜುನಾಥ್, ನಗರಸಭೆ ಆಯುಕ್ತ ನಾಗಭೂಷಣ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ ಮತ್ತಿತರ ಅಧಿಕಾರಿಗಳು ಹಾಗೂ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಡಳಿತ, ಜಿಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ   ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆ ನಾನಾ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ಭವನ ತಲುಪಿತು.
21 ರಿಂದ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ
ಹಾಸನ: ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆಯುಷ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಅ. 21,22 ಮತ್ತು 23 ರಂದು ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ನೆಲಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ ಎಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿರ್ದೇಶಕ ಹಾಗೂ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದ್ದಾರೆ. ಆಸಕ್ತ ಜಿಲ್ಲಾ ಮತ್ತು ರಾಜ್ಯ ಪಾರಂಪರಿಕ ವೈದ್ಯರು ಮತ್ತು ಸಾರ್ವಜನಿಕರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ. ಸಮ್ಮೇಳನದಲ್ಲಿ ವಾತವ್ಯಾಧಿ, ಸಂಧಿಗತರೋಗ, ಹಳೇ ನೋವುಗಳು, ಶ್ವಾಶತರೋಗ, ಸ್ತ್ರೀರೋಗ, ಚರ್ಮರೋಗ, ಮಧುಮೇಹ, ಶಿರೋರೋಗ, ನೇತ್ರರೋಗ, ಉದರರೋಗ, ಕಿವಿ, ಮೂಗು, ಗಂಟಲುರೋಗ, ಬಾಲರೋಗ, ನರರೋಗ, ಪಾರ್ಶ್ವವಾಯು, ಮರ್ಮಚಿಕಿತ್ಸೆ ಮತ್ತು ಗ್ಯಾಸ್ಟ್ರಿಕ್, ಅಸಿಡಿಟಿ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.
ಕಾಲು ಬಾಯಿ ಜ್ವರದ ಬಗ್ಗೆ ನಿಗಾ ಇಡಲು ಸೂಚನೆ
ಸಕಲೇಶಪುರ: ರಾಜ್ಯಾದ್ಯಂತ ಜಾನುವಾರುಗಳಿಗೆ ಹರಡುತ್ತಿರುವ ಮಹಾ ಮಾರಿ ಕಾಲುಬಾಯಿ ಜ್ವರ ಸಂಬಂಧ, ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿಸುವುದರಿಂದ ಈ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿದ್ದೇಗೌಡ ತಿಳಿಸಿದರು. ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ಸಾರ್ವಜನಿಕರು ಪಶು ಪಾಲನಾ ಇಲಾಖೆ ಅಥವಾ ತಾಲೂಕು ಪಂಚಾಯ್ತಿಗೆ ತಿಳಿಸಿದಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಹಾಯ ದೂರವಾಣಿ - 08173 244008. 08173 244241.      
21 ರಂದು ಪೊಲೀಸ್ ಹುತಾತ್ಮರ ದಿನ
ಹಾಸನ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಅ 21ರಂದು ಬೆಳಗ್ಗೆ 8 ಕ್ಕೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ (ಡಿ.ಎ.ಆರ್.) ಪೊಲೀಸ್ ಹುತಾತ್ಮರ ದಿನಾಚರಣೆ ಏರ್ಪಡಿಸಲಾಗಿದೆ. ಜಿಲ್ಲಾ ಮತ್ತು ಸೆಷನ್ಸ್  ನ್ಯಾಯಾಧೀಶ ಬಿ.ಎಸ್. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಕಲಚೇತನರ ಕುರಿತ ರಾಜ್ಯ
ಕವಿಗೋಷ್ಠಿ
ಹಾಸನ: ಮಂಡ್ಯ ಜಿಲ್ಲೆಯ ಪಾಂಡವಪುರದ ಪರಿವರ್ತನ ಫೌಂಡೇಷನ್ ವತಿಯಿಂದ  ವಿಕಲಚೇತನರನ್ನು  ಕುರಿತು ನವೆಂಬರ್‌ನಲ್ಲಿ ರಾಜ್ಯಮಟ್ಟದ  ವಿಶೇಷ ಕವಿಗೋಷ್ಠಿಯನ್ನು ಅಂಕೇಗೌಡರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ ಕಾರ್ಯದರ್ಶಿ ಕೋ.ಪು. ಗುಣಶೇಖರ್ ತಿಳಿಸಿದರು.
 ಕವಿಗೋಷ್ಠಿಯಲ್ಲಿ ವಿಕಲಚೇತನರ ನೋವು ನಲಿವು  ಬದುಕು ಬವಣೆ ಮತ್ತು ಅವರ ಬದುಕಲ್ಲಿ ಆತ್ಮವಿಶ್ವಾಸ ತುಂಬುವಂತಹ ವಸ್ತು ವಿಷಯವನ್ನು  ಹೊಂದಿರುವ ಗರಿಷ್ಟ  20 ಸಾಲಿನೊಳಗೆ ಇರುವ ಮೂರು ಕವನಗಳನ್ನು ಅ.30 ರೊಳಗೆ  ಕಳುಹಿಸಬಹುದಾಗಿದೆ.
 ಇದರಲ್ಲಿ ಆಯ್ಕೆಯಾದ ಒಂದು  ಕವನವನ್ನು ಮಾತ್ರ ವಾಚಿಸಲು  ಅವಕಾಶವಿದೆ. ಈ  ಕವಿಗೋಷ್ಠಿಯಲ್ಲಿ ಯಾರು ಬೇಕಾದರೂ ಮುಕ್ತವಾಗಿ  ಭಾಗವಹಿಸಿ ವಾಚಿಸಲು ಅವಕಾಶವಿದೆ. ವಾಚಿಸಿದ  ಕವನವನ್ನು  ಪುಸ್ತಕದ ರೂಪದಲ್ಲಿ  ಹೊರ ತರುತ್ತಿದ್ದು,  ವಿಕಲಚೇತನರ  ಊರುಗೋಲು ಪತ್ರಿಕೆಯಲ್ಲಿ  ಪ್ರಕಟಿಸಲಾಗುವುದು.
  ಕವಿಗೋಷ್ಠಿಗೆ  ಆಯ್ಕೆಯಾದವರಿಗೆ  ಮಾತ್ರ ವಾಚಿಸಲು ಅವಕಾಶವಿದೆ.  ಅತ್ಯುತ್ತಮ  ಕವನಗಳಿಗೆ  ಪ್ರಥಮ, ದ್ವಿತೀಯ ಮತ್ತು  ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಕವಿಗಳಿಗೂ  ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
  ಹೊರ ಜಿಲ್ಲೆಯಿಂದ  ಬರುವ ಕಾಲೇಜು ವಿದ್ಯಾರ್ಥಿಗಳು ಹಾಗೂ  ಕವಿಗಳು ಹಾಗೂ ಅಂಗವಿಕಲರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಕವನದೊಂದಿಗೆ ಇತ್ತೀಚಿನ ಒಂದು ಭಾವಚಿತ್ರದೊಂದಿಗೆ ಪೂರ್ಣ ಅಂಚೆ ವಿಳಾಸ  ಹಾಗೂ ದೂರವಾಣಿ - ಕೋ.ಪು. ಗುಣಶೇಖರ್, ಕಾರ್ಯದರ್ಶಿ, ಪರಿವರ್ತನ ಫೌಂಡೇಷನ್, ಎನ್.ಎಂ. ರಸ್ತೆ,  ಪಾಂಡವಪುರ ಟೌನ್, ಮಂಡ್ಯ ಜಿಲ್ಲೆ - 571434 ಈ ವಿಳಾಸಕ್ಕೆ ಕಳುಹಿಸಿಕೊಡಲು  ಕೋರಿದೆ.
 ಹೆಚ್ಚಿನ  ವಿವರಗಳಿಗೆ  ಕೋ.ಪು. ಗುಣಶೇಖರ್ - 9980306012, 9141316818, ಯುವ ಸಾಹಿತಿ ಟಿ.ಸತೀಶ್ ಜವರೇಗೌಡ ಮಂಗಲ - 9880264678 ಸಂಪರ್ಕಿಸಿ.
ಜಿಲ್ಲಾ ಕೋರ್ಟ್
ಘಟಕದಲ್ಲಿ ನಾನಾ ಹುದ್ದೆಗಳಿಗೆ ಅರ್ಜಿ
ಹಾಸನ: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 2 ಆದೇಶ ಜಾರಿಕಾರರು, ಮತ್ತು 5 ಸೇವಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 18 ರಂದು ಕಡೆಯ ದಿನವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರ ಕಚೇರಿ ಪ್ರಕಟಣೆ ತಿಳಿಸಿದೆ.    
 ಆದೇಶ ಜಾರಿಕಾರರ ಹುದ್ದೆಗೆ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ  ಉರ್ತ್ತೀತೆ. ಸೇವಕರ ಹುದ್ದೆಗೆ ವಿದ್ಯಾರ್ಹತೆ ಕನ್ನಡ ಮಾಧ್ಯಮದಲ್ಲಿ 7ನೇ ತರಗತಿ ತೇರ್ಗಡೆ ಹೊಂದಿರಬೇಕು. ವಯೋವುತಿ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋವುತಿ ಸಾಮಾನ್ಯ ವರ್ಗಕ್ಕೆ 35 ವರ್ಷ, ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ವರ್ಗಕ್ಕೆ-38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ಕ್ಕೆ -40 ವಯೋವುತಿಯಾಗಿದೆ.
 ಹೆಚ್ಚಿನ ಮಾಹಿತಿಗಾಗಿ ಹಾಸನದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿ ಅಥವಾ ಹಾಸನ ಜಿಲ್ಲೆಯ ಎಲ್ಲಾ ಅಧೀನ ನ್ಯಾಯಾಲಯಗಳ ಕಚೇರಿಗಳಲ್ಲಿ ಮತ್ತು ರಾಜ್ಯದ ಇತರೆ ಜಿಲ್ಲಾ ನ್ಯಾಯಾಧೀಶರ ಕಾರ್ಯಾಲಯದಲ್ಲಿ ಪಡೆಯಬಹುದು.
ಗ್ರಾಮ ಸ್ವರಾಜ್ಯಕ್ಕೆ ಹತ್ತಿರವಾದ ಶಿಕ್ಷಣ
ಬೇಲೂರು: ವಿದ್ಯಾರ್ಥಿಗಳಲ್ಲಿ  ಮಾನವೀಯ ಮೌಲ್ಯಗಳು ಉಳಿಯ ಬೇಕಾದರೆ ಶಿಬಿರಗಳಿಂದ ಮಾತ್ರ ಸಾಧ್ಯ. ಏಳು ದಿನಗಳು ಸ್ವಯಂ ಸೇವಕರು ಪಠ್ಯದಲ್ಲಿ ಇಲ್ಲದ ಹೆಚ್ಚಿನ ವಿಚಾರವನ್ನು  ಇಂಥ ಶಿಬಿರಗಳಿಂದ ಕಲಿಯುತ್ತಾರೆ. ಇದು ಬಯಲು ಶಿಕ್ಷಣ ಎನಿಸುತ್ತದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯಕ್ಕೆ ಹತ್ತಿರವಾದ ಶಿಕ್ಷಣವಾಗಿದೆ ಎಂದು  ಹಾಸನ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕಿ ಎ. ದೀಪಾ ರಘುನಂದನ್ ಹೇಳಿದರು. ಹಾಸನದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ತಾಲೂಕಿನ ಸಂಪಿಗೆಮರದ ಕೊಪ್ಪಲು ಗ್ರಾಮದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎ. ವಿಜಯಲಕ್ಷ್ಮಿ  ಶಿಬಿರದ ನೆನಪುಗಳು ಬದುಕಿನ ಬೆಳಕಾಗಲಿ ಎಂದು ಆಶಿಸಿದರು. ಉಪನ್ಯಾಸಕ ಬಿ.ಎಚ್. ಅಪ್ಪಾಜಿಗೌಡ ಶಿಬಿರ ಯಶಸ್ವಿಯಾದ ಬಗ್ಗೆ  ಶ್ಲಾಘಿಸಿದರು. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ನಾಗರಾಜೇಗೌಡ, ನಾಗರಾಜು, ಬೀರೇಗೌಡ ಮತ್ತು ಗ್ರಾಮ ಮುಖಂಡ ನಂಜುಂಡೇಗೌಡ ಇದ್ದರು. ಸಹಶಿಬಿರಾಧಿಕಾರಿ ಶ್ರೀನಿವಾಸ ವಂದಿಸಿದರು. ಇಲ್ಲಿನ ಹೈಸ್ಕೂಲ್ ಆವರಣದಲ್ಲಿ ನೂರು ಸಸಿಗಳನ್ನು ನೆಡಲಾಯಿತು.
ಕಾಡಾನೆ ಹಾವಳಿ: ಭಯಭೀತ ಜನತೆ
ಸಕಲೇಶಪುರ: ತಾಲೂಕಿನ ಜನತೆ ಮತ್ತೆ ಕಾಡಾನೆಗಳ ಹಾವಳಿಯಿಂದ ಭಯಭೀತರಾಗಿದ್ದಾರೆ. ತಾಲೂಕಿನ ಕ್ಯಾನಹಳ್ಳಿ ಸಮೀಪ ಕಳೆದ ಎರಡು ದಿನಗಳಿಂದ 4 ಮರಿ ಆನೆಗಳು ಸೇರಿದಂತೆ ಸುಮಾರು 6 ಆನೆಗಳು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ. ಹುಲ್ಲಹಳ್ಳಿ ಹಾಗೂ ಕ್ಯಾನಹಳ್ಳಿ ಭಾಗದಲ್ಲಿ ಬೀಡುಬಿಟ್ಟಿದ್ದ 6 ಕ್ಕೂ ಹೆಚ್ಚು ಕಾಡಾನೆಗಳು ಅಪಾರ ಪ್ರಮಾಣದ ಭತ್ತ, ಏಲಕ್ಕಿ, ಕಾಫಿ, ಶುಂಠಿ ಹಾಗೂ ಬಾಳೆ ಬೆಳೆಗಳನ್ನು ಸಂಪೂರ್ಣ ನಾಶ ಪಡಿಸಿವೆ. ಗುರುವಾರ ಬೆಳಗ್ಗೆ 10 ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಅರಣ್ಯದತ್ತ ಅಟ್ಟಲು ಪಟ್ಟ ಪ್ರಯತ್ನ ವಿಫಲವಾಗಿದೆ. ಶುಕ್ರವಾರ ಸಹ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿಯೇ ವಾಸ್ತವ್ಯವಿದ್ದು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಯತ್ನ ಮುಂದುವರಿಸಿದ್ದಾರೆ.
ಕಾನೂನು ತಿಳಿವಳಿಕೆ ಇಲ್ಲದೆ ಅಪರಾಧ ಹೆಚ್ಚಳ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಅನಕ್ಷರತೆ ಹಾಗೂ ಕಾನೂನು ತಿಳಿವಳಿಕೆ ಇಲ್ಲದ ಕಾರಣ ಅಪರಾಧ ಪ್ರಕರಣಗಳು  ಹೆಚ್ಚುತ್ತಿವೆ ಎಂದು ಆರಕ್ಷಕ ಉಪನಿರೀಕ್ಷಕ ಕೆ. ಜಗದೀಶ್ ಹೇಳಿದರು.
ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತಾ ರಥ, ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಬಹುದು. ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.