ಒಂದೇ ಪಕ್ಷದ ಮುಖಂಡರಿಂದ ಪ್ರತ್ಯೇಕ ಸುದ್ದಿಗೋಷ್ಠಿ...
ಹಾಸನ: ಜಿಲ್ಲೆಯ ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ ನಡೆಸಲು ಪೈಪೋಟಿ ಏರ್ಪಟ್ಟಿದೆ. ಒಂದೇ ವಿಷಯ ಹೇಳಲು ಇಬ್ಬರು ಕಾಂಗ್ರೆಸ್ ಮುಖಂಡರು ಶನಿವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ್ದು ವಿಲಕ್ಷಣ ಮಾತ್ರವಲ್ಲ, ವಿಪರ್ಯಾಸಕರ ಘಟನೆಯೂ ಹೌದು.
ಮುಖ್ಯಮಂತ್ರಿಯೋ, ಸಚಿವರೋ ಅಥವಾ ಪಕ್ಷದ ರಾಜ್ಯ ಮುಖಂಡರೋ ನಗರಕ್ಕೆ ಆಗಮಿಸಿದಾಗ ಬೀದಿ ಬೀದಿಗಳಲ್ಲಿ ಫ್ಲೆಕ್ಸ್ ಹಾಕಿಸಿ ಗಮನ ಸೆಳೆಯಲು ಸೆಣಸಾಟ ನಡೆಸುವ ಸ್ಥಳೀಯ ಮುಖಂಡರು ಈಗ ಸುದ್ದಿಗೋಷ್ಠಿ ನಡೆಸಲು ಪೈಪೋಟಿಗೆ ಬಿದ್ದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕೆಪಿಸಿಸಿ ಸದಸ್ಯ ವಿನಯಗಾಂಧಿ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ ಅವರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದರು. ವಿಷಯ ಜನಪರ ಕಾಳಜಿಯಿಂದ ಕೂಡಿರುವಂಥದ್ದೇನು ಅಲ್ಲ. ಅಕ್ಟೋಬರ್ 22 ರಂದು, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಹಾಸನಕ್ಕೆ ಭೇಟಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸುತ್ತಾರೆ ಎಂಬುದು. ಈ ವಿಷಯವನ್ನು ಹೇಳಲು ಇಬ್ಬರು ಮುಖಂಡರು ಪ್ರತ್ಯೇಕ ಸುದ್ದಿಗೋಷ್ಠಿ ಕರೆಯುವ ಅವಶ್ಯಕತೆ ಇತ್ತಾ ಎಂಬುದು ಪ್ರಶ್ನೆ.
ಮುಖಂಡರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಹೀಗೆ..
ಕೆಪಿಸಿಸಿ ಸದಸ್ಯ ವಿನಯಗಾಂಧಿ
ಅ. 22 ರಂದು ಪರಮೇಶ್ವರ್ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಕರೆದಿರುವುದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಂತಾಗಿದೆ. ಪಕ್ಷದಲ್ಲಿನ ಈ ರೀತಿಯಾದ ಬೆಳವಣಿಗೆಯಿಂದ ಸಮಗ್ರ ರೀತಿಯಲ್ಲಿ ಸಂಘಟನೆಯಾಗುವುದರಲ್ಲಿ ಅನುಮಾನವಿಲ್ಲ. ಇದರಿಂದ ಜಿಲ್ಲೆಯಾದ್ಯಂತ ಕಾಂಗ್ರೆಸ್ಗೆ ಆನೆ ಬಲ ಬಂದಂತಾಗಿದೆ. ಈ ರೀತಿಯಾದ ಪಕ್ಷದ ಕಾರ್ಯಚಟುವಟಿಕೆಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ ಎಂದರು. ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷರು ಆಗಮಿಸುವ ಸಂದರ್ಭದಲ್ಲಿ ಪೂರ್ಣಕುಂಭ ಮತ್ತು ವೇದಘೋಷಗಳಿಂದ ಅದ್ಧೂರಿ ಸ್ವಾಗತ ಕೋರಲು ಸಾವಿರಾರು ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ರ್ಯಾಲಿ ನಡೆಸಲಿದ್ದಾರೆ. ಈ ರ್ಯಾಲಿಯಲ್ಲಿ ವಿಶೇಷವೆಂದರೆ ಅಧ್ಯಕ್ಷ ಪರಮೇಶ್ವರ್ ಸಹ ದ್ವಿಚಕ್ರ ವಾಹನ ಚಾಲನೆ ಮಾಡಲಿದ್ದಾರೆ ಎಂದರು. ಜಿ.ಪಾಂಡುರಂಗ ಇತರರು ಇದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ
ಅ.22ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜಿಲ್ಲೆಗೆ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಣಿ ಸಭೆಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯ ಸೆಲ್ವಕುಮಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಚರ್ಚೆ ನಡೆಸಲಿದ್ದು, ಬೂತ್ ಮಟ್ಟದ ಕಾರ್ಯಕ್ರಮಗಳ ವೀಕ್ಷಣೆ ನಡೆಸಲಿದ್ದಾರೆ ಎಂದು ಹೇಳಿದರು. ಮುಖಂಡರಾದ ಬೋಜರಾಜ, ಬಾಲಶಂಕರ್, ಕೆಲವತ್ತಿ ಸೋಮಣ್ಣ, ಪರ್ವೀಜ್ಪಾಶ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

