ಹಾಸನ

ರು. 3.30 ಲಕ್ಷ ಕಚೇರಿ ನಿರ್ವಹಣೆ, ಪ್ರಯಾಣ ಭತ್ಯೆ ಲೆಕ್ಕ

Published On :

ಹೊಳೆನರಸೀಪುರ: ಭಾರತ ಆಹಾರ ನಿಗಮ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಹುಳುಗಳಿಂದ ಕೂಡಿದ ಹಾಗೂ ಪುಡಿಯಾದ ಕಳಪೆ ಗೋದಿಯನ್ನು ಆಹಾರ ಇಲಾಖೆಯ ಮೂಲಕ ವಿತರಿಸಿದೆ. ಅಲ್ಲದೇ ಇಲ್ಲಿನ ಬಿಸಿಎಂ ಇಲಾಖೆ ಅಧಿಕಾರಿ ಕಳೆದ ಎಂಟು ತಿಂಗಳಿನಲ್ಲಿ ತಾವು ಹಾಗೂ ಸಿಬ್ಬಂದಿ ಕಚೇರಿ ಕೆಲಸ ನಿರ್ವಹಣೆಗಾಗಿ ತಿರುಗಾಡಿದ ಕಾರಣಕ್ಕಾಗಿ ಪ್ರಯಾಣ ಭತ್ಯೆಯಾಗಿ ಲೆಕ್ಕವನ್ನೇ ನೀಡದೆ 3.30 ಲಕ್ಷ ರು.ಗಳನ್ನು ಭ್ರಷ್ಟಾಚಾರ ಎಸಗಿರುವ ಶಂಕೆ. ಜಿಲ್ಲಾ ಲೋಕಾಯುಕ್ತ ಎಸ್ಪಿ ವೇದಮೂರ್ತಿ ತಂಡವು ಮಂಗಳವಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದವು.
  ಲೋಕಾಯುಕ್ತ ತಂಡ ಇಲ್ಲಿನ ತಾಲೂಕು ಕಚೇರಿ ಕಟ್ಟಡದಲ್ಲಿನ ಉಪ ಖಜಾನೆಗೆ ಭೇಟಿ ನೀಡಲೆಂದು ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಆಲಗೌಡನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಹುಳುಗಳಿಂದ ಕೂಡಿರುವ ಹಾಗೂ ಹೊಟ್ಟಿನಂತಾಗಿರುವ ಕಳಪೆ ಗುಣಮಟ್ಟದ ಗೋಧಿಯನ್ನು ವಿತರಿಸಿರುವುದಾಗಿ ಗ್ರಾಹಕರೊಬ್ಬರು ಲೋಕಾಯುಕ್ತರನ್ನು ಕಂಡು ಕಳಪೆ ಗುಣಮಟ್ಟದ ಗೋದಿಸಮೇತವಾಗಿ ದೂರು ನೀಡಿದರು.
 ಸ್ಥಳದಲ್ಲೇ ಇದ್ದ ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಶರತ್ ಅವರೊಂದಿಗೆ ಕಳಪೆ ಗುಣಮಟ್ಟದ ಗೋದಿಯನ್ನು ಪರಿಶೀಲನೆ ನಡೆಸಿದ ವೇದಮೂರ್ತಿ ಕೂಡಲೇ ತಮ್ಮ ಸಹೋದ್ಯೋಗಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಶಾಂತಿನಾಥ್ ಅವರನ್ನು ಕಳಪೆ ಗುಣಮಟ್ಟದ ಗೋದಿಯನ್ನು ವಿತರಿಸಿರುವ ಆಲಗೌಡನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಇದೇ ರೀತಿಯ ಕಳಪೆ ಗೋದಿಯಿದ್ದಲ್ಲಿ ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದರು.
 ಹಲವು ದೂರುಗಳನ್ನು ಹೊತ್ತು ಲೋಕಾಯುಕ್ತ ಎಸ್ಪಿಯವರನ್ನು ಭೇಟಿ ಮಾಡಲು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಎಚ್.ಆರ್.ನಾರಾಯಣ ಹಾಗೂ ಹೊನ್ನಿಕೊಪ್ಪಲು ಮಂಜೇಗೌಡ, ಕೆ.ಆರ್.ಸುದರ್ಶನ್ ಮೊದಲಾದವರು ಪಟ್ಟಣದಲ್ಲಿನ ಆಹಾರ ಇಲಾಖೆಯ ಗೋಡೌನ್‌ಗೆ ತೆರಳಿ ಕಳಪೆ ಗೋದಿಯ ವಿತರಣೆ ಕುರಿತು ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ಎಸ್ಪಿಯವರನ್ನು ಕೋರಿದರು.
 ಕೂಡಲೇ ಆಹಾರ ಇಲಾಖೆಯ ಗೋಡೌನ್‌ಗೆ ತೆರಳಿದ ಲೋಕಾಯುಕ್ತರು ಅಲ್ಲಿ ಪರಿಶೀಲಿಸಲಾಗಿ ಅಲ್ಲಿಯೂ ಕಳಪೆ ಗುಣಮಟ್ಟದ ಗೋದಿಯ ದಾಸ್ತಾನು ಇರುವುದನ್ನು ಪತ್ತೆ ಹಚ್ಚಿ, ಇಂತಹ ಕಳಪೆ ಗುಣಮಟ್ಟದ ಗೋದಿಯನ್ನು ವಿತರಿಸದಂತೆ ಎಚ್ಚರಿಸಿದರಲ್ಲದೇ, ಭಾರತ ಆಹಾರ ನಿಗಮದಿಂದ ಈ ಕುರಿತು ವಿವರಣೆ ನೀಡುವಂತೆ ಸೂಚಿಸಲಾಯಿತು.
 ಇಲ್ಲಿನ ಬಿಸಿಎಂ ಇಲಾಖೆಯ ಅಧಿಕಾರಿ ತಿಮ್ಮೇಗೌಡ ಹಾಗೂ  ಸಿಬ್ಬಂದಿ ಜ.2013ರಿಂದ ಆ.2013ರವರೆಗೆ ಇಲಾಖೆಯ ಜಿಲ್ಲಾ ಕಚೇರಿ, ತಾಲೂಕಿನ ಹಾಸ್ಟೆಲ್ ಹಾಗೂ ಇನ್ನಿತರ ಕಡೆಗಳಿಗೆ ಓಡಾಡಿರುವ ಪ್ರಯಾಣ ಭತ್ಯೆಯೆಂದು 3.30 ಲಕ್ಷ ರು.ಗಳನ್ನು ಸಂಬಂಧಿಸಿದ ಪ್ರಯಾಣದ ದಾಖಲಾತಿ ನೀಡದೆ ಹಣವನ್ನು ಡ್ರಾ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಿ ವರದಿ ನೀಡುವಂತೆ ಜಿಲ್ಲಾ ಬಿಸಿಎಂ ಅಧಿಕಾರಿ ಜಗದೀಶ್ ಅವರಿಗೆ ಲೋಕಾಯುಕ್ತರು ಸೂಚಿಸಿದರು.
 ಇದೇ ಸಂದರ್ಭದಲ್ಲಿ ಪಟ್ಟಣದ ಬಸ್‌ನಿಲ್ದಾಣ ಮುಂಬಾಗದ ಆಟೋ ನಿಲ್ದಾಣದ ಬಳಿಯಲ್ಲಿನ ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸದೇ ಇರುವ ಕುರಿತಂತೆ, ಇಲ್ಲಿನ ಅಂಬೇಡ್ಕರ್ ನಗರ ಬಡಾವಣೆಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಗಳ ಕುರಿತಂತೆ ಕಾಂಗ್ರೆಸ್‌ನ ಕೆಲವರು ಲೋಕಾಯುಕ್ತ ಎಸ್ಪಿಯವರನ್ನು ಸ್ಥಳಕ್ಕೆ ಕರದೊಯ್ದು ಅವ್ಯವಸ್ಥೆಯನ್ನು ಪರಿಚಯಿಸಿದರು. ನಂತರ ಪುರಸಭೆಗೆ ಭೇಟಿ ನೀಡಿ ಪಟ್ಟಣದಲ್ಲಿ ನಡೆದಿರುವ ಕೆಲ ಕಾಮಗಾರಿಗಳಲ್ಲಿನ ಅವ್ಯವಸ್ಥೆ ಹಾಗೂ ಗುಣಮಟ್ಟದ ಕುರಿತಾದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ಕಚೇರಿ ಅಧಿಕಾರಿಗಳಿಂದ ವಿವರಣೆ ಪಡೆದರು.
 ಪುರಸಭೆಯ ಕಾರ್ಯವೈಖರಿಯ ಕುರಿತಂತೆ ಸಾಕಷ್ಟು ದೂರುಗಳು ಲೋಕಾಯುಕ್ತರ ಎದುರು ವ್ಯಕ್ತವಾದವು. ಅವುಗಳಲ್ಲಿ ಪ್ರಮುಖವಾಗಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಾವಿರಾರು ಜನರಿಗೆ ನಿವೇಶನಗಳನ್ನು ವಿತರಿಸಿದ್ದು, ಅವುಗಳ ಮೂಲ ದಾಖಲಾತಿಗಳನ್ನು ನೀಡದಿರುವ ಕುರಿತಂತೆ ಪುರಸಭೆ ಮಾಜಿ ಸದಸ್ಯ ಹೊನ್ನಿಕೊಪ್ಪಲು ಮಂಜೇಗೌಡ ಆರೋಪಿಸಿದರು.
 ಅಲ್ಲದೇ ಪರಿಶಿಷ್ಟರು ವಾಸಿಸುವ ಬಡಾವಣೆಗಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ತಾರತಮ್ಯ ಮಾಡಲಾಗುತ್ತಿದೆ ಎಂದು ಎಚ್.ಆರ್.ನಾರಾಯಣ ದೂರಿದರು.
 ಪಟ್ಟಣಕ್ಕೆ ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ತಾವು ನೀಡಿದ್ದ ಸೂಚನೆಗಳು ಹಾಗೂ ಅವುಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದ ಲೋಕಾಯುಕ್ತರು, ಈ ಕುರಿತಂತೆ ಉಪ-ಖಜಾನೆಯಲ್ಲಿ ಬಾಕಿ ಉಳಿಸಿಕೊಂಡಿದ್ದ ನೂರಾರು ವಿವಿಧ ಪಿಂಚಣಿಗಳನ್ನು ವಿಲೇ ಮಾಡಿರುವ ಕುರಿತು ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.