ದೇಶಾದ್ಯಂತ 3 ಲಕ್ಷ ರೈತರು ಆತ್ಮಹತ್ಯೆ
ಕ.ಪ್ರ.ವಾರ್ತೆ , ಹಾಸನ , ಅ.24
ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುತ್ತಿದ್ದು, ಇದರ ಪರಿಣಾಮ ರೈತರಿಗೆ ಬೆಂಬಲ ಬೆಲೆಯೂ ಇಲ್ಲ. ಸರಿಯಾದ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲದಂತಾಗಿ ಕೃಷಿಯಲ್ಲಿ ಆದಾಯ ಕಡಿಮೆಯಾಗುತ್ತಿದೆ. ಇದರಿಂದ ಬೇಸತ್ತ ದೇಶದಲ್ಲಿ ಇದುವರೆಗೂ ಸುಮಾರು 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಪ್ರಾಂತ ರೈತ ಸಂಘ ಮತ್ತು ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ರೈತ ಕೃಷಿ ಕೂಲಿಕಾರರಿಗಾಗಿ ಭೂ ನೀತಿಯೋ ಅಥವಾ ಬಹುರಾಷ್ಟೀಯ ಕಂಪನಿಗಳಿಗಾಗಿಯೋ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾನ್ಪಡೆ ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಅನುಸರಿಸುತ್ತಿರುವ ರೈತ ವಿರೋಧಿ ನೀತಿಗಳಿಂದಾಗಿ ಕೃಷಿ ಅತ್ಯಂತ ಬಿಕ್ಕಟ್ಟಿಗೆ ತುತ್ತಾಗಿದೆ. 1966 ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು 1961ರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ರೈತರಿಂದ ಭೂಮಿಯನ್ನು ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪೆನಿಗಳಿಗೆ ವರ್ಗಾಯಿಸುತ್ತಿದ್ದು ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ವಿಷಾದಿಸಿದರು.
ನ.7, 8ರಂದು ಅಹೋರಾತ್ರಿ ಧರಣಿ: ರೈತ ಪರವಾದ ತಿದ್ದುಪಡಿಗಳನ್ನು ತರಲು ರೈತರು ಸಂಘಟಿತರಾಗಿ ಬೃಹತ್ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ, ಅಗತ್ಯತೆ ಇಂದು ಹೆಚ್ಚಾಗಿದೆ. ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬಗರ್ಹುಕುಂ ಮತ್ತು ಅರಣ್ಯ ಭೂಮಿ ಹಕ್ಕಿಗಾಗಿ, ಬಡವರಿಗೆ ಉಚಿತ ಮನೆ, ನಿವೇಶನಕ್ಕಾಗಿ ಮತ್ತು ರೈತ ಪರವಾದ ಕೃಷಿ ನೀತಿಗಳಿಗಾಗಿ ಆಗ್ರಹಿಸಿ ನ.7 ಮತ್ತು 8ರಂದು 48 ಗಂಟೆಗಳ ಕಾಲ ಅಹೋರಾತ್ರಿ ಧರಣಿಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು..
ಭಾರತದಲ್ಲಿ ಕೃಷಿ ಚಟುವಟಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಕೃಷಿಯನ್ನೇ ನಂಬಿದ್ದ ರೈತರು ಮತ್ತು ಕೃಷಿ ಕೂಲಿಕಾರರು ಕೃಷಿ ಚಟುವಟಿಕೆಗಳನ್ನು ತೊರೆದು ಪರ್ಯಾಯ ಉದ್ಯೋಗಗಳನ್ನು ಅರಸಿಕೊಂಡು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಆಳುವ ಸರ್ಕಾರಗಳು ಕೃಷಿಗೆ ನೀಡಬೇಕಾದ ಆದ್ಯತೆಯನ್ನು ಕಡಿತಗೊಳಿಸಿ ರೈತ ಮತ್ತು ಕೃಷಿ ಕೂಲಿಕಾರರ ಆಧಾರಿತವಾದ ಕೃಷಿಯ ಬದಲು ಕಂಪನಿಗಳ ಆಧಾರಿತ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವುದೇ ಮುಖ್ಯ ಕಾರಣ ಎಂದು ಖಂಡಿಸಿದರು .
ರೈತ ಮುಖಂಡ ಅರೇಹಳ್ಳಿ ರಾಜೇಗೌಡ ಮಾತನಾಡಿ, ರೈತರು ಸಂಘಟಿತರಾಗಿ ತಮ್ಮ ಸಮಸ್ಯೆಗಳ ವಿರುದ್ಧ ತಾವುಗಳು ಪ್ರಬಲ ಹೋರಾಟಗಳನ್ನು ನಡೆಸಿದರೆ ಮಾತ್ರ ಕೃಷಿಯನ್ನು ಸಂಕಷ್ಟದಿಂದ ಪಾರುಮಾಡಿ ರೈತ ಸಮುದಾಯವನ್ನು ಉಳಿಸಬಹುದು. ಭಾರತದಲ್ಲಿ ಇದುವರೆಗೂ ಅಧಿಕಾರಕ್ಕೆ ಬಂದಿರುವ ಯಾವುದೇ ಸರ್ಕಾರಗಳು ರೈತರ ಪರವಾದ ನೀತಿಗಳನ್ನು ಜಾರಿಗೆ ತರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
5 ಲಕ್ಷ ಕೋಟಿ ಸಾಲ ಮನ್ನಾ: ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ಕುಮಾರ್ ಮಾತನಾಡಿ, ಬಹುರಾಷ್ಟ್ರೀಯ ಕಂಪೆನಿಗಳಿಗೆ 5 ಲಕ್ಷ ಕೋಟಿ ತೆರಿಗೆ ಮನ್ನಾ ಮಾಡುವ ಸರ್ಕಾರ ಮತ್ತೊಂದೆಗೆ ರೈತರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಹಂತ ಹಂತವಾಗಿ ಕಡಿತಗೊಳಿಸಿಕೊಂಡು ಬರಲಾಗಿದೆ. ಇದರಿಂದ ರೈತರು ಅತ್ಯಂತ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಟೀಕಿಸಿದರು.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ರೋಗದಿಂದ ಹಲವು ವರ್ಷಗಳಿಂದ ನಾಶವಾಗುತ್ತಿದ್ದು, ಅದರ ರೋಗವನ್ನು ನಾಶಪಡಿಸಲು ಜಿಲ್ಲೆಯಲ್ಲಿ ಒಂದು ಕೃಷಿ ಸಂಶೋಧನಾ ಕೇಂದ್ರವನ್ನು ತೆರೆಯಲು ಸಾಧ್ಯವಾಗಲಿಲ್ಲ. ಮಾತ್ರವಲ್ಲದೆ ಆಲೂಗಡ್ಡೆಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾದ ಮಾರುಕಟ್ಟೆಯನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಶುಂಟಿ, ತೆಂಗು, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಎಲ್ಲರೂ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಪ್ರಾಮಾಣಿಕವಾಗಿ ರೈತರ ಪ್ರಶ್ನೆಯನ್ನು ಕೈಗೆತ್ತಿಕೊಂಡು ಹೋರಾಟಗಳನ್ನು ರೂಪಿಸುತ್ತಿಲ್ಲ ಇದು ಕೇವಲ ರೈತರು ಮತ್ತು ರೈತ ಸಂಘದಿಂದ ಮಾತ್ರ ಸಾಧ್ಯ ಎಂದರು.
ವಿಚಾರ ಸಂಕಿರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಅಧ್ಯಕ್ಷ ನಂಜೇಗೌಡ, ಕಾರ್ಯದರ್ಶಿ ಪ್ರಕಾಶ್, ಸಕಲೇಶಪುರ ತಾಲೂಕಿನ ಅಧ್ಯಕ್ಷ ಕೆ.ಎಲ್. ಶಂಕರ್, ಕಾರ್ಯದರ್ಶಿ ವಿರೂಪಾಕ್ಷ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

