'ರಕ್ತದಾನ ಅಮಾಯಕ ಜೀವಗಳಿಗೆ ವರದಾನ'
ಹಾಸನ: ಪ್ರತಿಯೊಬ್ಬರೂ ಸ್ವಂಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾದಲ್ಲಿ ಎಷ್ಟೋ ಅಮಾಯಕ ಜೀವಗಳಿಗೆ ವರದಾನವಾಗಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ ಅಭಿಪ್ರಾಯಪಟ್ಟರು.
ನಗರದ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಹಾಗೂ ಸರ್ಕಾರಿ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದ ಗುಂಪು ಪರೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರಕ್ತದ ಬೇಡಿಕೆಯ ಶೇ.80ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಉಳಿದ ರಕ್ತಕ್ಕಾಗಿ ಪರದಾಡುವುದನ್ನು ತಪ್ಪಿಸಲು ಜನಜಾಗೃತಿಯೊಂದಿಗೆ ಹೆಚ್ಚು ಹೆಚ್ಚಾಗಿ ರಕ್ತದಾನ ಮಾಡಲು ಪ್ರೇರೆಪಿಸುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಯುವ ಜನರು ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು, ಮತ್ತು ರಕ್ತದಾನದ ಮಹತ್ವದ ಬಗ್ಗೆ ತಿಳಿದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಇತರರಿಗೂ ರಕ್ತದಾನ ಮಾಡಲು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನಟರಾಜ್ ರಕ್ತದಾನದ ಬಗ್ಗೆ ಉಪನ್ಯಾಸ ನೀಡಿದರು.
ಸರ್ಕಾರಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಪುರುಷೋತ್ತಮ್ ಮಾತನಾಡಿ, ರಕ್ತ ಒಂದು ಸಂಜೀವಿನಿ, ಅದಕ್ಕೆ ಪರ್ಯಾಯವಿಲ್ಲ. ಅದೇನಿದ್ದರೂ ಮಾನವ ದೇಹದಲ್ಲಿ ಮಾತ್ರ ಉತ್ಪಾದನೆಯಾಗಿ ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ದಾನ ಮಾಡುವ ಮೂಲಕ ಅವರ ಜೀವವನ್ನು ಉಳಿಸಬಹುದು. ಆದ್ದರಿಂದ ರಕ್ತದಾನ ಜೀವದಾನಕ್ಕೆ ಸಮ ಎಂದರು.
ಸಿಎಂಎಸ್ಎಸ್ ಸಂಸ್ಥೆಯ ಸಂಯೋಜಕ ವಿನ್ಸೆಂಟ್ ಸಕ್ವೇರಾ, ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಗಾವಂಕರ್, ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಐವನ್ ಮಂಡೋನ್ಸ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಕಾಲೇಜಿನ 33 ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಮತ್ತು 75 ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು.
ಕಾಲೇಜಿನ ವಾಣಿಜ್ಯ ಸಂಘದ ಸಂಯೋಜಕ ವಿಜಯ್, ಸಾಹಿತ್ಯ ಸಂಘದ ಕುಮಾರಿ ನಿಸರ್ಗ, ವಿದ್ಯಾರ್ಥಿ ಸಂಘದ ನಾಯಕ ಉಮ್ಮರ್ ಜಬೇರ್, ಡ್ಯಾಪ್ಕೊ ಕೇಂದ್ರದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್, ಜಿಲ್ಲಾ ಸರ್ಕಾರಿ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಇದ್ದರು. ಸೈರಾ ಸುಲ್ತಾನ್ ಸ್ವಾಗತಿಸಿದರು. ಭೂಮಿಕಾ ವಂದಿಸಿದರು. ತನುಜಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

