ಹಾಸನ

ಸೂಲಗಿತ್ತಿ ನರಸಮ್ಮಗೆ ದಂಡೋರ ಸಂಮಾನ

Published On :

ಕ.ಪ್ರ.ವಾರ್ತೆ ,  ಹೊಳೆನರಸೀಪುರ ,  ಅ.24
ಮನುಷ್ಯ ತಾನು ನಿರ್ವಹಿಸುವ ಪ್ರತಿಯೊಂದು ಕಾಯಕವು ಕೈಲಾಸವೆಂದು ಭಾವಿಸಿದರೆ  ಸಾಧನೆಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಂ ಹೇಳಿದ್ದಾರೆ.
ತಾಲೂಕಿನ ತೆರಣ್ಯ ಗ್ರಾಮದಲ್ಲಿ ಇತ್ತೀಚೆಗೆ ವಯೋಶ್ರೇಷ್ಠ ಸನ್ಮಾನಿತೆ ಸೂಲಗಿತ್ತಿ ನರಸಮ್ಮ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೆಲದ ಮೇಲೆ ನಿಂತು ಆಗಸದೆಡೆ ಕಣ್ಣೆತ್ತಿ ವಿಮಾನ ನೋಡಿದ್ದ ನರಸಮ್ಮ ಇಂದು ಅಂತಹುದೇ ವಿಮಾನದಲ್ಲಿ ಪ್ರಯಾಣಿಸಿ ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ್ದಾರೆಂದರೆ ಅವರ ನಿಸ್ವಾರ್ಥ ಸೇವೆ, ಕಲ್ಮಶ ರಹಿತ ಕಾಯಕವೇ ಸಾಕ್ಷಿ ಎಂದರು.
ಇಂದು ನಮ್ಮೊಂದಿಗಿದ್ದು ತನ್ನ 70 ವರ್ಷಗಳ ಸುದೀರ್ಘ ಜೀವನದಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸುವ ಮೂಲಕ 2013ನೇ ಸಾಲಿನ ವಯೋಶ್ರೇಷ್ಠ ಸನ್ಮಾನ ಕೇಂದ್ರದ ಪ್ರಶಸ್ತಿಗೆ ಭಾಜನರಾದ ಸೂಲಗಿತ್ತಿ ನರಸಮ್ಮನವರೇ ಜೀವಂತ ಉದಾಹರಣೆ ಎಂದು ಅಭಿಪ್ರಾಯಪಟ್ಟರು.
ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ಮಾತನಾಡಿ, ಓದು, ಬರಹ, ತಿಳಿಯದ ಕುಗ್ರಾಮದಲ್ಲಿ ಜನಿಸಿದ ಮಹಿಳೆ ತನ್ನ ಇಚ್ಛಾಶಕ್ತಿ ಹಾಗೂ ಅನುಭವ ಜ್ಞಾನದಿಂದ ಒಂದೂವರೆ ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಯಾವುದೇ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ, ಆಪರೇಷನ್‌ಗಳಿಲ್ಲದೇ ಸುಸೂತ್ರವಾಗಿ ಮಾಡಿರುವ ಈ ಮಹಾತಾಯಿಯ ಸಾಧನೆ ಯಾವ ಶಸ್ತ್ರಚಿಕಿತ್ಸಕರಿಗೂ ವೈದ್ಯರಿಗೂ ಕಡಿಮೆಯೇನಲ್ಲ. ಇಂತಹ ಮಾತೆಗೆ ಭಾರತ ರತ್ನ ಸಿಗುವಂತಾಗಲೆಂದು ಆಶಿಸಿದರು. ದಂಡೋರ ಸಮಿತಿ ತಾಲೂಕು ಅಧ್ಯಕ್ಷ ಕೆ.ಎಂ. ನಾಗರಾಜು ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯ ಗವಿಯಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಚನ್ನವೀರಯ್ಯ, ಮಹಾಜನ ಪರಿವರ್ತನಾ ಸಂಘಟನಾ ರಾಜ್ಯ ಕಾರ್ಯದರ್ಶಿ, ಸೌಭಾಗ್ಯ ಜಲ್ಲಿವೆಂಕಟಪ್ಪ, ವಕ್ತಾರ ಬಿ.ಜಿ. ಸಾಗರ್ ಮತ್ತಿತರರು ಸೂಲಗಿತ್ತಿ ನರಸಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನರಸಮ್ಮನವರನ್ನು ವಾದ್ಯ ಗೋಷ್ಠಿ ತಂಡಗಳೊಂದಿಗೆ ಮೆರವಣಿಗೆ ಮಾಡಿ, ಗ್ರಾಮದ ಮಹಿಳೆಯರೆಲ್ಲ ಆರತಿ ಮಾಡಿ ಸ್ವಾಗತಿಸಿದರು. ಜ್ಯೋತಿ ಪ್ರಾರ್ಥಿಸಿದರು, ಕೆ. ಹರೀಶ್ ನಿರೂಪಿಸಿದರು. ಶಿವರಾಜ್ ಸ್ವಾಗತಿಸಿದರು. ಮಹದೇವ್ ವಂದಿಸಿದರು. ರುದ್ರಯ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.