ಪಾದಚಾರಿ ರಸ್ತೆ ಸುಗಮ ನೆಪದಲ್ಲಿ ದೌರ್ಜನ್ಯ?
ಬೇಲೂರು: ಪಾದಚಾರಿ ರಸ್ತೆ ಸುಗಮಗೊಳಿಸಬೇಕು. ಆದರೆ ದಿಢೀರ್ ಕಾರ್ಯಾಚರಣೆ ನಡೆಸಿ ಅಂಗಡಿಗಳ ಛಾವಣಿಗೆ ಹಾಕಿದ್ದ ಜಿಂಕ್ ಶೀಟ್ಗಳನ್ನು ಮನಬಂದಂತೆ ಕಿತ್ತುಹಾಕಿ ಮತ್ತಷ್ಟು ನಷ್ಟ ಮಾಡುವುದು ಸರಿಯೇ...
ಹೀಗೆ ಪಟ್ಟಣದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಮುಖ್ಯರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಸ್ಥಳಾಂತರಿಸಲು ಮುಂದಾದ ಪುರಸಭೆಯವರ ದಿಟ್ಟ ಕ್ರಮ ಸ್ವಾಗತಾರ್ಹ. ಕಳೆದ ಹಲವಾರು ವರ್ಷಗಳಿಂದ ಪಾದಚಾರಿ ರಸ್ತೆಯನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಾ ಸಾರ್ವಜನಿಕರು ಓಡಾಡಲು ಹರಸಾಹಸ ಪಡಬೇಕಾಗಿತ್ತು. ಒಂದೆಡೆ ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆಯ ನಡುವೆ ಫುಟ್ಪಾತ್ ರಸ್ತೆ ಇಲ್ಲದೆ ಅಪಘಾತಗಳು ಹೆಚ್ಚಾಗಿದ್ದವು. ಈ ಬಗ್ಗೆ ಸಂಘ- ಸಂಸ್ಥೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ.
ಆದರೆ ಜಿಲ್ಲಾಡಳಿತ ಕೂಡಲೆ ಪಾದಚಾರಿ ರಸ್ತೆಯಲ್ಲಿ ಸಾರ್ವಜನಿಕರು ಸುಗಮವಾಗಿ ನಡೆದಾಡಲು ವ್ಯಾಪಾರಸ್ಥರನ್ನು ತೆರವುಗೊಳಿಸಿ ಬೇರೆಡೆ ಸ್ಥಳಾಂತರಿಸುವಂತೆ ಪುರಸಭೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಪಾದಚಾರಿ ರಸ್ತೆಯಲ್ಲಿನ ವ್ಯಾಪಾರಸ್ಥರನ್ನು ಪುರಸಭೆ ನಿರ್ಮಿಸಿರುವ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲು ಶನಿವಾರ ಮುಂದಾಯಿತು.
ಹೇಳಿದ್ದೊಂದು, ಮಾಡಿದ್ದೊಂದು: ಮೊದಲಿಗೆ ಫುಟ್ಪಾತ್ ರಸ್ತೆಯ ವ್ಯಾಪಾರಿಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದ ಪುರಸಭೆ ಅಧಿಕಾರಿಗಳು, ಆರಂಭದಲ್ಲಿ ಪಾದಾಚಾರಿ ರಸ್ತೆಮೇಲೆ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸುವಲ್ಲಿ ಮುಂದಾದರು. ಆದರೆ ದಿಢೀರನೆ ದೇಗುಲ ರಸ್ತೆಯ ಕೆಲ ಅಂಗಡಿಗಳ ಮುಂಭಾಗದಲ್ಲಿದ್ದ ಜಿಂಕ್ ಶೀಟ್ಗಳನ್ನು ಕಿತ್ತು ಹಾಕಲು ಪುರಸಭೆ ನೌಕರರು ಮುಂದಾದರು. ಇದರಿಂದ ವಿಚಲಿತರಾದ ಅಂಗಡಿ ಮಾಲೀಕರು, 'ಇದೇನ್ ಸಾರ್ ಫುಟ್ಪಾತ್ ತೆರವು ಅಂತ ಹೇಳಿ ಈಗ ಏಕಾಏಕಿ ಜಿಂಕ್ ಶೀಟ್ ಕೀಳುತ್ತಿದ್ದೀರಾ, ಒಂದೆರಡು ದಿನ ಅವಕಾಶ ಕೊಡಿ, ನಾವೇ ತೆಗೆದು ಬಿಡುತ್ತೇವೆ' ಎಂದು ಅಂಗಲಾಚಿದರು.
ಮನಬಂದಂತೆ ಕಾನೂನು: ಫುಟ್ಪಾತ್ ತೆರವು ಸಂದರ್ಭದಲ್ಲಿ ಅಂಗಡಿಯ ಛಾವಣಿ, ಜಿಂಕ್ ಶೀಟ್ ತೆಗೆಯುವುದಾಗಿ ವರ್ತಕರಿಗೆ ನೋಟಿಸ್ ನೀಡಿ ಗಮನಕ್ಕೆ ತಂದಿದ್ದರೆ ತಾವೂ ಸಹಕರಿಸುತ್ತಿದ್ದೇವು. ಆದರೆ ಇದಾವುದನ್ನೂ ತಮ್ಮ ಗಮನಕ್ಕೆ ತಾರದೆ ಮನಬಂದಂತೆ ಪುರಸಭೆ ನೌಕರರಿಂದ ಛಾವಣಿ, ಜಿಂಕ್ ಶೀಟ್ಗಳನ್ನು ಕಿತ್ತು ಹಾಕಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ವರ್ತಕರ ಪ್ರಶ್ನೆಯಾಗಿದೆ. ಈ ಹಿಂದೆ ಎಂ.ಆರ್. ವೆಂಕಟೇಶ್ ಅಧ್ಯಕ್ಷರಾಗಿದ್ದಾಗ ಇದೇ ರೀತಿ ಕಾರ್ಯಾಚರಣೆ ಮಾಡಿ ಜಿಂಕ್ ಶೀಟ್ ತೆಗೆಸಿದ ನಂತರ ಅಂಗಡಿಯಿಂದ 4 ಅಡಿ ಮುಂದಕ್ಕೆ ಹಾಕಿಕೊಳ್ಳಬಹುದು ಎಂದು ಆಗಿನ ಮುಖ್ಯಾಧಿಕಾರಿ ಹೇಳಿದ್ದರಿಂದ ಅಂಗಡಿಯವರು ಮತ್ತೆ ಜಿಂಕ್ ಶೀಟ್ ಹಾಕಿಕೊಂಡಿದ್ದರು.
ಆದರೆ ಈಗಿನ ಮುಖ್ಯಾಧಿಕಾರಿಯವರು ಯಾವುದೇ ಕಾರಣಕ್ಕೂ ಜಿಂಕ್ ಶೀಟ್ ಹಾಕಲು ಅವಕಾಶವಿಲ್ಲ ಎಂದು ಖಡಾಖಂಡಿತವಾದ ಕಾನೂನು ಮುಂದಿಟ್ಟು ದಾಳಿ ಮಾಡುವ ರೀತಿಯಲ್ಲಿ ಜಿಂಕ್ ಶೀಟ್ ಮತ್ತು ಬಿಸಾಡಿದ್ದರಿಂದ ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ. ಪುರಸಭೆ ಮನಸ್ಸಿಗೆ ಬಂದಂತೆ ಕಾನೂನು ರೂಪಿಸುವುದರಿಂದ ಮುಂದೇನು ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಹಾಲಿ ಬಸ್ ನಿಲ್ದಾಣದ ಮುಂಭಾಗ ಇರುವ ಪುರಸಭೆ ಮಳಿಗೆಗಳಿಗೆ ಮಳೆ ಗಾಳಿ, ಬಿಸಿಲು ಬಂದರೆ ಮರೆಮಾಚಲು ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಅಲ್ಲದೆ ಮಳೆ, ಬಿಸಿಲು, ಬಂದಾಗ ಸಾರ್ವಜನಿಕರು ನೆರಳಿಗಾಗಿ ಹೆಚ್ಚಾಗಿ ಇದೇ ಅಂಗಡಿಗಳ ಜಿಂಕ್ ಶೀಟ್ ಸೂರಿನಡಿ ನಿಂತು ಆಶ್ರಯ ಪಡೆಯುತ್ತಿದ್ದರು. ಆದರೆ ಪುರಸಭೆಯವರ ಏಕಾಏಕಿ ಕಾರ್ಯಾಚರಣೆಯಿಂದ ಈಗ ವರ್ತಕರು ಬಿಸಿಲು, ಮಳೆಯಲ್ಲೇ ವ್ಯಾಪಾರ ಮಾಡುವಂತಾಗಿದ್ದು, ಸಾರ್ವಜನಿಕರಿಗೂ ನೆರಳಿನ ಆಶ್ರಯ ಇಲ್ಲವಾಗಿದೆ. ಈ ಬಗ್ಗೆ ವರ್ತಕರ ಸಂಘದವರು ಸಭೆ ಸೇರಿ ಪುರಸಭೆಯವರ ದೌರ್ಜನ್ಯದ ವಿರುದ್ಧ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದು, ಜಿಲ್ಲಾಡಳಿತ ಯಾವ ರೀತಿಯ ಕ್ರಮಕ್ಕೆ ಮುಂದಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
-ಎ. ರಾಘವೇಂದ್ರ ಹೊಳ್ಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

