ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಅ. 26
ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುವ ಪ್ರಯತ್ನವನ್ನು ಸಿಬಿಐ ಮಾಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಲ್ಲಿದ್ದಲು ಹಗರಣದ ಆರೋಪ ಮತ್ತೊಮ್ಮೆ ಪ್ರಧಾನಮಂತ್ರಿ ಮನಮೋಹನಸಿಂಗ್ ಮನೆ ಬಾಗಿಲಿಗೇ ಬಂದಿದೆ. ಮಾಜಿ ಕಲ್ಲಿದ್ದಲು ಸಚಿವ ಪಿ.ಸಿ.ಫಾರಿಕ್ ಹೇಳಿಕೆ ಮತ್ತೊಮ್ಮೆ ಹಗರಣದಲ್ಲಿ ಪ್ರಧಾನಿ ಇರುವಿಕೆಯನ್ನು ಸಾಬೀತು ಪಡಿಸಿದೆ. ಆದರೆ ಸಿಬಿಐ ನವರು ಪ್ರಧಾನಿ ಅವರನ್ನು ಈ ಹಗರಣದಿಂದ ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಐ ತನಿಖಾ ತಂಡವು ಪ್ರಧಾನಿಯವರ ತಪ್ಪುಗಳನ್ನು ಮಾಜಿ ಸಚಿವ ಫಾರಿಕ್ ಅವರ ಮೇಲೆ ಹೇರಲು ಯತ್ನಿಸುತ್ತಿದೆ. ಈ ರೀತಿ ಮಾಡುವುದು ಪ್ರಶ್ನಾರ್ಹ ಅಪರಾಧವಾಗಿದೆ. ಯುಪಿಎ ಸರ್ಕಾರದ ಹಿಂದಿನ ಹಗರಣಗಳಲ್ಲಿ ಹಾಗೂ ಇಂದಿನ ಕಲ್ಲಿದ್ದಲು ಹಗರಣದಲ್ಲಿ ದೇಶದ ದೊಡ್ಡ ದೊಡ್ಡ ಉದ್ಯಮಿಗಳನ್ನು ಉಳಿಸುವ ಪ್ರಯತ್ನವನ್ನು ಕೂಡ ಸಿಬಿಐ ಮಾಡುತ್ತಿದೆ. ಇಂತಹ ದೇಶದ್ರೋಹವನ್ನು ಮಾಡುತ್ತಿರುವ ಸಿಬಿಐ ನ ಕ್ರಮ ಅತ್ಯಂತ ಖಂಡನೀಯವಾದುದು ಎಂದು ಹೇಳಿದರು.
ಯುಪಿಎ ಸರ್ಕಾರದ ಹತ್ತಾರು ಹಗರಣಗಳ ವಿರುದ್ಧ ಕಳೆದ 4 ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡಲಾಗುತ್ತಿದೆ. ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಭ್ರಷ್ಟ ಸರ್ಕಾರವಾಗಿರುವಂತಹ ಯುಪಿಎ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಸಾರ್ವಜನಿಕರ ಹಣವನ್ನು ಕಾಪಾಡಬೇಕಾದಂತಹ ಕೇಂದ್ರ ಸರ್ಕಾರ ಅದನ್ನು ನುಂಗಿ ನೀರು ಕುಡಿಯುತ್ತಿದೆ ಎಂದು ಆರೋಪಿಸಿದರು.
ನಾನಾ ಭ್ರಷ್ಟಾಚಾರದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಪಾಲ್ಗೊಂಡಿದ್ದು, ಅವರನ್ನು ಸಂಪೂರ್ಣವಾಗಿ ರಕ್ಷಿಸುವ ಕಾರ್ಯವನ್ನು ಯುಪಿಎ ಸರ್ಕಾರ ತನ್ನ ಪ್ರಭಾವ ಬಳಿಸಿ ಮಾಡುತ್ತಿದೆ. ಇದರಿಂದ ಸಿಬಿಐ ಮೇಲೆ ಸಾರ್ವಜನಿಕರು ನಂಬಿಕೆಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಕೋಟಿ ರು.ಗಳ ಭ್ರಷ್ಟಾಚಾರವನ್ನು ಎಸಗಿರುವ ಯುಪಿಎ ಸರ್ಕಾರ ಜನ ವಿರೋಧಿಯಾಗಿದೆ ಎಂದು ದೂರಿದರು. ಆದ್ದರಿಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ವಿರುದ್ಧವಾಗಿ ದೇಶಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಲಕ್ಷ್ಮಿಕೇಶವ್, ಸಂತೋಷ್, ಮಂಜು, ನವೀನ್, ಹರ್ಷ, ಪುರುಷೋತ್ತಮ್, ಪ್ರವೀಣಕುಮಾರ್, ರಾಜು, ಕುಮಾರ್, ಸುರೇಶ್, ಪುನೀತ್, ರಾಕೇಶ್, ಸುನೀಲ್, ಕಾರ್ತಿಕ್, ಸುಹಾಸ್, ಮನೋಹರ್, ಕಿರಣ್, ದೀಪಕ್ಕುಮಾರ್, ಕಾವ್ಯ, ಮಂಜುಳಾ, ಶೃತಿ, ಸೌಮ್ಯ, ಪೂರ್ಣಿಮಾ, ಸ್ವಾತಿ, ಸುಹಾಸಿನಿ, ಪಲ್ಲವಿ, ಕವಿತಾ, ಸುಮ, ರೂಪ, ಅಶ್ವಿನಿ, ಸುಲೋಚನಾ, ಕಮಲಾ, ಅನುಶ್ರೀ ಇದ್ದರು.
ಬೇಡಿಕೆಗಳು
* ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು
* ಹಗರಣ ಸಂಬಂಧ ಪ್ರಧಾನಿಯನ್ನು ರಕ್ಷಿಸುವ ಪ್ರಯತ್ನ ಸಿಬಿಐ ಕೈಬಿಡಬೇಕು
* ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಂಪೂರ್ಣ ನಿಲ್ಲಿಸಬೇಕು.
* ಯುಪಿಎ ಸರ್ಕಾರ ತನ್ನ ಜನವಿರೋಧಿ ನೀತಿ ಕೈಬಿಡಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

