ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನ
ಹಾಸನ: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಸಾಹಿತ್ಯದ ಪ್ರಕಾರಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು 18ರಿಂದ 35 ವಯಸ್ಸಿನೊಳಗಿರಬೇಕು. ವಯಸ್ಸಿನ ದಾಖಲಾತಿ ಬಗ್ಗೆ ಎಸ್‌ಎಸ್‌ಎಲ್‌ಸಿ ಅಥವಾ ಅಧಿಕೃತ ಜನ್ಮ ದಾಖಲಾತಿ ಪ್ರಮಾಣ ಪತ್ರದೊಂದಿಗೆ, ಇದುವರೆಗೂ ಎಲ್ಲಿಯೂ ಚೊಚ್ಚಲ ಕೃತಿ ಪ್ರಕಟವಾಗದೇ ಇರುವ ಬಗ್ಗೆ ಸ್ವಯಂ ದೃಢೀಕರಣ ಪತ್ರದೊಂದಿಗೆ, ತಾವು ರಚಿಸಿರುವ ಚೊಚ್ಚಲ ಕೃತಿಯನ್ನು ಬೆರಳಚ್ಚು, ಡಿಟಿಪಿ ಮಾಡಿಸಿ, ತಮ್ಮ ಸ್ವ ವಿವರಗಳೊಂದಿಗೆ ಅರ್ಜಿಗಳನ್ನು ನ. 22ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಕಳುಹಿಸುವುದು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿಟಿಪಿ ಮಾಡಿಸಿದಾಗ 1-8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 32 ಪುಟಗಳಿರಬೇಕು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಡಿ.ರಸ್ತೆ, ಬೆಂಗಳೂರು-560002, ದೂ 080-22484516 / 22017704 ಇವರನ್ನು ಸಂಪರ್ಕಿಸಬಹುದಾಗಿದೆ.
ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಹಾಸನ: ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಮಾರುಕಟ್ಟೆ ನೆರವು ಯೋಜನೆಯಡಿ ಮಹಿಳಾ ಸಂಘ, ಸಂಸ್ಥೆಗಳು ಉದ್ಯೋಗಿನಿ, ಕಿರುಸಾಲ ಯೋಜನೆಯ ಫಲಾನುಭವಿಗಳು, ನಗರ ಸ್ತ್ರೀಶಕ್ತಿ ಮತ್ತು ಗ್ರಾಮಾಂತರ ಸ್ತ್ರೀಶಕ್ತಿ, ಸವಸಹಾಯ ಸಂಘಗಳು ಉತ್ಪಾದಿಸುವ ಕರಕುಶಲ ವಸ್ತುಗಳಿಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನವೆಂಬರ್ 12ರಿಂದ 15ರವರೆಗೆ ಹಾಸನಾಂಬ ಕಲಾಭವನ, ಹಾಸನ ಇಲ್ಲಿ ನಡೆಸಲಾಗುವುದು. ಕಾರ್ಯಕ್ರಮದಲ್ಲಿ ಉದ್ಯೋಗಿನಿ, ಕಿರುಸಾಲ ಯೋಜನೆಯ, ನಗರ ಸ್ತ್ರೀಶಕ್ತಿ ಮತ್ತು ಗ್ರಾಮಾಂತರ ಸ್ತ್ರೀಶಕ್ತಿ ಉದ್ದಿಮೆದಾರರು ಹಾಗೂ ಹೊಸ ಮಹಿಳಾ ಉದ್ದಿಮೆದಾರರಿಗೆ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ್ ಕೋರಿದ್ದಾರೆ.
ಮದ್ಯದಲ್ಲಿ ವಿಷ ಬೆರಸಿ ಕುಡಿದು ವ್ಯಕ್ತಿ ಆತ್ಮಹತ್ಯೆ
ಚನ್ನರಾಯಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ಮದ್ಯದಲ್ಲಿ ವಿಷ ಬೆರಸಿಕೊಂಡು ಪಟ್ಟಣದ ರೈಲ್ವೆ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಗೂರುಮಾರನಹಳ್ಳಿ ಶ್ರೀರಾಮ ಬಡಾವಣೆಯ ಪ್ರದೀಪ್ (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಚನ್ನರಾಯಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಕೋಳಿ ಸಾಕಾಣಿಕೆ ತರಬೇತಿ
ಹಾಸನ: ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶು ಪಾಲನಾ ಇಲಾಖೆ ವತಿಯಿಂದ ನ.28 ಮತ್ತು 29 ರಂದು ಕೋಳಿ ಸಾಕಾಣಿಕೆ ತರಬೇತಿಯನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು ತರಬೇತಿ ಪ್ರಾರಂಭವಾಗುವ ದಿನಾಂಕದಂದು ಬೆಳಗ್ಗೆ 10.30 ಕ್ಕೆ ಸಹಾಯಕ ನಿರ್ದೇಶಕರ ಕಚೇರಿ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣ, ಸಂತೇಪೇಟೆ, ಹಾಸನ ಇಲ್ಲಿ ಹಾಜರಾಗಲು ಸೂಚಿಸಿದೆ. ಹೆಚ್ಚಿನ ವಿವರಗಳಿಗೆ ದೂ 08172-235226 ಯನ್ನು ಸಂಪರ್ಕಿಸ ಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

