ಹಾಸನ

ದತ್ತಮಾಲ ಶೋಭಯಾತ್ರೆಗೆ ಚಾಲನೆ

Published On :

ಹಾಸನ: ಶ್ರೀರಾಮ ಸೇನೆಯಿಂದ ನಗರದಲ್ಲಿ ಭಾನುವಾರ ಬೃಹತ್ ಶೋಭಯಾತ್ರೆ ನಡೆಯಿತು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮಿಜಿ ದತ್ತಪೀಠದ ಶೋಭಯಾತ್ರೆಗೆ ಚಾಲನೆ ನೀಡಿದರು.
ನಗರದ ಆದಿಚುಂಚನಗಿರ ಮಠದಿಂದ ಮೆರವಣಿಗೆ ಪ್ರಾರಂಭವಾಗಿ ಎನ್.ಆರ್. ವೃತ್ತದವರೆಗೂ ಮೆರವಣಿಗೆ ನಡೆಸಲಾಯಿತು. 3ನೇ ವರ್ಷದ ಉಚಿತ ದತ್ತಮಾಲಾ ಅಭಿಯಾನ, ದತ್ತಪೀಠ ಮುಕ್ತಿ ಸಂಕಲ್ಪ ರಥಯಾತ್ರೆ ಏರ್ಪಡಿಸಲಾಗಿತ್ತು. ಶ್ರೀರಾಮಸೇನೆವತಿಯಿಂದ ಕಳೆದ 13 ವರ್ಷಗಳಿಂದ ದತ್ತಮಾಲ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ದತ್ತಮಾಲೆ ಧರಿಸಿ ಅಸಂಖ್ಯಾತ ಕಾರ್ಯಕರ್ತರು ಹಿಂದುಗಳ ಪೀಠವಾದ ದತ್ತಾಪೀಠದಲ್ಲಿ ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ನಗರದಿಂದ ಸಾಕಷ್ಟು ಮಂದಿ ಭಕ್ತರು ದತ್ತ ಪೀಠಕ್ಕೆ ಪ್ರಯಾಣ ಬೆಳೆಸಿದರು.  ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್,ಮಂಜುನಾಥ್ ಇತರರು ಇದ್ದರು.
'ಪಾರದರ್ಶಕತ್ವ:ಮೌಲ್ಯಯುತ ಬದುಕು ಸಾಧ್ಯ'
  ಬೇಲೂರು: ಪ್ರತಿಯೊಬ್ಬರು ಜೀವನದಲ್ಲಿ ಪಾರದರ್ಶಕತೆ ಅಳವಡಿಸಿಕೊಂಡಾಗ ಮಾತ್ರ ಮೌಲ್ಯಯುತ ಬದುಕು ಸಾಗಿಸಲು ಸಾಧ್ಯ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಸ್.ಗುರುರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಸೌಮ್ಯಕೇಶವ ಕನ್‌ವೆಷನ್ ಸಭಾಂಗಣದಲ್ಲಿ ನಡೆದ ರೋಟರಿ ಜಿಲ್ಲಾ ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಮಾತಾನಾಡಿದ ಅವರು, 43 ವರ್ಷಗಳಿಂದ ರೋಟರಿ ಸಂಸ್ಥೆ ತಾಲೂಕಿನ ಜನರ ಅಶೋತ್ತರಕ್ಕೆ ಸಂದಿಸಿದ್ದು ಸಮಜ ಮುಖಿಯಾಗಿ ಕೆಲಸ ನಿರ್ವಹಿಸಿದೆ ಎಂದರು. 215 ರಾಷ್ಟ್ರದಲ್ಲಿ 12 ಲಕ್ಷ ಸದಸ್ಯತ್ವ ಹೊಂದಿರುವ ರೋಟರಿ ಸಂಸ್ಥೆ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಬೇಲೂರು ರೋಟರಿ ಕ್ಲಬ್  50 ನೇ ವರ್ಷದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮತ್ತು ಸಮಾಜಮುಖಿಯಾಗಿ ಮಾಡಬೇಕಾಗಿದೆ ಎಂದು ಸದಸ್ಯರಿಗೆ ಕರೆ ನೀಡಿ, ಜನವರಿ 10 ರಿಂದ 12ರವರೆಗೆ ಮೈಸೂರಿನಲ್ಲಿ ರೋಟರಿ ಸಮಾವೇಶ ನಡೆಯಲಿದೆ ಎಂದು ಹೇಳಿದರು. ಉಪರಾಜ್ಯಪಾಲ ರಮೇಶ್,ಬೇಲೂರು ರೋಟರಿ ಸಂಸ್ಥೆ ಅಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಅಜೀಮ್‌ಮುಲ್ಲಶೇರಿಫ್ ಇದ್ದರು.
ಇದೇ ವೇಳೆ ಚಿತ್ರ ಕಲಾವಿದ ಬೇಲೂರು ಕೇಶವ್, ಪರಿಸರ ಪ್ರೇಮಿ ಸದಾಶಿವಯ್ಯ, ಪೌರಕಾರ್ಮಿಕ ಮಹಿಳೆ ಅದಿಲಕ್ಷ್ಮಿ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಂಜುಳಮ್ಮ ಇವರನ್ನು ಅಭಿನಂದಿಸಲಾಯಿತು.
ಕಂಪ್ಯೂಟರ್ ಸಂಸ್ಥೆ ವಾರ್ಷಿಕೋತ್ಸವ  
ಚನ್ನರಾಯಪಟ್ಟಣ: ಕಂಪ್ಯೂಟರ್ ಜ್ಞಾನ ಜಗತ್ತಿನ ಜ್ಞಾನದ ಕೋಶವಾಗಿದೆ ಎಂದು  ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ನಂಜುಂಡ ಸ್ವಾಮಿ  ಹೇಳಿದರು. ಪಟ್ಟಣದ ಬಾಲ ಕಂಪ್ಯೂಟರ್ ತರಬೇತಿಯ ಎರಡನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಯಲ್ಲೂ ಕಂಪ್ಯೂಟರ್ ಇರುತ್ತದೆ. ವಿದ್ಯಾಭ್ಯಾಸದ ಪ್ರಾರಂಭದಿಂದಲೂ ಕಂಪ್ಯೂಟರ್ ಶಿಕ್ಷಣ ದೊರೆಯುತ್ತದೆ. ಎಷ್ಟೇ ಶಿಕ್ಷಣದ ಅರ್ಹತೆಯಿದ್ದರೂ ಇಂದಿನ ಯುಗದಲ್ಲಿ  ಅನಿವಾರ್ಯ ಅವಕಾಶವಾಗಿದೆ ಎಂದರು. ಯಾವುದೇ ಶಿಕ್ಷಣ ವಿದ್ಯಾರ್ಥಿ ಸದುಪಯೋಗದ ಕಡೆಗೆ  ನಡೆಯಬೇಕು ಎಂದರು. ಪಿಡಿಓ ಜಯರಾಂ, ಪುಟ್ಟಸ್ವಾಮಿ, ನಾಗರಾಜ್, ಸತೀಶ್ ಇದ್ದರು. ನವೀನ್ ಸಂಸ್ಥೆ ನಡೆದು ಬಂದ ದಾರಿ ತಿಳಿಸಿದರು.
ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್‌ಗೆ ಕ್ರಮ: ಗೋಪಾಲ್
ಬೇಲೂರು: ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ನಿರಂತರ ಜ್ಯೋತಿ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಾಗರಿಕರಿಗೆ ನಿರಂತರ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಗೋಪಾಲ್ ತಿಳಿಸಿದರು.
ಪಟ್ಟಣದ ನೆಹರೂ ನಗರದ ಎಂ.ಇ.ಎಸ್. ಫೀಡರ್‌ನಲ್ಲಿ ನಿರಂತರ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ನಿರಂತರ ಜ್ಯೋತಿಯಲ್ಲಿ ವಿದ್ಯುತ್ ನೀಡಲು 11 ಫೀಡರ್‌ಗಳಿದ್ದು ಮೊದಲನೇ ಹಂತದ ಫೀಡರ್ ಉದ್ಘಾಟಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಐಪಿ ಸೆಟ್‌ಗಳನ್ನು ಹೊರತುಪಡಿಸಿ ಮೂರು ಫೇಸ್‌ಗಳಲ್ಲಿ ನಿರಂತರ ವಿದ್ಯುತ್ ನೀಡಲು ಕ್ರಮ  ಕೈಗೊಳ್ಳಲಾಗಿದೆ ಎಂದರು.  ಕಾರ್ಯಪಾಲಕ ಎಂಜಿನಿಯರ್ ಯೋಗೀಶ್ ಮಾತನಾಡಿ ಬೇಲೂರಿನಲ್ಲಿ-4ಫೀಡರ್,  ಹಗರೆಯಲ್ಲಿ-3 ಫೀಡರ್, ಹಳೇಬೀಡು-4 ಫೀಡರ್‌ಗಳಿಗೆ  31.12 ಕೋಟಿ ರು.ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಬೇಲೂರು ತಾಲೂಕಿಗೆ ತಿಂಗಳಿಗೆ 7 ಮೆಗಾ ಯೂನಿಟ್ ವಿದ್ಯುತ್ ಅವಶ್ಯಕತೆ ಇದ್ದು, ಪ್ರತಿ ದಿನ 4 ಲಕ್ಷ ಯೂನಿಟ್ ಅವಶ್ಯಕತೆ ಇದೆ ತಿಳಿಸಿದರು.
'ತಾಪಮಾನ ಕಡಿಮೆ ಮಾಡಲು ಗಿಡ ನೆಟ್ಟು ಪೋಷಿಸಿ'
ಹಾಸನ: ಮನೆಯ ಕೈತೋಟಗಳಲ್ಲಿ ವೈವಿಧ್ಯಮಯ ಗಿಡಗಳನ್ನು ನೆಡುವುದರಿಂದ ಭೂಮಿ ಫಲಭರಿತ ವಾಗಿರುತ್ತದೆ ಎಂದು ಅಕ್ರೂಡ್ ಸಂಸ್ಥೆಯ ಎಚ್.ಕೆ. ಪುಷ್ಪ ತಿಳಿಸಿದರು.
ನಗರದ ಹೊರವಲಯದ ಸತ್ಯವಂಗಲ ಗ್ರಾಮ ಪಂಚಾಯ್ತಿ, ಸ್ಫೂರ್ತಿ ಮಹಿಳಾ ಮಂಡಳಿ ಮತ್ತು  ಅಕ್ರೂಡ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಜೀವ ವೈವಿಧ್ಯಮಯ ದಿನಾಚರಣೆಯಲ್ಲಿ ವಿವಿಧ ಜಾತಿಯ ಔಷಧಿ ಗಿಡಗಳನ್ನು  ನೆಟ್ಟು ಅವರು ಮಾತನಾಡಿದರು.
ಮುಖ್ಯ ಅತಿಥಿ ಯಾಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ದರ್ಶನಬಾಬು ಮಾತನಾಡಿ ಸಂಘ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮಗಳನ್ನು  ಆಯೋಜಿಸಿರುವುದರಿಂದ ಪರಿಸರ ಜಾಗೃತಿ ಜನರಲ್ಲಿ ಮೂಡುತ್ತದೆ ಎನ್ನುತ್ತಾ   ಗ್ರಾಮ ಪಂಚಾಯಿತಿವತಿಯಿಂದ ಪಾರ್ಕ್‌ಗೆ ಮೀಸಲಾಗಿಟ್ಟಿರುವ ಜಾಗಕ್ಕೆ ತಂತಿಬೇಲಿ ಹಾಕಿಸಿ ಔಷಧಿ ಗಿಡಗಳನ್ನು  ನೆಟ್ಟು ಔಷಧಿವನ ನಿರ್ಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪ್ರೇಮನಿಂಗಪ್ಪ ಮಾತನಾಡಿ, ಇಂದಿನ ಜಾಗತಿಕರಣದಲ್ಲಿ ಪರಿಸರ ನಾಶದಿಂದ  ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ  ಪ್ರತಿಯೊಬ್ಬರು ಪರಿಸರ ರಕ್ಷಿಸಬೇಕು.ಆದ್ದರಿಂದ ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿದರು. ಸ್ಫೂರ್ತಿ ಮಹಿಳಾ ಸಂಘದ ಕಾರ್ಯದರ್ಶಿ ಅರುಣ ಮುರುಳಿಧರ ಮಾತನಾಡಿದರು. ಶಾಂತಮ್ಮ, ಯಶೋಧಾ ಮಣಿ, ಆಶಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.