ಹಾಸನ

ನಿರಂತರ ಮಳೆ, ರೈತರ ಆತಂಕ

Published On :

ಸಕಲೇಶಪುರ: ನಿರಂತರ ಮಳೆ ತಾಲೂಕಿನ ರೈತರ ಪಾಲಿಗೆ ಮತ್ತೊಮ್ಮೆ ಆತಂಕ ತಂದೊಡ್ಡಿದೆ.
ಪ್ರಸಕ್ತ ವರ್ಷ ಮಲೆನಾಡ ರೈತರು ಅತಿವೃಷ್ಟಿಯಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದು ಶೇ. 70 ರಷ್ಟು ಕಾಫಿ ಫಸಲು ಉದುರಿ ನೆಲ ಸೇರಿದ್ದರೆ, ಬತ್ತದ ಗದ್ದೆಗಳು ಸಾಕಷ್ಟು ಹಾನಿಗೊಂಡಿದ್ದವು. ಅಳಿದುಳಿದ ಬೆಳೆ ಕೈ ಹತ್ತುವ ಸಂದರ್ಭದಲ್ಲಿ ಹಿಂಗಾರು ಮಳೆ ಮತ್ತೆ ಸುರಿಯುತ್ತಿದೆ. ಇದರಿಂದ ಮಲೆನಾಡ ರೈತರ ಮುಖದಲ್ಲಿ ಮತ್ತೊಮ್ಮೆ ಆತಂಕದ ಗೆರೆ ಕಾಣಿಸಿಕೊಂಡಿದೆ.
ಈಗಾಗಲೇ ಕಾಫಿ ಹಣ್ಣು ಕೊಯಿಲಿಗೆ ಬಂದಿರುವ ಅರೇಬಿಕ ಕಾಫಿ ಬೆಳೆಗಾರರಿಗೆ ಹಣ್ಣು ಕೊಯ್ಲುಗೆ ಮಳೆ ಅಡ್ಡಿಯಾಗಿದ್ದು, ಮಳೆಯ ಕಾರಣದಿಂದ ಹಣ್ಣುಕೊಯಿಲು ನಡೆಸಲು ವಿಳಂಬ ಮಾಡಿದರೆ, ಹಣ್ಣುಗಳು ನೆಲಕ್ಕೆ ಬಿದ್ದು ಹಾಳಾಗುವ ಸಂಭವ ಹೆಚ್ಚಿಗಿದ್ದು, ಮಳೆ ಬಿಡುವು ನೀಡಿದರೆ ಸಾಕು ಎಂಬ ಮನಸ್ಥಿತಿ ಹೊಂದಿದ್ದಾರೆ.
ಇದಲ್ಲದೆ ಕಾಫಿ ತೋಟಗಳ ನಿರ್ವಹಣೆಗಾಗಿ ಮಾಡಲೇ ಬೇಕಾಗಿರುವ ಕೆಲಸಗಳಾದ ಹಳತೆಗೆಯುವುದು, ಅಗೆತ, ಔಷಧಿ ಸಿಂಪಡಿಸುವ ಕೆಲಸಕ್ಕೂ ಈ ಮಳೆ ಅಡ್ಡಿಯಾಗಿದ್ದು, ಈಗಾಗಲೇ ಈ ಕೆಲಸಗಳನ್ನು ಮುಗಿಸಿರುವ ರೈತರಿಗೂ ಮಳೆ ಸಮಸ್ಯೆಯನ್ನು ಸೃಷ್ಟಿಸಿದೆ. ಈ ಎಲ್ಲಾ ಕೆಲಸಗಳು ಮಳೆಯಿಂದ ಹಾಳಾಗುವ ಸಂಭವ ಹೆಚ್ಚಿರುವುದರಿಂದ ರೈತರನ್ನು ಚಿಂತೆಗೆ ಈಡುಮಾಡಿದೆ.
ಈ ಮಧ್ಯ ಹೊಸದಾಗಿ ಕಾಫಿ ಗಿಡಗಳನ್ನು ಹಾಕಿರುವವರಿಗೆ ಮಾತ್ರ ಈ ಹಿಂಗಾರು ಮಳೆ ಅಲ್ಪಮಟ್ಟದ ಸಂತೋಷ ನೀಡಿದ್ದು, ಮತ್ತೊಂದು ಸುತ್ತಿನ ರಸಗೊಬ್ಬರ ನೀಡುವ ಮೂಲಕ ಗರಿ ಮೂಡುವುದನ್ನು ನೋಡಲು ಕಾತರಿಸುತ್ತಿದ್ದಾರೆ. ಬತ್ತದ ಬೆಳೆಗಾರರ ಪಾಲಿಗೂ ಈ ಮಳೆ ಸಂತೋಷ ಹಾಗೂ ಆತಂಕ ಎರಡನ್ನು ಮೂಡಿಸಿದ್ದು ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ  ಬತ್ತದ ನಾಟಿ ಮಾಡಿರುವ ರೈತರಿಗೆ ಈ ಮಳೆ ಕಟ್ಟೆ ರೋಗ ನಿಯಂತ್ರಕ್ಕೆ ಸಹಕಾರಿಯಾಗಿದ್ದಾರೆ.
ಜೂನ್ ತಿಂಗಳ ಆರಂಭದಲ್ಲೆ ಬತ್ತದ ನಾಟಿ ಮಾಡಿರುವ ರೈತರ ಪಾಲಿಗೆ ಈ ಮಳೆ ಕಹಿ ಅನುಭವ ನೀಡುತ್ತಿದ್ದು, ಈಗಾಗಲೇ ತೆನೆ ಮೂಡಲು ಆರಂಭಿಸಿರುವುದರಿಂದ ಮಳೆಯಿಂದ ಬತ್ತದ ತೆನೆ ಜೊಳ್ಳಾಗುವ ಸಂಭವ ಹೆಚ್ಚಿರುವುದರಿಂದ ಇಳುವರಿಯಲ್ಲಿ ಕುಂಠಿತಗೊಳ್ಳುತ್ತದೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ಕಾಡಾನೆ ಹಾವಳಿಯಿಂದ ಬೆಳೆ ಕಳೆದುಕೊಂಡಿರುವ ಮಲೆನಾಡ ರೈತರಿಗೆ ಮಳೆಯಿಂದ ಮತ್ತೆ ಬತ್ತ ಮತ್ತಿತರ ಬೆಳೆಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ.  ರಾಜ್ಯ ಸರ್ಕಾರ ಪ್ರಕೃತಿ ವಿಕೋಪದಿಂದ ಬೆಳೆ, ಆಸ್ತಿ ಪಾಸ್ತಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಇದು ರೈತರಿಗೆ ಗಾಯ ಮೇಲೆ ಬರೆ ಎಳೆದಂತಾಗಿದೆ.


- ಎಸ್.ಎಂ. ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.