ಎನ್ಡಿಎಗೆ ಕೆಜೆಪಿ ಬೆಂಬಲ: ಬಿಎಸ್ವೈ
ಕ.ಪ್ರ. ವಾರ್ತೆ ಹಾಸನ ಅ. 28
ಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿಯನ್ನು ಎನ್ಡಿಎಗೆ ಪಾಲುದಾರಿಕೆ ಪಕ್ಷವನ್ನಾಗಿಸುವಂತೆ ಪತ್ರವನ್ನು ಬರೆದಿದ್ದು, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲಿಂದ ಪ್ರತಿಕ್ರಿಯೆ ಬರಲಿ ಅಥವಾ ಬರದಿರಲಿ ಕೆಜೆಪಿ ತನ್ನ ಅಸ್ತಿತ್ವ ಉಳಿಸಿಕೊಂಡು ಎನ್ಡಿಎ ಬೆಂಬಲಿಸುವುದಾಗಿ ನುಡಿದರು. ರಾಜ್ಯದಲ್ಲಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಮುನ್ನ ಎನ್ಡಿಎ ಯಿಂದ ಪ್ರತಿಕ್ರಿಯೆ ಬಂದರೆ ತಾವು ಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ ಅವರು, ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದಾಗಲೇ ನಾನು ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೆ ಎಂದು ಸ್ಪಷ್ಟಪಡಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿ ಗೆದ್ದಿರುವ ಹಾಗೂ ಬೆಂಬಲಿಸಿರುವಂತಹ ಕಡೆಗಳಲ್ಲಿ ಲೋಕಸಭಾ ಚುನಾವಣೆಗೆ ಕೆಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಿ ಪಕ್ಷವನ್ನು ಬಲಪಡಿಸುವಂತಹ ಕಾರ್ಯ ಮಾಡಲಾಗುತ್ತಿದೆ.
ಈಗಾಗಲೇ ಹುಬ್ಬಳ್ಳಿ, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿಯೂ ಸಮಾವೇಶ ನಡೆಸುವುದಾಗಿ ತಿಳಿಸಿದರು.
ಮೊದಲ ಮುಖ್ಯಮಂತ್ರಿ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಅಂತ ಕಾಂಗ್ರೆಸ್ಢವರು ಆಗ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದರು. ಆದರೆ ಗಣಿ ಕಂಪನಿಗಳಿಗೆ ಪರವಾನಗಿ ನೀಡಿದ್ದು, ನಾವಲ್ಲ ಕಾಂಗ್ರೆಸ್ನವರು. ಸುಮಾರು 52 ಕಂಪನಿಗಳು ಗಣಿಯನ್ನು ಬೇರೆಡೆಗೆ ರಫ್ತು ಮಾಡುತ್ತಿದ್ದುದನ್ನು ನಿಲ್ಲಿಸಿದ ಮೊದಲ ಮುಖ್ಯಮಂತ್ರಿ ನಾನು. ಅಷ್ಟೇ ಅಲ್ಲದೆ ಅಕ್ರಮ ಗಣಿಕಾರಿಗೆಯ ವಿರುದ್ಧ ನಾನೇ ಲೋಕಾಯುಕ್ತ ತನಿಖೆಗೆ ಒಳಪಡಿಸಿದೆ. ಆದರೆ ಲೋಕಾಯುಕ್ತದವರು ಪೂರ್ಣ ವರದಿ ನೀಡಲಿಲ್ಲ ಎಂದ ಅವರು, ನನ್ನ ಮತ್ತು ಕುಟುಂಬದ ಮೇಲೆ ಒಂದೇ ಒಂದು ಅಕ್ರಮ ಗಣಿಗಾರಿಕೆಯ ಸುಳಿವು ಇಲ್ಲ ಎಂದರು.
ರಾಜಕೀಯ ನಿವೃತ್ತಿ ಹೊಂದುವೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿವಮೊಗ್ಗಕ್ಕೆ ಬಂದು ಕಾಂಗ್ರೆಸ್ ಸಭೆಯಲ್ಲಿ 1 ಸಾವಿರ ಕೋಟಿ ರು.ಗಳನ್ನು ನಾನು ಮತ್ತು ಕೆ.ಎಸ್.ಈಶ್ವರಪ್ಪ ಲೂಟಿ ಮಾಡಿದ್ದಾರೆ ಎಂದು ಏಕವಚನದಲ್ಲಿ ಆರೋಪಿಸಿದ್ದಾರೆ. ನಾನು 1 ಸಾವಿರ ಕೋಟಿ ರು.ಗಳನ್ನು ಲೂಟಿ ಮಾಡಿರುವುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯನವರು ಏಕವಚನ ಬಳಸಿದ್ದರಿಂದ ನಾನು ಸಹ ಸಿದ್ದರಾಮಯ್ಯನವರ ವಿರುದ್ಧ ಏಕವಚನ ಬಳಸಿದೆ. ಇದಕ್ಕಾಗಿ ವಿಷಾ ವ್ಯಕ್ತಪಡಿಸುವುದಾಗಿ ಹೇಳಿದರು.
ಸಿಬಿಐ ಮೇಲೆ ವಿಶ್ವಾಸವಿದೆ: ನನ್ನ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಚಾರ್ಚ್ ಶೀಟ್ ಆಗಿದ್ದು, ನಾನು ನಿರಪರಾಧಿ ಅಂತ ಹೊರ ಬರುತ್ತೇನೆ. ಸಿಬಿಐ ತಿನಿಖೆಯಲ್ಲಿ ನನಗೆ ವಿಶ್ವಾಸವಿದೆ ಎಂದು ಹೇಳಿದರು.
ದೇವೇಗೌಡರ ಹೇಳಿಕೆಗೆ ಸಹಮತ: ಮುಖ್ಯಮಂತ್ರಿ ಕೋಟಾದಡಿ ನೀಡುವಂತಹ ಜಿ. ಕೆಟೆಗರಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣವೊಡ್ಡಿ ನನ್ನನ್ನು ಸೇರಿದಂತೆ ಮೂವರು ಸಿಎಂ ಕಾಲದ ನಿವೇಶನಗಳನ್ನು ವಾಪಸ್ ಪಡೆಯಲು ಮುಖ್ಯಮಂತ್ರಿಗಳು ಮುಂದಾದರೇ ಹಿಂದಿನ ಸಿಎಂಗಳ ಕಾಲದಲ್ಲಿಯೂ ಸೈಟ್ಗಳನ್ನು ಹಂಚಲಾಗಿದೆ. ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲಿ ಹಂಚಿರುವ ನಿವೇಶನಗಳ ಬಗ್ಗೆ ತನಿಖೆಗೆ ಒಪ್ಪಿಸಲಿ. ಈ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದು, ಅದಕ್ಕಸಹಮತವಿದೆ ಎಂದ ಅವರು, ಲೋಕಸಭೆಗೆ ದೇವೇಗೌಡರಂತಹ ಅಭ್ಯರ್ಥಿ ಆಯ್ಕೆಯಾಗಬೇಕು. ಅಂತಹ ವ್ಯಕ್ತಿ ಲೋಕಸಭೆಯಲ್ಲಿ ಇರಬೇಕು. ಅದು ನಮ್ಮ ಅಪೇಕ್ಷೆ ಕೂಡ ಆಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

