ಮರ ಕಟಾವಿಗೆ ಅನುಮತಿ ಏಕಿಲ್ಲ?
ಕ.ಪ್ರ. ವಾರ್ತೆ ಹಾಸನ ಅ. 28
ಜಿಲ್ಲಾಧಿಕಾರಿ ನೇತೃತ್ವದ ತಂಡ ಸಕಲೇಶಪುರ ಭಾಗಕ್ಕೆ ಭೇಟಿ ನೀಡಿ ಅತಿವೃಷ್ಟಿ ಮತ್ತು ಕಾಡಾನೆ ದಾಳಿಯಿಂದ ಉಂಟಾಗಿರುವ ಕಾಫಿ, ಏಲಕ್ಕಿ ಮತ್ತು ಮೆಣಸು ಬೆಳೆ ನಾಶ ಮತ್ತು ರೈತರ ಜೀವನಕ್ಕಾಗಿ ಕಾನೂನಿನ ಅಡಿಯಲ್ಲಿ ಮರ (ಟಿಂಬರ್) ಕಡಿಯಲು ಅನುಮತಿ ನೀಡುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಮಲೆನಾಡು ಭಾಗದ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾದ ಸಭೆಯನ್ನು ದೇವೇಗೌಡರು ನಡೆಸಿದರು. ಅತಿವೃಷ್ಟಿಯಿಂದಾಗಿ ಕಾಫಿ, ಏಲಕ್ಕಿ ಮತ್ತು ಮೆಣಸು ಬೆಳೆ ಸಂಪೂರ್ಣವಾಗಿ ನಾಶವಾಗಿರುವುದರ ಜೊತೆಗೆ ಈ ಭಾಗದಲ್ಲಿ ರೈತರು ಬೆಳೆದಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ.
ಇದರಿಂದ ಈ ಭಾಗದ ರೈತರು ಒಂದೆಡೆ ಬೆಳೆ ನಾಶ ಹಾಗೂ ಇಲಾಖೆಯಿಂದ ಮರ ಕಡಿಯಲು ಅನುಮತಿ ನೀಡದ ಕಾರಣ ಸಂಕಷ್ಟಕ್ಕೆ ಸಿಲುಕಿ, ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಗೆ ರೈತರು ತಲುಪಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆದ್ದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾಫಿ ಬೋರ್ಡ್ ಅಧಿಕಾರಿಗಳೊಂದಿಗೆ ಮಲೆನಾಡು ಭಾಗಕ್ಕೆ ಭೇಟಿ ನೀಡಿ ಅಲ್ಲಿ ಆಗಿರುವಂತಹ ಬೆಳೆ ನಾಶದ ಬಗ್ಗೆ ಸಂಪೂರ್ಣ ವರದಿಯನ್ನು ನೀಡಬೇಕು. ನಮ್ಮೊಂದಿಗೆ ಅಧಿಕಾರಿಗಳು ಪರಿಶೀಲನೆಗೆ ಬಂದರೆ, ಅದಕ್ಕೆ ರಾಜಕೀಯದ ಬಣ್ಣ ಕಟ್ಟುತ್ತಾರೆ. ಆದ್ದರಿಂದ ಸ್ವತ: ಅಧಿಕಾರಿಗಳೇ ಸ್ಥಳ ಪರಿಶೀಲಿಸಿ ವರದಿ ಸಿದ್ದಪಡಿಸಿದರೆ ಅದರ ಆಧಾರದ ಮೇಲೆ ಹೋರಾಟ ಮಾಡಬೇಕೇ ಅಥವಾ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಬೇಕಾದರೆ ಚರ್ಚಿಸುವುದಾಗಿ ಹೇಳಿದರು.
ಮರ ಕಡಿಯಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದಿದ್ದರೂ ಅನುಮತಿ ನೀಡದಂತಹ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಡಾನೆಗಳ ಸಮಸ್ಯೆಯೇ ಕೇವಲ ಸಕಲೇಶಪುರ ಅಲ್ಲದೆ ಇದೀಗ ಬೆಂಗಳೂರಿಗೂ ಆವರಿಸಿದೆ. ಸಕಲೇಶಪುರ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಅಧಿಕಗೊಂಡಿದ್ದು, ರೈತರ ಬೆಳೆಗಳು ನಾಶವಾಗಿವೆ. ಈ ಭಾಗದ ರೈತರ ಜೀವನ ದುಸ್ಥಿತಿಗೆ ತಲುಪಿದ್ದು, ಅಧಿಕಾರಿಗಳು ಅವಕಾಶವಿರುವಷ್ಟು ಮರಗಳನ್ನು ಕಡಿಯಲು ರೈತರಿಗೆ ಅನುಮತಿ ನೀಡಬೇಕು ಎಂದರು.
0.75ರಷ್ಟು ಮರ ಕಡಿಯಲು ಅನುಮತಿ: ಮಲೆನಾಡು ಭಾಗದಲ್ಲಿ ಅತೀಯಾದ ಮಳೆಯಿಂದಾಗಿ ಕಾಫಿ, ಏಲಕ್ಕಿ ಮತ್ತು ಮೆಣಸು ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಈ ಭಾಗದ ರೈತರು ಸಂಪೂರ್ಣವಾಗಿ ಸಂಕಷ್ಟ ಅನುಭವಿಸುತ್ತಿದ್ದು, ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ 0.75ರಷ್ಟು ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಅರ್ಜಿಸಲ್ಲಿಸಿದ್ದರೂ ಅರಣ್ಯ ಇಲಾಖೆಯವರು ಇದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಾಫಿ ಬೆಳೆಗಾರರಾದ ಉಮೇಶ್ ಹಾಗೂ ನಾಗರಾಜು ಆರೋಪಿಸಿದರು. ಮರ ಕಡಿಯಲು ಅನುಮತಿ ನೀಡುವಂತೆ ಅರ್ಜಿ ಕೊಟ್ಟು 3 ವರ್ಷಗಳಾಗಿದೆ. ಇನ್ನೂ ಅನುಮತಿ ದೊರಕಿಲ್ಲ. ಕಾಫಿ ಬೆಳೆ ನಾಶದಿಂದ ಕಂಗಾಲಾಗಿದ್ದು, ನಾವು ಬೆಳೆಸಿರುವ ಮರಗಳನ್ನು ಕಡಿದು ಮಾರಾಟ ಮಾಡಲು ಅನುಮತಿ ನೀಡುತ್ತಿಲ್ಲ. 1998ರಲ್ಲಿ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಅತಿಯಾದ ಮರಗಳಿಂದ ತೇವಾಂಶ ಹೆಚ್ಚಾಗಿ ಕಾಫಿ ಬೆಳೆ ನಾಶವಾಗುತ್ತಿದ್ದರೆ ಅಂತಹ ಕಡೆ 1.5 ಮೀಟರ್ನಷ್ಟು ದಪ್ಪವಾದ ಮರಗಳನ್ನು ಕಡಿಯಲು ಅನುಮತಿಯನ್ನು ನೀಡಿದೆ. ಈ ಆದೇಶವನ್ನು ಸುಪ್ರೀಂ ಕೋರ್ಟ್ ವಾಪಸ್ ಪಡೆದಿಲ್ಲ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದರು.
ಸಕಲೇಶಪುರ ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಏಲಕ್ಕೆ ಕೇವಲ ಶೇ.5ರಷ್ಟು ಉಳಿದಿದ್ದು, 300ರಿಂದ 350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದಂತಹ ಮೆಣಸು ಕೇವಲ ಬೆರಳೆಣಿಕೆಯಷ್ಟು ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಯುವಂತಾಗಿದೆ. ಅತಿವೃಷ್ಟಿಯಿಂದ ಬೆಳೆ ನಾಶವಾಗಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಮರಗಳನ್ನು ಕಡಿದು ರೈತರು ಜೀವನ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ದೂರಿದರು.
ಜೊತೆಗೆ ಮಲೆನಾಡು ಭಾಗದಲ್ಲಿ ನಕ್ಸಲರು, ಕಳ್ಳರು ಹಾಗೂ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಈ ಭಾಗದ ರೈತರ ಜೀವ ಬೆದರಿಕೆ ಇದೆ. ಇಂತಹ ಸಂದರ್ಭದಲ್ಲಿ ಬಂದೂಕುಗಳಿಗೆ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ, ಜಿಲ್ಲಾ ಎಸ್ಪಿರವಿ ಡಿ.ಚನ್ನಣ್ಣನವರ್ ಇತರರು ಸಭೆಯಲ್ಲಿದ್ದರು.
ಅತಿವೃಷ್ಟಿ ಹೆಚ್ಚಾಗಿ ಕಾಫಿ, ಏಲಕ್ಕೆ, ಮೆಣಸು ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಜೀವನ ಸಾಗಿಸಲು ಸಾಧ್ಯವಾಗದೆ ತಾವು ಬೆಳೆಸಿದ ಮರ ಕಡಿದು ಜೀವನ ನಡೆಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಕೊಡಗು, ಚಿಕ್ಕಮಗಳೂರುರಲ್ಲಿ ಕಡಿಯಲು ಅನುಮತಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮಾತ್ರ ನೀಡುತಿಲ್ಲ .
ಟಿ ಶಾಸಕ ಎಚ್.ಕೆ.ಕುಮಾರಸ್ವಾಮಿ
ರೈತರು ತಮ್ಮ ಸ್ವಂತ ಸ್ಥಳಗಳಲ್ಲಿ ನೆಟ್ಟು ಬೆಳೆಸಿದಂತಹ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಲಾಗುತ್ತಿದೆ. ಸ್ವಾಭಾವಿಕವಾಗಿ ಬೆಳೆದಿರುವ ಮರಗಳನ್ನು ಕಡಿಯಲು ಅನುಮತಿ ನೀಡುವಂತಿಲ್ಲ. 2007ರ ಸುತ್ತೋಲೆ 2012ರಲ್ಲಿ ಸುಪ್ರೀಂ ಕೋರ್ಟ್ ವಾಪಸ್ ಪಡೆದಿದೆ. ಪ್ರಸ್ತುತ 1986ರ ಸುತ್ತೋಲೆ ಮಾತ್ರ ಜಾಲ್ತಿಯಲ್ಲಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಟಿ ಲಕ್ಷ್ಮಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ 20 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅರಣ್ಯದ ಹತ್ತಿರುವಿರುವಂತಹ ಮರಗಳನ್ನು, ಆನೆ ಕಾರಿಡಾರ್ ನಿರ್ಮಾಣದ ಚರ್ಚೆ ನಡೆಯುತ್ತಿರುವಂತಹ ಆ ಭಾಗದಲ್ಲಿ ಮತ್ತು ನೈಸರ್ಗಿಕವಾಗಿ ಬೆಳೆದಂತಹ ಮರಗಳನ್ನು ಕಡಿಯಲು ಅನುಮತಿ ನೀಡುತಿಲ್ಲ ಎಂದ ಅವರು, ರೌಡಿ ಶೀಟರ್ನಲ್ಲಿ ಇರುವವರಿಗೆ ಪರವಾನಗಿ ನೀಡಲು ಬರುವುದಿಲ್ಲ.
ಟಿ ಅನ್ಬು ಕುಮಾರ್, ಜಿಲ್ಲಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

