ಸಂಭ್ರಮದ ಗಣಪತಿ ವಿಸರ್ಜನೋತ್ಸವ
ಚನ್ನರಾಯಪಟ್ಟಣ: ಪಟ್ಟಣದ ಗಣಪತಿ ಸೇವಾ ಸಮಿತಿಯಿಂದ ಗಣಪತಿ ಪೆಂಡಾಲ್ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣಪತಿ ಮೂರ್ತಿಗೆ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಸೋಮವಾರ ಸಂಜೆ ವಿಸರ್ಜಿಸಲಾಯಿತು. ಸೋಮವಾರ ಬೆಳಗ್ಗೆ ಸ್ವಾಮಿಯನ್ನು ವಿಶೇಷ ಅಲಂಕೃತ ವಾಹನದಲ್ಲಿ ಅಲಂಕರಿಸಿ ವಿಶೇಷ ಪೋಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಾದ ಕೋಟೆ, ಬಿ.ಎಂ ರಸ್ತೆ, ಮೈಸೂರು ರಸ್ತೆ, ಕುವೆಂಪು ನಗರ, ಗಾಂಧಿ ಸರ್ಕಲ್ ಹಾಗೂ ಬಾಗೂರು ರಸ್ತೆಯಲ್ಲಿ ಸಾವಿರಾರು ಭಕ್ತಾದಿಗಳೊಂದಿಗೆ ಮೆರವಣಿಗೆ ನಡೆಸಿ ಸೋಮವಾರ ಸಂಜೆ ಪಟ್ಟಣ್ಟ ಅಮಾನಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ಅವರ ಮೆರವಣಿಗೆ ಸಂದರ್ಭದಲ್ಲಿ ಸಿರಿಗೆರೆಯಿಂದ ಕರೆಸಿದ್ದ ಆನೆ ಮೆರವಣಿಗೆ ಕೇರಳದ ಚಂಡೆ ವಾದ್ಯ ವಿಶೇಷವಾಗಿದ್ದರೆ, ಹಿಂದೂ ಧರ್ಮದ ಇತಿಹಾಸ ಸಾರುವ ಹಲವು ಸ್ತಬ್ದ ಚಿತ್ರಗಳು, ಡೊಳ್ಳು, ವೀರಗಾಸೆ, ಗೊಂಬೆ ಕುಣಿತ, ತಮಟೆ ವಾದ್ಯ, ನಾದಸ್ವರ, ವೀರಭದ್ರ ಕುಣಿತ ಹಾಗೂ ಸ್ಯಾಕ್ಸೋಪೋನ್ ವಾದನಗಳು ಭಕ್ತರನ್ನು ಆಕರ್ಷಿಸಿತು.
ಸೋಮವಾರ ಮುಂಜಾನೆ ಗಣಪತಿ ಆಸ್ಥಾನ ಮಂಟಪದ ಬಳಿಯಿಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆಯವರಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿ ಕಂಡು ಬಂದಿತು.
ಪ್ರಸನ್ನ ಗಣಪತಿ ಸೇವಾ ಸಮಿತಿ ಕಾರ್ಯಕರ್ತರು ಮೆರವಣಿಗೆ ಸಂದರ್ಭದಲ್ಲಿ ಎಲ್ಲಾ ಧರ್ಮಿಯರನ್ನು ಆಹ್ವಾನಿಸಿ ಮೆರವಣಿಗೆಯಲ್ಲಿ ಅವರನ್ನು ಸೇರಿಸಿಕೊಂಡು ಸೌಹಾರ್ಧ ಸಾಮರಸ್ಯ ಬೆಳಸಿದರಲ್ಲದೆ ಎಲ್ಲಾ ಧರ್ಮಿಯರೂ ಸ್ವಾಮಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರು.
ಗಣಪತಿ ವಿಸರ್ಜನೆಯ ಅಂಗವಾಗಿ ಭಾನುವಾರ ಬೆಳಗ್ಗೆಯಿಂದಲೇ ಸೇವಾ ಸಮಿತಿ ಹಾಗೂ ಪುರಸಭಾಧ್ಯಕ್ಷ ಮಂಜಣ್ಣ ನೇತೃತ್ವದಲ್ಲಿ ಹೋಮ ಹಾಗೂ ವಿಶೇಷ ಪೂಜೆ ಜರುಗಿತು. ನಂತರ ಭಾನುವಾರ ರಾತ್ರಿ ನಟ ಶಿವರಾಜ್ ಕುಮಾರ್ ಗಣೇಶನಿಗೆ ಪೂಜೆ ಸಲ್ಲಿಸಿ, ನಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಭಿಮಾನಿಗಳನ್ನು ರಂಜಿಸಿದರು.
ಲೇಸರ್ ಶೋ: ಗಣಪತಿ ಉತ್ಸವ ಸೇರಿದಂತೆ ಶಿವರಾಜ್ಕುಮಾರ್ ಅಭಿಮಾನಿಗಳು ಪಟ್ಟಣದ ಪೇಟೆ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನತೆಗೆ ಹೊಸದಾಗಿ ಪರಿಚಯಿಸಿದ ಲೇಸರ್ ಶೋ ವಿಶೇಷ ಮೆರಗು ನೀಡಿತು. ಮೈಸೂರಿನ ದಸರಾ ಉತ್ಸವದಲ್ಲಿ ದಸರಾ ಇತಿಹಾಸವನ್ನು ಲೇಸರ್ಶೋ ಮುಖೇನ ಬಿತ್ತರಿಸಿದ ಕಲಾವಿದರಿಂದ ಚನ್ನರಾಯಪಟ್ಟಣ ತಾಲೂಕಿನ ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಇತಿಹಾಸವನ್ನು ಲೇಸರ್ಶೋ ಮುಖೇನ ಪ್ರದರ್ಶಿಸಿ ಜನತೆಗೆ ಮುದ ನೀಡಿದರಲ್ಲದೆ ತಾಲೂಕಿನ ಇತಿಹಾಸದ ಅರಿವು ಮೂಡಿಸಿದರು.
ಪಟಾಕಿ ಪ್ರದರ್ಶನ: ಪಟ್ಟಣದ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಅರ್ಧ ದಶಕಕ್ಕೂ ಹೆಚ್ಚು ಅವದಿಯಿಂದ ಗಣಪತಿ ಪೆಂಡಾಲ್ನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಅದರಲ್ಲಿ ಪಠಾಕಿ ಪ್ರದರ್ಶನ ಜನತೆಯನ್ನು ಆಕರ್ಷಿಸುವ ಪ್ರದರ್ಶನದಲ್ಲಿ ಒಂದಾಗಿದೆ.
ಕಳೆದ 5ವರ್ಷಗಳ ಹಿಂದೆ ಪಟ್ಟಣದ ಪೇಟೆ ಶಾಲಾ ಆವರಣದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಪರಿಸರ ರಕ್ಷಣೆ ಹಾಗೂ ದುಬಾರಿ ಕರ್ಚಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತಿಸಿದ ಸಮಿತಿ ಅರ್ಧಶತಕದಿಂದ ನಡೆದು ಬಂದಿರುವ ಸಂಸೃತಿಯನ್ನು ಉಳಿಸುವ ಸಲುವಾಗಿ ಪಟಾಕಿ ಪ್ರದರ್ಶನ ನಡೆಸಿದರು. ಪಟ್ಟಣದ ಪ್ಯಾರ್ಸಾಬ್ ಬಳಗದ ವತಿಯಿಂದ ಒಂದೂವರೆ ಗಂಟೆಗಳ ಕಾಲ ವಿಶೇಷ ಪಟಾಕಿ ಪ್ರದರ್ಶನ ಜನತೆಗೆ ಮುದ ನೀಡಿತು.
ಶಾಸಕ ಬಾಲಕೃಷ್ಣ, ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ, ಭಜರಂಗಿ ಚಿತ್ರ ನಿರ್ಮಾಪಕ ನಟರಾಜ್ಗೌಡ ಹಾಗೂ ಮಂಜುನಾಥ್, ಕೆ.ಜೆ ಸುರೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

