ಹಾಸನ

ವಿರೋಧದ ನಡುವೆಯೇ ತೆರವು ಕಾರ್ಯಾಚರಣೆ

Published On :

ಕನ್ನಡಪ್ರಭ ವಾರ್ತೆ೤ ಬೇಲೂರು೤ ಅ.29
ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ 9 ಗುಂಟೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ್ದನ್ನು ಜಿಲ್ಲಾಡಳಿತದ ಆದೇಶ ಮೇರೆಗೆ ಮಂಗಳವಾರ ತೆರವು ಗೊಳಿಸಲಾಯಿತು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ನಿವಾಸಿಗಳು ಹಾಗೂ ತೆರವುಗೊಳಿಸುತ್ತಿದ್ದ ಸಿಬ್ಬಂದಿ, ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪಟ್ಟಣಕ್ಕೆ ಹೊಂದಿ ಕೊಂಡಂತಿರುವ ಬಂಟೇನಹಳ್ಳಿ ಗ್ರಾಮದ ಗುಂಡುತೋಪು ಜಾಗ ಸರ್ವೆ ನಂ 103 ರಲ್ಲಿ ಚೆನ್ನಕೇಶವಸ್ವಾಮಿ ದೇಗುಲಕ್ಕೆ ಸೇರಿದ 1 ಎಕರೆ 35 ಗುಂಟೆ ಜಾಗವಿದ್ದು, ಅದರಲ್ಲಿ 9 ಗುಂಟೆ ಜಾಗವನ್ನು 9 ಮನೆಯವರು ಒತ್ತುವರಿ ಮಾಡಿಕೊಂಡಿದ್ದರು.
ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ:  ದಶಕಗಳಿಂದ ಚನ್ನಕೇಶವಸ್ವಾಮಿ ದೇವಾಲಯ ಆಸ್ತಿಗೆ ಸೇರಿದ ವಿವಿಧ ಕಡೆಗಳಲ್ಲಿನ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಒತ್ತುವರಿ ಮಾಡಿರುವ ಜಾಗವನ್ನು ತೆರವು ಗೊಳಿಸುಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನಲೆಯಲ್ಲಿ ಮಂಗಳವಾರ ಬಂಟೇನಹಳ್ಳಿಯ ಗುಂಡುತೋಪು ಪ್ರದೇಶದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನದ ವೇಳೆಗೆ ಖುಲ್ಲಾಗೊಳಿಸಲಾಯಿತು.
ನಿವಾಸಿಗಳ ಹಿಡಿಶಾಪ:  ಬಂಟೇನಹಳ್ಳಿ ಸರ್ವೆ ನಂ 103 ರಲ್ಲಿ 9 ಗುಂಟೆ ಪ್ರದೇಶ ಒತ್ತುವರಿ ಮಾಡಿ ತಮ್ಮ ಮನೆಯ ಹಿಂಭಾಗವನ್ನು ವಿಸ್ತೀರ್ಣಗೊಳಿಸಿದ್ದನ್ನು ಜೆಸಿಬಿ ಯಂತ್ರದ ಮೂಲಕ ಸರ್ವೆ ಅಳತೆಯಂತೆ ಕೆಡವಲು ತಾಲೂಕು ಆಡಳಿತ ಹಾಗೂ ದೇಗುಲ ಸಮಿತಿಯವರು ಮುಂದಾದಾಗ ನಿವಾಸಿಗಳು ಹಿಡಿಶಾಪ ಹಾಕಿ ಕಾರ್ಯಾಚರಣೆಗೆ ತಡೆಯೊಡ್ಡಿದರು. ಈ ಸಂದರ್ಭದಲ್ಲಿ ದೇಗುಲ ಸಮಿತಿ ಹಾಗೂ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಆಗ ವೃತ್ತನಿರೀಕ್ಷಕ ಗಣೇಶ್ ಹಾಗೂ ಎಸ್ಐ ಅಶ್ವಿನ್ಕುಮಾರ್ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಲು ಮುಂದಾದರು. ಈ ನಡುವೆ ಪೊಲೀಸರಿಗೂ ನಿವಾಸಿಗಳು ಬೈಗುಳದ ಸುರಿಮಳೆಯನ್ನೇ ಸುರಿಸಿದರು. ಇದಾವುದಕ್ಕೂ ವಿಚಲಿತರಾಗದ ಪೊಲೀಸರು ತೆರವು ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದರು.
ಹನುಮಂತನಗರ ಮುಂದಿನ ಆಪರೇಷನ್:   ದೇಗುಲ ಉಪ ಸಮಿತಿ ಅಧ್ಯಕ್ಷ ಸಂತೋಷ್ ಮಾತನಾಡಿ ದೇಗುಲದ ಒಟ್ಟು 29 ಎಕರೆ ಆಸ್ತಿಯಲ್ಲಿ 11 ಎಕರೆ  ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಎಲ್ಲವನ್ನು ತೆರವು ಗೊಳಸಲು ಜಿಲ್ಲಾಡಳಿತ ಸೂಚಿಸಿದೆ. ಆರಂಭದಲ್ಲಿ ಬಂಟೇನಹಳ್ಳ ಗುಂಡುತೋಪಿನಿಂದ ಆರಂಭಿಸಿದ್ದು, ಇದು ಮುಗಿದ ನಂತರ ಗೆಂಡೇಹಳ್ಳಿ ರಸ್ತೆಯ ಹನುಮಂತನಗರದಲ್ಲಿರುವ ಸರ್ವೆ ನಂ 102 ಹಾಗೂ 101 ರ ಜಾಗದಲ್ಲಿನ ಒತ್ತುವರಿಯನ್ನು ತೆರವು ಗೊಳಿಸಲಾಗುವುದು ಎಂದು ತಿಳಿಸಿದರು. ತೆರವು ಸಂದರ್ಭದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಗಳು ಒತ್ತಡದ ಮೂಲಕ ಕಾರ್ಯಾಚರಣೆಗೆ ತಡೆ ತಂದರೂ ಅದಕ್ಕೆ ಮನ್ನಣೆ ನೀಡದೆ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು. ಮುಂದಿನ ವಾರದಿಂದ ಇನ್ನೂ ಹೆಚ್ಚಿನ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದ್ದು ಅದರಂತೆ ತೆರವು ಕಾರ್ಯ ಮುಂದುವರೆಸಲಾಗುವುದು ಎಂದು ವಿವರಿಸಿದರು.
ನಿವಾಸಿಗಳ ಆಕ್ರೋಶ:   ಏಕಾಏಕಿ ತಾಲೂಕು ಆಡಳಿತ ಹಾಗೂ ದೇಗುಲ ಸಮಿತಿಯವರು ಪೊಲೀಸರ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಿ ಬಡವರ ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು. 5 ವರ್ಷದ ಹಿಂದೆ ಶಾಸಕ ರುದ್ರೇಶ್ಗೌಡ ಹಾಗೂ ತಹಸೀಲ್ದಾರರು ಇದೇ ಗುಂಡುತೋಪು ಜಾಗದಲ್ಲಿ ಸರ್ವೆ ಮಾಡಿಸಿ ಟ್ರಂಚ್ ಹೊಡೆಸಿ ಇನ್ನು ನಿಮಗೆ ಭಯವಿಲ್ಲ ಎಂದು ಭರವಸೆ ನೀಡಿದ್ದರು.
ಅಲ್ಲದೆ ಕಳೆದ 6 ತಿಂಗಳ ಹಿಂದೆ ಇದೇ ವಿವಾದ ನಡೆದಾಗ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ತೆರವು ಮಾಡದಂತೆ ಮನವೊಲಿಸಲು ಮುಂದಾಗುವುದಾಗಿ ಶಾಸಕರು ಹೇಳಿದ್ದರು. ಆದರೆ ಈಗ ನೋಡಿದರೆ ಯಾವುದೇ ಮುನ್ಸೂಚನೆ ನೀಡದೆ ಮನೆಗಳನ್ನು ಖುಲ್ಲಾ ಮಾಡಿಸಲು ಹೊರಟಿರುವುದು ಯಾವ ನ್ಯಾಯ, ಅಲ್ಲದೆ ಅಧಿಕಾರ ಇದೆ ಎಂದು ಏಕಾಏಕಿ ಜೆಸಿಬಿ ತಂದು ಬಡವರ ಮನೆಯನ್ನು ಒಡೆಯುತ್ತಿದ್ದಾರೆ.
ಈ ಪ್ರದೇಶದಲ್ಲಿ ಬಹುತೇಕರು ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದಾರೆ. ದೇಗುಲದ ಜಾಗ ಎಂದಾದರೆ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯವರು ನಿವೇಶನ ನೀಡುವಾಗ ಹಕ್ಕುಪತ್ರ ನೀಡಿ, ಮೂಲ ಸೌಕರ್ಯವನ್ನು ಏಕೆ ಕಲ್ಪಿಸಿದರು. ಈಗ ನೋಡಿದರೆ ಇದು ನಿಮ್ಮ ಜಾಗವಲ್ಲ ಎಂದು ದೂರಿ ಮನಬಂದಂತೆ ಒಡೆದು ಹಾಕಲು ಮುಂದಾಗಿದ್ದು ಯಾವ ನ್ಯಾಯ ಎಂದು ತಮ್ಮ ಅಳಲು ತೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.