ಮರಳು ದಂಧೆ: ರು. 6.70 ಲಕ್ಷ ದಂಡ
ಕ.ಪ್ರ.ವಾರ್ತೆ ಹೊಳೆನರಸೀಪುರ ಅ.29
ತಾಲೂಕಿನ ನಾನಾ ಕಡೆಗಳಲ್ಲಿ ಹೇಮಾವತಿ ನದಿಯಿಂದ ಅಕ್ರಮವಾಗಿ ತೆಗೆಯುತ್ತಿದ್ದ ಮರಳು ಹಾಗೂ ಮರಳು ಸಾಗಿಸಲು ಬಳಸಲಾಗುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡು, ಕಳೆದ ಎರಡು ತಿಂಗಳಿನಲ್ಲಿ ಅಕ್ರಮ ಮರಳು ದಂಧೆಯ ವಿರುದ್ಧ 6.70 ಲಕ್ಷ ರು. ದಂಡ ವಿಧಿಸಲಾಗಿದೆ ಎಂದು ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ ತಿಳಿಸಿದ್ದಾರೆ.
ಮಂಗಳವಾರ ತಾಲೂಕಿನ ಕಾಮಸಮುದ್ರ ಹಾಗೂ ವಡ್ಡರಪಾಳ್ಯ ಗ್ರಾಮ ಸಮೀಪದ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕಬ್ಬಿಣದ 8 ದೋಣಿಗಳನ್ನು ವಶಕ್ಕೆ ತೆಗೆದುಕೊಂಡು ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ ನಂತರ ಅವರು ಮಾಹಿತಿ ನೀಡಿದರು.
ಕಳೆದ ಎರಡು ತಿಂಗಳಿನಿಂದ ತಾಲೂಕಿನ ನಾನಾ ಕಡೆಗಳಲ್ಲಿ ಆಕ್ರಮವಾಗಿ ಮರಳು ತೆಗೆಯುತ್ತಿದ್ದ ದೋಣಿಗಳು, ಮರಳು ಸಾಗಿಸುತ್ತಿದ್ದ ಲಾರಿಗಳು ಹಾಗೂ ನದಿಯಿಂದ ಮರಳೆತ್ತುತ್ತಿದ್ದ ಇಟಾಚಿ ಯಂತ್ರಗಳನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ದಾಳಿ ನಡೆಸಲಾಗಿದೆ ಎಂದು ತಹಸೀಲ್ದಾರ್ ಶಿವಶಂಕರಪ್ಪ ತಿಳಿಸಿದರು.
ಕಳೆದ ಮೂರು ದಿನಗಳಿಂದಲೂ ರಾತ್ರಿ ವೇಳೆಯಲ್ಲಿ ತಾಲೂಕಿನ ಗೋಂದಿಮಲ್ಲೇನಹಳ್ಳಿ, ಕಟ್ಟಹಳ್ಳಿ, ಕಟ್ಟೆಬೆಳಗುಲಿ ಮೊದಲಾದ ಗ್ರಾಮಗಳ ಬಳಿಯಲ್ಲಿ ನದಿಯಿಂದ ಆಕ್ರಮವಾಗಿ ಮರಳೆತ್ತುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿ ದಾಸ್ತಾನು ಮಾಡಲಾಗಿದ್ದ ಮರಳನ್ನು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸ್ಥಳದಲ್ಲಿಯೇ ಹರಾಜು ಮಾಡಲಾಗಿದ್ದು, ಅಲ್ಲಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಲಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆ, ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆಗಳು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಇದ್ದರೂ, ಅಕ್ರಮ ಮರಳು ಸಾಗಣೆ ಮಾತ್ರ ಯಾವುದೇ ಆತಂಕವಿಲ್ಲದೇ, ಪ್ರಭಾವಿಗಳ ಕುಮ್ಮಕ್ಕಿನಿಂದ ನಡೆಯುತ್ತಲೇ ಇದೆ.
ಅಲ್ಲದೇ ಅಕ್ರಮ ಮರಳು ದಂಧೆಯ ವಿರುದ್ಧ ದಾಳಿ ನಡೆಸುತ್ತಿರುವ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಇಲ್ಲಿನ ಅಕ್ರಮ ಮರಳು ದಂಧೆಕೋರರು ವಾಗ್ವಾದ ನಡೆಸಿರುವುದಲ್ಲದೇ, ಹಲ್ಲೆಗೂ ಮುಂದಾಗಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಇದು ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಆಕ್ರಮ ಮರಳು ದಂಧೆಯ ವಿರುದ್ಧ ಕ್ರಮಕ್ಕೆ ಮುಂದಾಗುವ ಯಾವುದಾದರೂ ಅಧಿಕಾರಿಗಳ ಜೀವಕ್ಕೆ ಹಾನಿಯಾದರೂ ಅಚ್ಚರಿಯಿಲ್ಲ ಎನ್ನುವ ಆತಂಕ ಅಧಿಕಾರಿ ವಲಯದಲ್ಲಿ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

