ಹಾಸನ

ಉಕ್ಕಿ ಹರಿವ ಕೊಳಚೆ ನೀರು: ಪುರಸಭೆ ಮೌನ

Published On :

ಕ.ಪ್ರ.ವಾರ್ತೆ   ಹೊಳೆನರಸೀಪುರ   ಅ.30
ಪಟ್ಟಣದ ಕೆಲ ಭಾಗಗಳಲ್ಲಿನ ಒಳಚರಂಡಿ ವ್ಯವಸ್ಥೆಯು ಎಷ್ಟು ಹದೆಗೆಟ್ಟಿದೆಯೆಂದರೆ, ವಾರಕ್ಕೊಮ್ಮೆಯಾದರೂ ಮುಖ್ಯ ರಸ್ತೆಗಳಲ್ಲಿನ ಯುಜಿಡಿ ಚೇಂಬರ್ಗಳು ತುಂಬಿ ಉಕ್ಕಿ ರಸ್ತೆಯ ಮೇಲೆಲ್ಲಾ ಹರಿಯುತ್ತಿದ್ದರೂ, ಪುರಸಭೆ ಮಾತ್ರ ತಣ್ಣಗಿರುವುದನ್ನು ರೂಢಿಸಿಕೊಂಡಿದೆ.
ಇಲ್ಲಿನ ಪ್ರಮುಖ ವ್ಯಾಪಾರಿ ಕೇಂದ್ರವಾದ ಪುರಸಭೆಯ ವಾಣಿಜ್ಯ ಮಳಿಗೆಗಳಿರುವ ಸ್ಥಳದಲ್ಲಿ, ಎಸ್.ಎಲ್.ಎನ್. ಚಿತ್ರಮಂದಿರಕ್ಕೆ ತೆರಳುವ ದಾರಿಯಲ್ಲಿನ ಯುಜಿಡಿ ಚೇಂಬರ್ ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ಉಕ್ಕಿ ರಸ್ತೆಯ ಮೇಲೆಲ್ಲಾ ಹರಿಯುತ್ತಲೇ ಇದ್ದರೂ, ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಸಾಧ್ಯವಾಗದೇ ಇರುವುದು ಪುರಸಭೆಯ ಕಾರ್ಯಕ್ಷಮತೆಯನ್ನು ಬೊಟ್ಟು ಮಾಡಿ ತೋರಿಸುವಂತಿದೆ.
ಪುರಸಭೆ ಮುಂದಿನ ವಾಣಿಜ್ಯ ಮಳಿಗೆಗಳ ಬಳಿಯೇ ಹೀಗೆ ವಾರಗಟ್ಟಳೆ ಉಕ್ಕಿ ಹರಿಯುವ ಒಳಚರಂಡಿಯ ಕೊಳಚೆ ನೀರಿನ ಪಕ್ಕದಲ್ಲಿಯೇ ಬೀದಿ ಬದಿಯ ಕ್ಯಾಂಟೀನ್ ಅಲ್ಲದೇ ಉಕ್ಕಿ ಹರಿಯುತ್ತಿರುವ ಯುಜಿಡಿ ಚೇಂಬರ್ನ ಮುಂದೆಯೇ ನಾಲ್ಕಾರು ಹೋಟೆಲ್ಗಳು ಇವೆ. ಇಲ್ಲಿ ಜನರು ಮೂಗು ಮುಚ್ಚಿ ತಿರುಗಾಡಬೇಕಾಗಿದೆಯಲ್ಲದೇ, ಈ ದುರ್ನಾತದ ನಡುವೆಯೇ ಹೋಟೆಲ್ಗಳಲ್ಲಿ ಊಟ ತಿಂಡಿ ಸೇವಿಸಬೇಕಾದ ಅನಿವಾರ್ಯತೆ ಇದೆ.
ಈ ಅವ್ಯವಸ್ಥೆಯ ಕುರಿತಂತೆ ಇಲ್ಲಿನ ಮಳಿಗೆದಾರರು ಸಾಕಷ್ಟು ಬಾರಿ ಪುರಸಭೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ವ್ಯಾಪಾರಸ್ಥರ ದೂರು. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ  ಪುರಸಭೆಯ ಆಡಳಿತ ಮಾತ್ರ ತನ್ನ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಾ, ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಮತ್ತು ಪುರಸಭೆಗೆ ಬಾಡಿಗೆ ಕಟ್ಟುವ ಮಳಿಗೆಗಳ ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ಸಹಕರಿಸಲು ಮುಂದಾಗುತ್ತಿಲ್ಲ. ಈ ಕಾರಣದಿಂದಾಗಿ ಬೇಸತ್ತಿರುವ ವ್ಯಾಪಾರಿಗಳು, ವ್ಯವಸ್ಥೆ ಸರಿಪಡಿಸಿ ನಂತರದಲ್ಲಿ ಬಾಡಿಗೆ ಕೇಳಲು ಬನ್ನಿ ಎಂದು ಹೇಳುವ ಸ್ಥಿತಿ ತಲುಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.