ಮರಳು ದಂಧೆಗೆ ಪೊಲೀಸರೇ ಬೆಂಗಾವಲು!
ಕ.ಪ್ರ.ವಾರ್ತೆ ಸಕಲೇಶಪುರ ಅ.31
ತಾಲೂಕಿನಲ್ಲಿ ಅಕ್ರಮ ಮರಳು ಮತ್ತು ಜಲ್ಲಿ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಪೋಲಿಸರೆ ಬೆಂಗಾವಲಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ರೈಲು ನಿಲ್ದಾಣ ಸಮೀಪದ ಹೇಮಾವತಿ ನದಿಯಿಂದ ಮರಳನ್ನು ಟ್ರ್ಯಾಕ್ಟರ್ ಎಂಜಿನ್ ಬಳಸಿ ನದಿಯ ಒಳಗಿಂದ ಬಗೆದು ತೆಗೆಯಲಾಗುತ್ತಿದೆ. ದಿನಂಪ್ರತಿ ನೂರಾರು ಟ್ರ್ಯಾಕ್ಟರ್ ಮರಳು ಸಾಗಿಸಲಾಗುತ್ತಿದ್ದು, ಪಟ್ಟಣದಲ್ಲೆ ಮರಳಿಗೆ ಅತಿ ಬೇಡಿಕೆ ಇರುವ ಕಾರಣ ಟ್ರ್ಯಾಕ್ಟರ್ ಮರಳಿಗೆ 2ರಿಂದ 3 ಸಾವಿರವರಗೆ ಮಾರಾಟ ಮಾಡಲಾಗುತ್ತಿದೆ.
ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ರಸ್ತೆಯಲ್ಲೆ ನಿಂತು ಅಕ್ರಮ ಮರಳು ಸಾಗಿಸುವವರಿಂದ ಹಣ ಪಡೆಯುತ್ತಿದ್ದಾರೆ. ಇದಲ್ಲದೆ ತಾಲೂಕಿನ ಮದನಾಪುರ-ಹಾದಿಗೆ-ಸುಳ್ಳಕ್ಕಿ-ಹಾಲೆಬೇಲೂರು ಗ್ರಾಮಗಳಲ್ಲೂ ಮರಳು ಸಾಗಾಟ ನಡೆಯುತ್ತಿದ್ದು, ಸುಬ್ರಹ್ಮಣ್ಯ ಹಾಗೂ ಉಡುಪಿಯಿಂದ ಸಾಗಿಸಲು ಸರಕಾರ ನೀಡಿರುವ ಪರವಾನಗಿಯನ್ನು ಪಡೆದು ಹೇಮಾವತಿ ನದಿಯ ಮರಳನ್ನು ಬೆಂಗಳೂರು ಹಾಗೂ ಹಾಸನ ನಗರಕ್ಕೆ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ದಿನಂಪ್ರತಿ ಇಲ್ಲಿಂದ 50ಕ್ಕೂ ಹೆಚ್ಚಿನ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಈ ವಿಚಾರ ಸಹ ಪೊಲೀಸರಿಗೆ ತಿಳಿದಿದೆ.
ಈ ಗ್ರಾಮೀಣ ಪ್ರದೇಶದಲ್ಲಿ ತೆಗೆಯುವ ಮರಳನ್ನು ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಮಾತ್ರವಲ್ಲದೆ ಪಿಕ್-ಅಫ್ ವಾಹನದಲ್ಲೂ ಸಾಗಿಸಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಅಕ್ರಮ ಮರಳು ಮಾಫಿಯಾಕ್ಕೆ ಪೊಲೀಸ್ ಅಧಿಕಾರಿಗಳೆ ಸಾಥ್ ನೀಡುತ್ತಿದ್ದು ಎರಡು ಪೊಲೀಸ್ ಠಾಣೆಗಳಿಗೆ ತಲಾ 5 ಸಾವಿರ ನೀಡಲಾಗುತ್ತಿದೆ ಎಂಬ ದೂರುಗಳಿದ್ದು, ಇತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಿತಿಮೀರಿದ ಜಲ್ಲಿ ಕಲ್ಲು ದಂಧೆ: ತಾಲೂಕಿನಲ್ಲಿ ಜಲ್ಲಿ ಅಕ್ರಮ ದಂಧೆ ಮಿತಿಮೀರಿದ್ದು ಇದರ ಹಿಂದೆ ಉನ್ನತ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಕೇಳಿಬರುತ್ತಿದೆ.
ಸುಪ್ರೀಂ ಕೋರ್ಟ್ನಲ್ಲಿ ಕ್ರಶರ್ಗಳನ್ನು ನಡೆಸದಂತೆ ಆದೇಶಿಸಿದ್ದು, ರಾಜ್ಯ ಸರ್ಕಾರ ಪಾಲನೆ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕ್ರಶರ್ಗಳ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿದೆ. ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾನೂನುಗಳಿವೆ. ಆದರೆ ಈ ಎಲ್ಲಾ ಕಾನೂನನ್ನು ಗಾಳಿಗೆ ತೂರಿ ರಾತ್ರಿ ವೇಳೆ ಮರಳು ಸಾಗಣೆ ನಡೆದರೆ, ಹಗಲಿನಲ್ಲಿ ಜಲ್ಲಿ ಸಾಗಣೆ ನಡೆಯುತ್ತಿದೆ.
ಅಧಿಕಾರಿಗಳು ಸಾಥ್: ವಿವಿಧ ವಾಹನಗಳಲ್ಲಿ ಮರಳು ದಂಧೆ ನಡೆಯುತ್ತಿದ್ದರೆ, ಟಿಪ್ಪರ್ ಮೂಲಕ ಜಲ್ಲಿ ಸಾಗಿಸಲಾಗುತ್ತಿದೆ. ರಾತ್ರಿ-ಹಗಲು ಬಹಿರಂಗವಾಗಿ ನಡೆಯುತ್ತಿರುವ ಈ ಅವ್ಯವಹಾರಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಬೆಂಗಾವಲಾಗಿ ನಿಂತಿದ್ದಾರೆಂದು, ಅವರ ಆದೇಶದ ಮೇರೆಗೆ ಕೆಳ ಮಟ್ಟದ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.
ಪಟ್ಟಣದ ಆಜಾದ್ ರಸ್ತೆ ಸೇರಿದಂತೆ ಕಾಮಗಾರಿ ನಡೆಯುತ್ತಿರುವ ಎಲ್ಲಾ ಕಟ್ಟಡಗಳ ಬಳಿ ಮರಳು ರಾಶಿ-ರಾಶಿಯಾಗಿ ಮರಳು ಮತ್ತು ಜಲ್ಲಿ ಬಿದ್ದಿದ್ದರೂ ಇದು ಎಲ್ಲಿಂದ ಹೇಗೆ ಬಂತು ಎಂದು ಯಾರು ಪ್ರಶ್ನಿಸಲು ಮುಂದಾಗುತ್ತಿಲ್ಲ.
ಮರ, ಕಬ್ಬಿಣ, ವಾಹನ ಸೇರಿದದಂತೆ ಕಾನೂನು ಮೀರಿ ನಡೆಯುವ ಯಾವುದೇ ಅವ್ಯವಹಾರದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತನಿಖೆಗೆ ಮುಂದಾಗುತ್ತಾರೆ. ಬೀದಿಯಲ್ಲಿ ವರಾಸುದಾರರಿಲ್ಲದ ವಸ್ತು ಬಿದ್ದಿದ್ದರೂ ಇದು ಯಾರದ್ದು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡುವ ಅಧಿಕಾರಿಗಳು ರಸ್ತೆಯಲ್ಲಿ ಬಹಿರಂಗವಾಗಿ ಬಿದ್ದಿರುವ ರಾಶಿ-ರಾಶಿ ಮರಳು ಮತ್ತು ಜಲ್ಲಿ ಎಲ್ಲಿಂದ ಬಂತು ಎಂದು ಏಕೆ ಪ್ರಶ್ನಿಸುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಗಳಿಗೆ ತಹಸೀಲ್ದಾರ್ ಪಾರ್ವತಿಯವರು ಏನೆಂದು ಉತ್ತರಿಸುವರೂ ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

