ಹಾಸನ

ಮುಖ್ಯಮಂತ್ರಿಗೆ ಬರೆದ 19 ಪುಟಗಳ ರಕ್ತ ಪತ್ರ!

Published On :

ಹೊಳೆನರಸೀಪುರ: ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರವೇ ಕನ್ನಡತನವನ್ನು ಜಾಗೃತಗೊಳಿಸಿಕೊಂಡ ಕನ್ನಡಿಗರಾಗುವ ಬದಲಿಗೆ ಎಲ್ಲಾ ಕಾಲಕ್ಕೂ, ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡತನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸೂಕ್ತ ಮತ್ತು ಸಮಂಜಸವಾದ ಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ತಾಲೂಕಿನ ಹಳ್ಳಿಯ ಯುವಕನೊಬ್ಬ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಮೈ ರಕ್ತದಲ್ಲಿ 19 ಪುಟಗಳ ಪತ್ರವನ್ನು ಬರೆದಿದ್ದಾನೆ!.
ಸಿದ್ದರಾಮಯ್ಯ ಅವರು ತಾನು ಕೇಳಿಕೊಂಡಿರುವ ಸಲಹೆಗಳನ್ನು ಓದುವರೆಂದು, ನಂತರದಲ್ಲಿ ಅದಕ್ಕೆ ಏನಾದರೂ ಪ್ರತಿಕ್ರಿಯೆ ದೊರೆತು ತನ್ನ ಆಶಯಗಳು ಈಡೇರಬಹುದೆನ್ನುವ ನಿರೀಕ್ಷೆಯೊಂದಿಗೆ ತಾಲೂಕಿನ ಮೆಣಗನಹಳ್ಳಿಯ ಯುವಕ ಎಂ.ಎಲ್. ಚಂದ್ರಶೇಖರ್ ಎಂಬ ಯುವಕ ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ.
ಖಾಸಗಿ ಕಂಪನಿ ಉದ್ಯೋಗಿ: ಪದವಿ ತರಗತಿಯವರೆವಿಗೂ ತಾಲೂಕಿನಲ್ಲಿಯೇ ವ್ಯಾಸಂಗ ಮಾಡಿ ಜೀವನೋಪಾಯಕ್ಕಾಗಿ 3 ವರ್ಷಗಳ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಖಾಸಗಿ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಚಂದ್ರಶೇಖರ್. ಮರಾಠಿಗರ ಭಾಷಾ ಪ್ರೇಮ, ಅವರಲ್ಲಿನ ನೆಲ-ಜಲದ ಬಗೆಗಿನ ಅಪರಿಮಿತವಾದ ಕಾಳಜಿ, ಪ್ರತಿ ಹಂತದಲ್ಲಿ ಪ್ರತಿ ಕ್ಷಣವೂ ಮಾತೃಭಾಷೆಯ ಬಗ್ಗೆ ಅಲ್ಲಿನ ಮರಾಠಿಗರಿಗಿರುವ ಬದ್ಧತೆ ನಮ್ಮ ಕನ್ನಡಗರಲ್ಲಿ ಏಕಿಲ್ಲ ಎಂಬದು ಚಂದ್ರಶೇಖರ್ ಪ್ರಶ್ನೆ. ತಾನು ಜೀವನಕ್ಕಾಗಿ ಕೆಲಸ ಮಾಡುವ ಸ್ಥಳದಲ್ಲಿ ಪ್ರತಿದಿನ ಪ್ರತಿ ಕ್ಷಣವೂ ಅನುಭವಿಸಿದ ನೋವನ್ನು ತನ್ನದೇ ರಕ್ತದಲ್ಲಿ ಪತ್ರವನ್ನು ಬರೆದು ಕನ್ನಡ ಭಾಷೆ ಹಾಗೂ ನಾಡಿನ ಸಂರಕ್ಷಣೆ ಕೈಗೊಳ್ಳುವಂತೆ ಕೋರಲು ತನ್ನ ರಾಜ್ಯದಲ್ಲಿನ ಮುಖ್ಯಮಂತ್ರಿಗೆ ಪತ್ರ ಬರೆಯುವ ನಿರ್ಧಾರವನ್ನು ಚಂದ್ರಶೇಖರ್ ಕೈಗೊಂಡಿದ್ದಾರೆ.
ಬೇಡಿಕೆ ರೂಪದ ಸಲಹೆಗಳು: 'ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ' ಎಂಬ ನಾಣ್ನುಡಿಯನ್ನು ಅರಿತಿರುವ ಚಂದ್ರಶೇಖರ್, ನನ್ನ ಕೈಯನ್ನೇ ಕೊಯ್ದುಕೊಂಡು ರಕ್ತವನ್ನು ಬಸಿದು ಬಿಳಿ ಹಾಳೆಗಳಲ್ಲಿ ರಾಜ್ಯದಲ್ಲಿನ ಎಲ್ಲಾ ಕಚೇರಿಗಳಲ್ಲಿ, ವ್ಯವಹಾರಿಕ ಕಚೇರಿಗಳಲ್ಲೂ ನೌಕರರು ಹಾಜರಾತಿ ಪುಸ್ತಕದಲ್ಲಿ ಕನ್ನಡದಲ್ಲಿಯೇ ಸಹಿ ಹಾಕುವುದು, ಗಡಿನಾಡ ಸಮಸ್ಯೆಗಳನ್ನು ನೀಗಿಸುವ ಸಲುವಾಗಿ ಕರ್ನಾಟಕದ ಗಡಿಭಾಗಗಳಲ್ಲಿ ಹೆಚ್ಚಿನ ಕನ್ನಡ ಶಾಲೆಗಳನ್ನು ತೆರೆದು ನುರಿತ ಕನ್ನಡ ಶಿಕ್ಷಕರನ್ನು ನೇಮಿಸುವುದು, ರಾಜ್ಯದಲ್ಲಿನ ಎಲ್ಲಾ ಕಡೆಗಳಲ್ಲಿಯೂ ಕನ್ನಡ ನಾಮಫಲಕವನ್ನೇ ಕಡ್ಡಾಯಗೊಳಿಸಬೇಕು, ಗಡಿ ಭಾಗದ ಜಿಲ್ಲೆಗಳಿಂದ ಚುನಾಯಿತರಾಗಿರುವ ಶಾಸಕರು ನೆರೆ ರಾಜ್ಯದಲ್ಲಿನ ಜನರನ್ನು ಓಲೈಸುವುದನ್ನು ತನಿಖೆಗೊಳಪಡಿಸಿ ಅಂತಹ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಜಾರಿಗೆ ತರುವುದು... ಹೀಗೆ ಈ ಯುವಕ ಬರೆದಿರುವ ಬೇಡಿಕೆ ರೂಪದ ಸಲಹೆಗಳು ಮುಂದುವರೆಯುತ್ತವೆ.
ಪಂಚ ಕೋಟಿ ಪ್ರತಿನಿಧಿ: ಮುಖ್ಯಮಂತ್ರಿಗೆ ಬರೆದಿರುವ 'ರಕ್ತ ಚರಿತ್ರೆ'ಯ ಪತ್ರದಲ್ಲಿ ರಾಜ್ಯದಲ್ಲಿನ ಎಲ್ಲಾ ಕ್ಷೇತ್ರಗಳಿಗೂ ಒಂದು ಆಯೋಗವನ್ನು ತೆರೆದಿರುವಂತೆ ರೈತ ಸಮುದಾಯಕ್ಕೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈತ ಆಯೋಗವನ್ನು ಸ್ಥಾಪಿಸುವಂತೆ ಒತ್ತಾಯಿಸುವ ಜೊತೆಗೆ, ಕನ್ನಡ ನಾಡಿನಲ್ಲಿ ಬಿತ್ತರಗೊಳ್ಳುವ ಎಲ್ಲಾ ಮಾಧ್ಯಮಗಳೂ ಸಂಪೂರ್ಣ ಕನ್ನಡದಲ್ಲೇ ಇರಬೇಕು, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಸಾಧನೆಗೈದಿರುವ ವ್ಯಕ್ತಿಯಲ್ಲಿನ ಕನ್ನಡತನ ಹಾಗೂ ಕನ್ನಡ ಪರತೆಯನ್ನು ಮೊದಲ ಅಳತೆಗೋಲಾಗಿ ಪರಿಗಣಿಸುವುದು, ಕನ್ನಡ ನೆಲ-ಜಲ-ಭಾಷೆಗೆ ಧಕ್ಕೆಯಾಗದಂತೆ ರಾಜ್ಯವ್ಯಾಪಿ ಕನ್ನಡ ಕಾವಲು ಪಡೆಯನ್ನು ಸ್ಥಾಪಿಸುವುದು ಇವೇ ಮೊದಲಾದ ಹತ್ತು ಹಲವಾರು ಸಲಹೆ ಹಾಗೂ ಬೇಡಿಕೆಗಳನ್ನು ಯುವಕ ಚಂದ್ರಶೇಖರ್ ನಾಡಿನ ಪಂಚ ಕೋಟಿ ಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಸಮರ್ಪಿಸಿದ್ದಾರೆ.
ಅಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರವನ್ನು ಜಾರಿಗೊಳಿಸಿರುವಂತೆ, ಕರ್ನಾಟಕದಲ್ಲಿನ ಎಲ್ಲಾ ಚಿತ್ರಮಂದಿರಗಳಲ್ಲೂ ನಾಡಗೀತೆಯನ್ನು ಕಡ್ಡಾಯವಾಗಿ ಪ್ರಸಾರ ಮಾಡುವಂತೆ ಒತ್ತಾಯಿಸಿರುವ ಜೊತೆಗೆ, ರಾಜ್ಯದ ಎಲ್ಲಾ ಕಡೆಗಳಲ್ಲೂ ಸಂಚರಿಸುವ ಎಲ್ಲಾ ಸಾರಿಗೆ ವಾಹನಗಳಲ್ಲೂ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಕೋರಿದ್ದಾನೆ.
ಆದರೆ ಹಳ್ಳಿಯ ಯುವಕನೊಬ್ಬನ ಈ ಕನ್ನಡತನ, ನೆಲ-ಜಲ-ಭಾಷೆಯ ಬಗೆಗಿನ ಅಭಿಮಾನ ವಿಧಾನಸೌಧದಲ್ಲಿ ಕುಳಿತಿರುವ ಮುಖ್ಯಮಂತ್ರಿಗಳ ಕೈಗೆ ತಲುಪುವುದೇ, ತಲುಪಿದರೂ ಯುವಕನ ರಕ್ತ ಸಿಕ್ತ ಕೋರಿಕೆಗೆ ಮನ್ನಣೆ ಅಥವಾ ಕನಿಷ್ಠ ಪ್ರತಿಕ್ರಿಯೆ ದೊರಕಬಹುದೇ ಎಂಬುದನ್ನು ತಾಯಿ ಕನ್ನಡಾಂಬೆಯೇ ತಿಳಿಸಬೇಕಿದೆ.

 ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.