ಹಾಸನ

'ಅನಕ್ಷರತೆ, ಜಾತೀಯತೆಯಿಂದ ಅವ್ಯವಸ್ಥೆಯ ಸಮಾಜ'

Published On :

ಕ.ಪ್ರ.ವಾರ್ತೆ ಹಾಸನ ಸೆ.1
ಅಜ್ಞಾನ, ಅನಕ್ಷರತೆ, ಅಸಮಾನತೆ, ಜಾತೀಯತೆ ಹಾಗೂ ಬಡತನಗಳಿಂದ ಅವ್ಯವಸ್ಥೆಯ ಸಮಾಜ ನಿರ್ಮಾಣವಾಗಿ, ಜನಸಾಮಾನ್ಯರ ಸ್ಥಿತಿ ಶೋಚನೀಯಗೊಳ್ಳುತ್ತಾ ಸಾಗುತ್ತಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ  ವಿಷಾದಿಸಿದ್ದಾರೆ.
ನಗರದ ರಂಗೋಲಿ ಹಳ್ಳ ಬಿಜಿವಿಎಸ್ ಘಟಕದ ಮೊದಲ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,  ಇದಕ್ಕೆ ಕಾರಣ ದೇಶದ ಸಂಪನ್ಮೂಲ ಸಮಗ್ರವಾಗಿ ಹಂಚಿಕೆಯಾಗದೆ ಕೆಲವೇ ಜನರ ಕೈಯಲ್ಲಿ ಸೇರಿಕೊಂಡಿರುವುದು, ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸದಿರುವುದು ಹಾಗೂ ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆ ಬೆಳೆಯದಿರುವುದರಿಂದಲೆ ಆಗಿದೆ ಎಂದು ಹೇಳಿದರು.
ಭಾರತ ಇಂದು ಎದುರಿಸುತ್ತಿರುವ ಬಡತನ ಹಾಗೂ ಇತರೆ ಸಮಸ್ಯೆಗಳಿಗೆ ವಿಜ್ಞಾನ ಒಂದರಿಂದ ಮಾತ್ರವೇ ಪರಿಹಾರ ಒದಗಿಸಲು ಸಾಧ್ಯ ಹೊರತು ಯಾವುದೇ ತಪಸ್ಸಿನಿಂದಾಗಲಿ, ಯಜ್ಞ, ಯಾಗಗಳಿಂದಾಗಲಿ, ವಿಶೇಷವಾದ ನಮೋರಾಗಗಳಿಂದಾಗಲಿ ಆಗುವುದಿಲ್ಲ.
ಹಾಗಾಗಿ ವೈಜ್ಞಾನಿಕ ಜ್ಞಾನ ಹಾಗೂ ವೈಚಾರಿಕ ಚಿಂತನೆಯನ್ನು ಜನಸಾಮಾನ್ಯರಲ್ಲಿ ಬೆಳೆಸಿ ವಿಜ್ಞಾನದ ಅಭಿವೃದ್ಧಿ ಜನಸಾಮಾನ್ಯರ ಪರವಾಗಿ ಬೆಳೆಸುವಲ್ಲಿ ಬಿಜಿವಿಎಸ್ ರಾಷ್ಟ್ರಾದ್ಯಂತ ಶ್ರಮಿಸುತ್ತಿವೆ ಎಂದ ಅವರು ಬಿಜಿವಿಎಸ್‌ನ ಘಟಕಗಳು ಪ್ರತಿ ಹಳ್ಳಿಯಲ್ಲೂ ಬೆಳೆದು ವಿಸ್ತಾರಗೊಳ್ಳಬೇಕು. ಈ ನಿಟ್ಟಿನಲ್ಲಿ ರಂಗೋಲಿಹಳ್ಳಿ ಘಟಕ ಸ್ಥಳೀಯ ಜನರ ಜ್ಞಾನದ ವಿಸ್ತಾರವನ್ನು ಹೆಚ್ಚು ಮಾಡಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ತಾಲೂಕು ಅಧ್ಯಕ್ಷ ಡಿ.ಟಿ.ಶಿವಣ್ಣ ಮಾತನಾಡಿ, ವಿಜ್ಞಾನ ಸಮಿತಿ ದೇಶದಲ್ಲಿ 3 ವಿಭಾಗಗಳಲ್ಲಿ ಚಟುವಟಿಕೆ ನಡೆಸುತ್ತಾ ಬರುತ್ತಿದೆ. ದೇಶದ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ಸಂತಸ ಕಲಿಕೆಯ ಪ್ರಾಕಾರಗಳನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.
ರಂಗೋಲಿ ಹಳ್ಳ ವಾರ್ಡ್‌ನಲ್ಲಿ ನೈರ್ಮಲ್ಯ, ಆರೋಗ್ಯ, ಸಾಕ್ಷರೋತ್ತರ ಚಟುವಟಿಕೆ, ಮಹಿಳಾ ಸಶಕ್ತತೆ ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯು ಚಟುವಟಿಕೆ ನಡೆಸಲಿದೆ ಎಂದರು.
ಬಿಜಿವಿಎಸ್ ಉತ್ತರ ಬಡಾವಣ ಘಟಕದ ಅಧ್ಯಕ್ಷೆ ಮಮತಾ ಶಿವು, ಕಾರ್ಯದರ್ಶಿ ರವೀಶ್, ಶಾಂತಿನಗರ ಬಿಜಿವಿಎಸ್ ಘಟಕದ ಕಾರ್ಯದರ್ಶಿ ವೇದಶ್ರೀರಾಜ್ ಮಾತನಾಡಿದರು. ಉಪಾಧ್ಯಕ್ಷೆ ರೇಖಾ ಸ್ವಾಗತಿಸಿದರು.
ಸಮಿತಿ ರಚನೆ: ಇದೇ ಸಂದರ್ಭದಲ್ಲಿ ನೂತನ ಘಟಕ ಸಮಿತಿ ರಚಿಸಲಾಯಿತು. ವೇದ ಶಿವಕುಮಾರ್ ಅಧ್ಯಕ್ಷೆ, ನವೀನ್‌ಕುಮಾರ್ ಉಪಾಧ್ಯಕ್ಷ, ಸುಧಾ ರವಿಕುಮಾರ್ ಕಾರ್ಯದರ್ಶಿಯಾಗಿ, ಗಿರೀಶ್ ಸಹಕಾರ್ಯದರ್ಶಿ, ರಾಮೇಗೌಡ ಖಜಾಂಚಿ ಹಾಗೂ ಅರ್ಚನ ಹೇಮಂತ್, ಜ್ಯೋತಿ ರಾಮೇಗೌಡ, ಮೀನಾ ವಸಂತಕುಮಾರ್, ಚಂದ್ರಕಲ ರವಿರಾಜ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ನೂತನ ಕಾರ್ಯದರ್ಶಿ ಸುಧಾ ರವಿಕುಮಾರ್ ಘಟಕದ ಕ್ರಿಯಾ ಯೋಜನೆ ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.