ಹಾಸನ

ವಿಶ್ವದ ಬಹುತೇಕ ಭಾಷೆಗಳ ಮಾತೃ ಸಂಸ್ಕೃತ

Published On :

ಅರಕಲಗೂಡು: ಪಟ್ಟಣದಲ್ಲಿ ಹತ್ತು ದಿನ ನಡೆದ ಸಂಸ್ಕೃತ ಸಂಭಾಷಣ ಶಿಬಿರ ಸಮಾಪ್ತಿಗೊಂಡಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿಬಿರಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಿದರು.
ಬೆಂಗಳೂರಿನ ಸಂಸ್ಕೃತ ಭಾರತಿ, ಅರಕಲಗೂಡಿನ ಸಂಸ್ಕೃತ ವಾಗ್ವರ್ಧಿನಿ ಶಾಲೆ ಮತ್ತು ರಾಮನಾಥಪುರದ ಪಟ್ಟಾಭಿರಾಮ ಸಂಸ್ಕೃತ ಪಾಠಶಾಲೆಗಳ ಸಂಯುಕ್ತಾಶ್ರಯದಲ್ಲಿ ಶಿಬಿರ ಜರುಗಿತು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ನಿವೇದಿತಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅ.ರಾ.ಸುಬ್ಬರಾವ್ ಸಂಸ್ಕೃತ ಭಾರತೀಯರ ಸಾಂಸ್ಕೃತಿಕ ಭಾಷೆಯಾಗಿದೆ. ವಿಶ್ವದ ಬಹುತೇಕ ಎಲ್ಲ ಭಾಷೆಗಳ ಮಾತೃ ಭಾಷೆಯಾಗಿದೆ ಎಂಬುದು ಪಂಡಿತರ ಅಭಿಪ್ರಾಯ. ಬಹು ಪುರಾತನ ಸಂಸ್ಕೃತ ಭಾಷೆಯ ಪ್ರಭಾವ ಕನ್ನಡ ಸೇರಿದಂತೆ ಇತರ ಎಲ್ಲಾ ಭಾಷೆಗಳಲ್ಲೂ ಕಾಣಸಿಗುತ್ತದೆ. ಕನ್ನಡದ ರತ್ನತ್ರಯರು ಎನಿಸಿರುವ ಪಂಪ, ರನ್ನ ಮತ್ತು ಪೊನ್ನ ಇವರ ಸಾಹಿತ್ಯದ ಮೇಲೂ ಪ್ರಭಾವ ಬೀರಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ ಸಾಹಿತ್ಯದಲ್ಲೂ ಸಂಸ್ಕೃತ ಭಾಷೆಯ ಪ್ರಭಾವ ಕಾಣಬಹುದು ಎಂದರು. ಮಾತೃಭಾಷೆಯಾಗಿ ಕನ್ನಡ ಪ್ರೀತಿಸಿ, ಸಂಸ್ಕೃತ ಭಾಷೆಯನ್ನೂ ಕಲಿತು ಸುಸಂಸ್ಕೃತರಾಗುವ ನಿಟ್ಟಿನಲ್ಲಿ ಸಾಗೋಣ ಎಂದು ಹೇಳಿದರು.
 ಮುಖ್ಯ ಅತಿಥಿ ಪಟ್ಟಾಭಿರಾಮ ಸಂಸ್ಕೃತ ಪಾಠಶಾಲೆ ಕಾರ್ಯದರ್ಶಿ ಮ.ನ.ಶ್ರೀನಿವಾಸ್ ಮಾತನಾಡಿ ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮೂಲ. ಸಂಸ್ಕೃತ ಅಧ್ಯಾಪಕರು ಸಂಸ್ಕೃತವನ್ನು ಸರಳ ರೀತಿಯಲ್ಲಿ ಹೇಳುವಂತಾಗಬೇಕು ಎಂದರು.
ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಲಯ ಸಂಯೋಜಕ ವಿದ್ವಾನ್ ರಾಜಶೇಖರಮೂರ್ತಿ ಅವರು, ವಿಶ್ವದಲ್ಲಿ 6760 ಭಾಷೆಗಳಿವೆ. ಅವುಗಳಲ್ಲಿ 2296 ಭಾಷೆಗಳು ಚಾಲನೆಯಲ್ಲಿವೆ. ಈ ಎಲ್ಲಾ ಭಾಷೆಗಳೂ ಸಂಸ್ಕೃತ ಪ್ರಭಾವ ಹೊಂದಿವೆ. ಸಂಸೃತ ಸರಳವಾದ ಭಾಷೆಯಾಗಿದ್ದು, ಅದೊಂದು ಕ್ಲಿಷ್ಟಕರ ಭಾಷೆ ಎಂಬುದು ಕೇವಲ ಸೃಷ್ಟಿ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಮೈಸೂರಿನ ಸೀತಾರಾಮಭಟ್ ಮಾತನಾಡಿ ಇಂದು ವ್ಯಾವಹಾರಿಕ ಭಾಷೆಗಷ್ಟೇ ಒತ್ತು ನೀಡಲಾಗುತ್ತಿದೆ. ಪೋಷಕರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಾರಮಾರ್ಥ ವಿದ್ಯೆಯನ್ನು ಮಕ್ಕಳಿಗೆ ನೀಡುವಂತಾಗಬೇಕು ಎಂದು ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಪತ್ರ ಬರಹಗಾರ ರಾ.ಸು.ನಾಗರಾಜ್ ಮಾತನಾಡಿ ಸಂಸ್ಕೃತ ಅತ್ಯಂತ ಪುರಾತನವಾದುದು. ಸಂಸ್ಕೃತದಲ್ಲಿ ಇಲ್ಲದ ವಿಷಯವೆ ಇಲ್ಲ ಎಂದ ಅವರು ನಾಸಾದಂತಹ ಸಂಸ್ಥೆಗಳಲ್ಲಿ ಸಂಸ್ಕೃತ ಅರಿಯದವರನ್ನು ವಿಜ್ಞಾನಿಯಾಗಿ ಸ್ವೀಕರಿಸುವುದಿಲ್ಲ. ಇದು ಹೊರ ರಾಷ್ಟ್ರಗಳಲ್ಲಿ ಸಂಸ್ಕೃತಕ್ಕಿರುವ ಮಹತ್ವವನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.
ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಎಂ.ಎಸ್.ವಿಶ್ವನಾಥದೀಕ್ಷಿತ್, ಭುವನೇಶ್ವರಿ ಕಲಾ ಮತ್ತು ಸೇವಾ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ ಆನಂದರಾಮಶೆಟ್ಟಿ, ಕಂದಾಯ ಇಲಾಖೆ ಅಧಿಕಾರಿ ಬಸವರಾಜು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಉಮಾಶಂಕರ ಸ್ವಾಗತಿಸಿದರು. ವಾಗ್ವರ್ಧಿನಿ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥಶರ್ಮ ವಂದಿಸಿದರು. ಸಂಸ್ಕೃತ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.