ವಿಶ್ವಮಾನ್ಯವಾಗಲಿರುವ ಆಯುರ್ವೇದ: ಡಾ. ಸಾವ್ರೇಕರ್
ಹಾಸನ: ಅಲಕ್ಷ್ಯಕ್ಕೆ ಒಳಗಾಗಿದ್ದ ಆಯುರ್ವೇದ ವಿಜ್ಞಾನ ಇಂದು ವಿಶ್ವದಲ್ಲೆಡೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ರಸೌಷಧಿಗಳ ಗುಣಮಟ್ಟದ ಕುರಿತಾಗಿ ಕೆಲವೊಮ್ಮೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬರುತ್ತಿವೆ ಎಂದು ಉಸ್ಮನಾಬಾದ್ನ ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ಎಸ್.ಸಾವ್ರೇಕರ್ ಹೇಳಿದರು. ನಗರದ ಎಸ್ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದ ವತಿಯಿಂದ ನಡೆದ ಆಯುರ್ವೇದ ಔಷಧ ತಯಾರಿಕೆ ವಿಭಾಗದಲ್ಲಿರುವ ಅವಕಾಶಗಳು ಮತ್ತು ಸವಾಲು ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಶಾರಂಗಧರ-2013 ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಆಯುರ್ವೇದ ಯುವ ವೈದ್ಯರು ಉತ್ಕೃಷ್ಟ ಗುಣಮಟ್ಟದ ಔಷಧಿ ತಯಾರಿಕೆಯಲ್ಲಿ ತೊಡಗಬೇಕು. ಆಗ ಆಯುರ್ವೇದ ಔಷಧಿಗಳು ವಿಶ್ವಮಾನ್ಯ ಆಗುವಲ್ಲಿ ಸಂಶಯವೇ ಇಲ್ಲ ಎಂದರು.
ಉಡುಪಿ ಎಸ್ಡಿಎಂ ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ರಂಜನ್ ಉಪಾಧ್ಯಾಯ ಮಾತನಾಡಿ ಸಂಶೋಧನಾತ್ಮಕ ಕೆಲಸಗಳು ಇತ್ತೀಚೆಗೆ ಆಯುರ್ವೇದ ವಲಯದಲ್ಲಿ ಹೆಚ್ಚುತ್ತಿರುವುದು ಸ್ವಾಗತಾರ್ಹ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಮಾತನಾಡಿ, ಆಯುರ್ವೇದ ವೈದ್ಯರಿಗೆ ಸಾಕಷ್ಟು ಅವಕಾಶಗಳಿವೆ. ಆ ವಿಷಯದಲ್ಲಿ ಪರಿಣಿತಿ ಹೊಂದಿ ಅಂತಾರಾಷ್ಟ್ರೀಯ ಗುಣಮಟ್ಟದ ಔಷಧಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಮುಂಬೈನ ಧೂತ ಪಾಪೇಶ್ವರ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥ ಡಾ.ಶೈಲೇಶ್ ನಾಡಕರ್ಣಿ, ಬಿಜಾಪುರದ ಬಿಎಲ್ಡಿಈ ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಆರ್.ಎಸ್.ಸರಶೆಟ್ಟಿ, ಬೆಂಗಳೂರು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಪ್ರಾಧ್ಯಾಪಕಿ ಡಾ.ಶೋಭಾ ಹಿರೇಮಠ್ ಹಾಗೂ ರುಮೇನಿಯಾದ ಡಾ.ವಿಜಯೇಂದ್ರ ಚೌಹಾನ್ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯದ ನಾನಾ ಮೂಲೆಗಳಿಂದ ಬಂದು ಈ ಕಾರ್ಯಾಗಾರದ ಲಾಭ ಪಡೆದರು. ನುರಿತ ತಜ್ಞರಿಂದ ಔಷಧ ತಯಾರಿಕೆ ಕುರಿತಾದ ಅನೇಕ ಉಪಯುಕ್ತ ಮಾಹಿತಿ ಕುರಿತು ಸಂವಾದ ನಡೆಯಿತು. ಸಂಘಟನಾ ಕಾರ್ಯದರ್ಶಿ ಡಾ.ಬಸವರಾಜ ಘಂಟಿ ಸ್ವಾಗತಿಸಿದರು. ಡಾ.ರವೀಂದ್ರ ಅಂಗಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

