ಹಾಸನ

ಕಳಪೆ ಗುಣಮಟ್ಟದ ಔಷಧ ಮಾರಾಟ: ತಾಪಂ ಸಭೆಯಲ್ಲಿ ಸದಸ್ಯರ ಆರೋಪ

Published On :

ಕ.ಪ್ರ.ವಾರ್ತೆ   ಬೇಲೂರು   ಸೆ.4
ತಾಲೂಕಿನ ಬಹುತೇಕ ಔಷಧಿ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಔಷಧಿಗಳನ್ನು ರೋಗಿಗಳಿಗೆ ನೀಡುತ್ತಿದ್ದರೂ ತಾಲೂಕು ಆರೋಗ್ಯ ಇಲಾಖೆ ಹಾಗೂ ವೈದ್ಯಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದು, ಜನರ ಪ್ರಾಣದೊಡನೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯ ರವಿಕುಮಾರ್ ಆರೋಪಿಸಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಿತ್ರರುದ್ರಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಬೇಲೂರು, ಹಳೇಬೀಡು ಹಾಗೂ ಇತರೇ ಗ್ರಾಮಗಳಲ್ಲಿ ಖಾಸಗಿಯವರು ಔಷಧಿ ಅಂಗಡಿಗಳನ್ನು ನಡೆಸುತ್ತಿದ್ದು ಈ ಅಂಗಡಿಗಳಲ್ಲಿ ಅರ್ಹತೆ ಹೊಂದಿರುವವರಿಲ್ಲ. ಅಲ್ಲದೆ ಒಂದು ಔಷದಿ ಅಂಗಡಿಗೆ ಪರವಾನಿಗೆ ಪಡೆದು ಎರಡು ಮೂರು ಅಂಗಡಿಗಳನ್ನು ತೆರೆದಿದ್ದಾರೆ. ಇಲ್ಲಿ 10 ನೇ ತರಗತಿ ಪಾಸು ಮಾಡಿದವರು ತಮಗೆ ಇಷ್ಟ ಬಂದ ಔಷಧಿ ನೀಡಿ ಜನರ ಪ್ರಾಣದೊಡನೆ ಆಟವಾಡುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿ ಜಾಣ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಔಷಧಿ ಅಂಗಡಿಗಳಲ್ಲಿ ಶೇ40ರಷ್ಟು ಕಳಪೆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ, ಇಲಾಖೆ ನಿಯಂತ್ರಣ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯ ಹಲವು ಅಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಕಾಳಾಜಿ ಇಲ್ಲದಿರುವುದು ಎಂದು ಕಾಣುತ್ತಿದ್ದು ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದಾಗ ಇವರ ಮಾತಿಗೆ ಇತರ ಸದಸ್ಯರಾದ ಧನಂಜಯ, ಸೋಮಣ್ಣ,ನಳಿನಶಿವಕುಮಾರ್, ಪವಿತ್ರ  ಆರೋಗ್ಯ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಸಂಧ್ಯಾ ತಾಲೂಕಿನ ಗಂಗೂರು, ಹಳೇಬೀಡು,ಕೆಸಗೋಡು,ನಾಗೇನಹಳ್ಳಿ, ಚಟಚಟಿಹಳ್ಳಿ, ಎಂ.ಎಂ.ಕೊಪ್ಪ ಅಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರಿಲ್ಲ. ಈ ಬಗ್ಗೆ ಇಲಾಖೆಗೆ ಪತ್ರ ಬರೆಯಲಾಗಿದ್ದು, ವೈದ್ಯರೂ ಇನ್ನೂ ಬಂದಿಲ್ಲ ಎಂದು ಉತ್ತರಿಸಿದರು. ಇದ್ದಕ್ಕೆ ಸದಸ್ಯರು ಅತೃಪ್ತಗೊಂಡು ಕೂಡಲೇ ವೈದ್ಯರನ್ನು ನಿಯೋಜಿಸಲು ಕ್ರಮಕೈಗೊಳ್ಳುವಂತೆ ಅಗ್ರಹಿಸಿದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆ ಉಂಟಾಗಿದ್ದು, ನೀರನ ಸಮಸ್ಯೆ ನಿವಾರಿಸಲು ಕ್ರಮಕ್ಕೆ ಮುಂದಾಗಬೇಕು ಎಂದು ಸದಸ್ಯರು ಕಾರ್ಯನಿರ್ವಾಹಣಾಧಿಕಾರಿಗಳಿಗೆ ತಿಳಿಸಿದರು.
ಕಾರ್ಯನಿರ್ವಾಹಣಾಧಿಕಾರಿ ಶಿವಪ್ಪ ಮಾತನಾಡಿ ಕುಡಿಯುವ ನೀರಿಗೆ ಯಾವುದೆ ತೊಂದರೆಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿ, ಗ್ರಾಮೀಣ ಭಾಗದಲ್ಲಿ ನೀರಿಗೆ ತೊಂದರೆಯಾದರೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.
ಕಾಫಿ ಬೆಳೆಗಾರರಿಗೆ ಅವಶ್ಯಕವಾಗಿ ಬೇಕಾಗುವ ಮೈಲು ತುತ್ತವನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ನಿಯಂತ್ರಿಸಲು ತೋಟಗಾರಿಗೆ ಇಲಾಖೆ ಮುಂದಾಗ ಬೇಕು ಎಂದು ಸದಸ್ಯ ಜೆ.ಸಿ.ಮೋಹನ್ಕುಮಾರ್ ಅಧಿಕಾರಿಗಳಿಗೆ ಹೇಳಿದರು.
ಸರ್ಕಾರದ ಕಾರ್ಯಕ್ರಮಗಳಿಗೆ ತಾಲೂಕು ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆ ಅವಮಾನ ಮಾಡಲಾಗುತ್ತಿದೆ ಎಂದು ಸದಸ್ಯೆ ಪೂರ್ಣಿಮಾ ತೀವ್ರವಾಗಿ ಖಂಡಿಸಿದರು.
ಹಳೇಬೀಡು ದೇವಾಲಯ ಮುಂಭಾಗ ಹಾಗೂ ಫುಟ್ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು  ಗ್ರಾಮ ಪಂಚಾಯ್ತಿ ಹಿಂದೇಟು ಹಾಕುತ್ತಿದ್ದು ಪ್ರವಾಸಿಗರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಸ್ವಚ್ಚತೆಯನ್ನ ಗಮನಹರಿಸಿ ಕೂಡಲೆ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗುವಂತೆ ಅಧಿಕಾರಿಗಳನ್ನು ಸದಸ್ಯ ಸೋಮಣ್ಣ ತರಾಟೆಗೆ ತೆಗೆದುಕೊಂಡರು.
ಬೇಲೂರು ಪಟ್ಟಣದಲ್ಲಿ ಸಾಮಿಲ್ಗಳಿಂದ ಪರಿಸರ ಹಾಳಾಗುತ್ತಿದ್ದು, ಜತೆಗೆ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಮೊದಲು ಸಾಮಿಲ್ಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ ಎಂದು ಸದಸ್ಯ ಪರ್ವತಯ್ಯ ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಕಮಲಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.