ಹಾಸನ

ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಹಮಾಲಿಗಳ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಬೇಲೂರು   ಸೆ.4
ಕೂಲಿ ಹೆಚ್ಚು ಮಾಡುವಂತೆ ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲಿಗಳ ಸಂಘದವರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಲಿಗಳ ಪ್ರತಿಭಟನೆ ವರ್ತಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲಿಗಳ ಸಂಘವರು ಮೂಟೆ ಹೊರಲು ನೀಡುವ ಕೂಲಿ ಹೆಚ್ಚಳ ಮಾಡುವಂತೆ ಮಾರುಕಟ್ಟೆ ಸಮಿತಿ ವರ್ತಕರನ್ನು ಒತ್ತಾಯಿಸಿ ಕಳೆದ 2 ದಿನಗಳಿಂದ ಲಾರಿಗೆ ಲೋಡ್ ಮಾಡದೆ ಮುಷ್ಕರ ನಡೆಸುತ್ತಿದ್ದಾರೆ. 130 ಕ್ಕೂ ಹೆಚ್ಚು ಎಪಿಎಂಸಿ ಹಮಾಲಿಗಳಿದ್ದು, ಸಂಘಟನೆ ಹಾಗೂ ರಕ್ಷಣೆಗೆ ಇತ್ತೀಚೆಗೆ ಹಮಾಲಿಗಳ ಸಂಘ ಮಾಡಿಕೊಂಡಿದ್ದು ಇದರ ಮುಖೇನ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.
ಸೋಮವಾರದಿಂದ ಆರಂಭಿಸಿರುವ ಮುಷ್ಕರಕ್ಕೆ ಪಟ್ಟಣ ಲಾರಿ ಲೋಡರ್ಸ್ ಸಂಘ, ತಾಲೂಕು ರೈತ ಸಂಘ ಸಾಥ್ ನೀಡಿದೆ. ಲಾರಿಗೆ ಲೋಡ್ ಮಾಡಲು ಹಮಾಲಿಗಳು ನಿರಾಕರಿಸುತ್ತಿರುವುದರಿಂದ ವರ್ತಕರು ಪರದಾಡುವಂತಾಗಿದೆ.
ಹಮಾಲಿಗಳು ದುಪ್ಪಟ್ಟು ಕೂಲಿ ಕೇಳಿ ಮುಷ್ಕರ ನಡೆಸುತ್ತಿದ್ದಾರೆ ಎಂದು ವರ್ತಕರು ದೂರುತ್ತಾರೆ. ಆದರೆ ಇದನ್ನು ಒಪ್ಪದ ಹಮಾಲಿಗಳು ತಾವು ಕಳೆದ 2 ತಿಂಗಳಿಂದ ಹೆಚ್ಚಿನ ಕೂಲಿಗೆ ಒತ್ತಾಯಿಸುತ್ತಾ ಬಂದಿದ್ದರೂ ಮಾಲೀಕರು ಕಿವಿಗೆ ಹಾಕಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ತಕರ ಸಂಘದ ಜಗದೀಶ್, ಮುಕ್ತಿಯಾರ್, ಶ್ರೀನಿವಾಸ್ ಪತ್ರಿಕೆಯೊಂದಿಗೆ ಮಾತನಾಡಿ,  ಹಾಸನ, ಅರಸೀಕೆರೆ, ಚಿಕ್ಕಮಗಳೂರು, ಕೆ.ಆರ್.ನಗರದಲ್ಲಿ ಹಮಾಲಿಗಳಿಗೆ ನೀಡುವ ಕೂಲಿಯನ್ನೇ ನಾವು ನೀಡುತ್ತಿದ್ದೇವೆ. ಅಲ್ಲದೆ ಬೇರೆಡೆ 1300 ರು. ಕೂಲಿ ಇದ್ದರೆ ಇಲ್ಲಿ 1500 ರು. ಕೊಡುತ್ತಿದ್ದೇವೆ. ಸರ್ಕಾರದ ಲೇಬರ್ ಆಕ್ಟ್ನಂತೆ ಒಂದು ಮೂಟೆಗೆ 3 ರು. ಅಂತ ಇದೆ, ಆದರೆ. ನಾವು 1 ಮೂಟೆಗೆ 15 ರು. ನೀಡುತ್ತಿದ್ದೇವೆ. ಅಲ್ಲದೆ ಊಟ ತಿಂಡಿ ಅಂತ ಹೆಚ್ಚುವರಿಯಾಗಿ 100 200 ಕೊಡುತ್ತೇವೆ. ಇಷ್ಟಾದರೂ  ಲಾರಿ ಲೋಡ್ಗೆ 3 ಸಾವಿರ ರು. ನೀಡುವಂತೆ ಮುಷ್ಕರ ಆರಂಭಿಸಿದ್ದಾರೆ. ಹಮಾಲಿಗಳನ್ನು ಚರ್ಚೆಗೆ ಕರೆದಿದ್ದೇವೆ, ಒಂದು ವೇಳೆ ನಮ್ಮ ಮಾತಿಗೆ ಮನ್ನಣೆ ನೀಡದಿದ್ದಲ್ಲಿ ಬೇರೆಡೆಯಿಂದ ಹಮಾಲಿಗಳನ್ನು ಕರೆತಂದು ಲಾರಿಗೆ ಲೋಡ್ ಮಾಡಿಸುತ್ತೇವೆ ಎನ್ನುತ್ತಾರೆ.     
ಮುಷ್ಕರ ನಿರಂತರ:  ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ಸೇರಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳ ಸಂಘದ ಸದಸ್ಯರು, ವರ್ತಕರು ತಮ್ಮ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಹಮಾಲಿಗಳು ಪಟ್ಟು ಹಿಡಿದಿದ್ದಾರೆ.
ತಾಲೂಕು ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ,  ಕಳೆದ 30 ವರ್ಷದಿಂದ ಹಮಾಲಿಗಳು ಕೂಲಿ ಮಾಡುತ್ತಿದ್ದಾರೆ. ವರ್ತಕರು  ಶ್ರೀಮಂತರಾಗುತ್ತಲೇ ಬಂದಿದ್ದಾರೆ. ಆದರೆ ಇವತ್ತು ಹಮಾಲಿಗಳು ತಮ್ಮ ಹೊಟ್ಟೆ ಪಾಡಿನ ಬೇಡಿಕೆಗೆ ಮುಷ್ಕರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇರೆಡೆಯಿಂದ ಹಮಾಲಿಗಳನ್ನು ಕರೆತರುವುದಾಗಿ ವರ್ತಕರು ಹೇಳುತ್ತಿರುವುದು ಯಾವ ನ್ಯಾಯ ಎಂದು ಹೇಳುತ್ತಾರೆ.
ಹಾಸನದ ಎಪಿಎಂಸಿಗೆ ರೈತರು ನೇರವಾಗಿ ತಂದು ಮಾರಾಟ ಮಾಡುತ್ತಿದ್ದು ಅದನ್ನು ನಂತರ ಗೋದಾಮಿಗೆ ಸಾಗಿಸಲಾಗುತ್ತದೆ. ದಿನಕ್ಕೆ ಕನಿಷ್ಟ 5 ಲಾರಿ ಲೋಡ್ ಮಾಡುವುದರಿಂದ ಹಮಾಲಿಗಳಿಗೆ ಹೆಚ್ಚಿನ ಕೂಲಿ ದೊರಕುತ್ತದೆ. ಆದರೆ ಇಲ್ಲಿನ  ವರ್ತಕರು ಲಾರಿ ಲೋಡ್ ಮಾಡಲು ಹಳ್ಳಿಗಳಿಗೆ ತೆರಳುವುದರಿಂದ ಬೆಳಗಿನಿಂದ ರಾತ್ರಿ ವರೆಗೆ ಒಂದು ಲಾರಿ ಲೋಡ್ ಮಾಡುವುದರಲ್ಲೇ ಸಮಯ ಕಳೆದುಹೋಗುತ್ತದೆ ಎಂಬುದು ವರ್ತಕರಿಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸುತ್ತಾರೆ.
ಎಪಿಎಂಸಿ ಹಮಾಲಿಗಳ ಸಂಘದ ಅಧ್ಯಕ್ಷ ವಾಜಿದ್ ಮಾತನಾಡಿ, ಹಲವಾರು ವರ್ಷದಿಂದ ಹಮಾಲಿಗಳಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಲಾರಿ ಲೋಡ್ಗೆ 1400 ರು. ಮಾತ್ರ ನೀಡುತ್ತಾ ಬಂದಿದ್ದಾರೆ. 1 ಲಾರಿಗೆ ಲೋಡ್ ಮಾಡಲು ಐವರು ಹಮಾಲಿಗಳಿದ್ದು  ಬೆಳಗಿನಿಂದ ರಾತ್ರಿವರೆಗೆ  ದುಡಿದರೂ ಕೇವಲ 250 ರು. ಸಿಗುತ್ತದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಲಾರಿ ಲೋಡ್ಗೆ 3 ಸಾವಿರ  ನಿಗದಿ ಮಾಡುವಂತೆ ವರ್ತಕರಲ್ಲಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿ ತಿರಸ್ಕರಿಸಿದ ವರ್ತಕರು 1800 ರು. ಮಾತ್ರ ನೀಡುವುದಾಗಿ ಹೇಳುತ್ತಾರೆ. ಹಾಗಾಗಿ ಮುಷ್ಕರ ಆರಂಭಸಿದ್ದು ಒಂದುವೇಳೆ ಬೇರೆಡೆಯಿಂದ ಹಮಾಲಿಗಳನ್ನು ಕರೆ ತಂದರೆ ನಾವು ಲಾರಿ ಲೋಡ್ಗೆ ಅಡ್ಡಿ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರ್ತಕರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಡಿ ಚಂದ್ರೇಗೌಡರು ಪುರಸಭೆ ಅಧ್ಯಕ್ಷ ಚುನಾವಣೆ ನಿಮಿತ್ತ ಸಂಧಾನ ಸಭೆಯನ್ನು ಸೆ.6 ಕ್ಕೆ ಸಭೆ ನಿಗದಿ ಪಡಿಸಲಾಗಿದೆ. ಪ್ರಯುಕ್ತ ಅಲ್ಲಿವರೆಗೆ ಲಾರಿಗೆ ಲೋಡ್ ಮಾಡದಿರುವಂತೆ ಹಮಾಲಿಗಳ ಸಂಘದವರು ನಿರ್ಣಯ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.