ಬಸ್ ಡಿಪೋದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ
ಅರಸೀಕೆರೆ: ಶ್ರಾವಣ ಮಾಸದ ನಿಮಿತ್ತ ರಾಜ್ಯ ಸಾರಿಗೆ ಸಂಸ್ಥೆ ಇಲಾಖೆಯ ನೌಕರರು ಪಟ್ಟಣದ ಸಾರಿಗೆ ಸಂಸ್ಥೆ ಡಿಪೋ ಆವರಣದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ವಿಘ್ನ ನಿವಾರಕನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಮುಂಜಾನೆ ವಿಘ್ನೇಶ್ವರನಿಗೆ ನಾನಾ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ನಾನಾ ಪೂಜಾ ಕೈಂಕರ್ಯಗಳು ನಡೆದವು.ವಿಶೇಷ ಪೂಜೆ ಅಂಗವಾಗಿ ಗಣಪತಿಗೆ ಮಾಡಲಾಗಿದ್ದ ದ್ರಾಕ್ಷಿ ಮತ್ತು ಪುಷ್ಪಾಲಂಕಾರ ಭಕ್ತರ ಕಣ್ಮನ ಸೆಳೆಯಿತು.ಮಹಾಮಂಗಳಾರತಿ ವೇಳೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಒಳಗೊಂಡಂತೆ ಸಂಘಸಂಸ್ಥೆಯ ಪದಾಧಿಕಾರಿಗಳು ಇದ್ದರು. ಡಿಪೋ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ರೈತ ಕುಟುಂಬಕ್ಕೆ 50 ಸಾವಿರ ರು. ವಿಮೆ ಹಣ
ಹೊಳೆನರಸೀಪುರ: ದನಗಳಿಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದ ತಾಲೂಕಿನ ಕೃಷ್ಣಾಪುರ ಕೊಪ್ಪಲು ಗ್ರಾಮದ ಸಾವಿತ್ರಿ ಎಂಬಾಕೆಯ ಕುಟುಂಬಕ್ಕೆ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ರೈತ ಸಂಜೀವಿನಿ ಯೋಜನೆಯಡಿಯಲ್ಲಿ 50 ಸಾವಿರ ರು. ವಿಮಾ ಪರಿಹಾರ ಮಂಜೂರಾಗಿದೆ. ಈ ಪರಿಹಾರದ ಚೆಕ್ನ್ನು ಸಾವಿತ್ರಿ ಕುಟುಂಬಕ್ಕೆ ಶಾಸಕ ಎಚ್.ಡಿ.ರೇವಣ್ಣ ವಿತರಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಿ.ಮಹೇಶ್, ವರ್ತಕ ಶ್ರೀಧರ್ ಇದ್ದರು.
ಕೈಕೊಟ್ಟ ಎಂಜಿನಿಯರ್; ಯುವತಿ ಆತ್ಮಹತ್ಯೆ
ಕಿಕ್ಕೇರಿ: ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯತಮನಿಂದ ನೊಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಸಮೀಪದ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ಗ್ರಾಮದ ರಾಜಪ್ಪ ಎಂಬವರ ಮಗಳಾದ ಶೃತಿ(22) ಸಾವಿಗೀಡಾದ ಯುವತಿ. ಶೃತಿ ಬೆಂಗಳೂರಿನಲ್ಲಿ ಐಸಿಡಬ್ಲ್ಯೂ ಓದುವಾಗ ತೇಜೋಮೂರ್ತಿ ಎಂಬ ಎಂಜಿನಿಯರ್ ಯುವಕನ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು.
ಆದರೆ, ತೇಜೋಮೂರ್ತಿಯು ಹಾಸನದ ಬೇರೆ ಹುಡುಗಿಯೊಬ್ಬಳನ್ನು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಶೃತಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ತನ್ನ ಸಾವಿಗೆ ತೇಜೋಮೂರ್ತಿ, ಅವರ ಕುಟುಂಬದವರು ಹಾಗೂ ನಿಶ್ಚಿತಾರ್ಥ ್ಥಮಾಡಿಕೊಂಡಿರುವ ಹುಡುಗಿ, ಅವರ ಮನೆಯವರು ಕಾರಣವೆಂದು ಡೆತ್ನೋಟ್ ಬರೆದಿಟ್ಟಿದ್ದಾಳೆ.ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಡಿಲು ಬಡಿದು ವ್ಯಕ್ತಿಗೆ ಗಾಯ
ಹಾಸನ: ಸಿಡಿಲು ಬಡಿದು ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಅರಕಲಗೂಡು ತಾಲೂಕು ಅಲ್ಲಾಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕೃಷ್ಣಯ್ಯ (55) ಎಂಬುವರು ಗಾಯಗೊಂಡು ಹಾಸನ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ಹೋಗುವಾಗ ಸಿಡಿಲು ಬಡಿದಿದೆ.
ಬಾಲಕ ಸಾವು
ಹಾಸನ ತಾ. ಮುಕ್ಕಂದೂರು ಗ್ರಾಮದ ಬಳಿ ಹರಿಯುವ ಹೇಮಾವತಿ ಎಡದಂಡೆ ನಾಲೆಗೆ ವಿನಯ್ (6) ಎಂಬ ಬಾಲಕ ಆಕಸ್ಮಿಕವಾಗಿ ಬಿದ್ದು ಶುಕ್ರವಾರ ಮೃತಪಟ್ಟಿದ್ದಾನೆ. ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

