ಇಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಹಾಸನ: ರಾಜ್ಯ ಲೋಕೋಪಯೋಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸೆ 11ರಂದು ಬೆಳಗ್ಗೆ 10 ಕ್ಕೆ ಹಾಸನಕ್ಕೆ ಆಗಮಿಸುವರು.
ಬೆಳಗ್ಗೆ 11 ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ನಡೆಯುವ ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆ.ಡಿ.ಪಿ.) ಭಾಗವಹಿಸುವರು. ನಂತರ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸುವ ಸಚಿವರು ಸಂಜೆ 5 ಕ್ಕೆ ಮೈಸೂರಿಗೆ ತೆರಳುವರು.
ಕೆಡಿಪಿ ಸಭೆ: ಉಸ್ತುವಾರಿ ಸಚಿವ ಡಾ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸೆ. 11 ರಂದು ಬೆಳಗ್ಗೆ 11 ಕ್ಕೆ ಮೊದಲನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.)ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಬಸವನ ಹುಳುವಿನ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ
ಹಾಸನ: ಇತ್ತೀಚಿನ ದಿನಗಳಲ್ಲಿ ಆಫ್ರಿಕಾದ ಬಸವನ ಹುಳುವಿನ ಹಾವಳಿ ತರಕಾರಿ ಬೆಳೆಗಳು, ಅರಿಶಿಣ, ಪಪ್ಪಾಯಿ, ಕಬ್ಬು ಮತ್ತು ಅಲಂಕಾರ ಸಸ್ಯಗಳಲ್ಲಿ ಕಂಡು ಬರುತ್ತಿದೆ. ಈಗ ಹಿಪ್ಪುನೇರಳೆ ಬೆಳೆಗಳಲ್ಲಿ ಹರಡಿ ರುವುದು ಕಂಡು ಬಂದಿದೆ ಎಂದು ಜಿಲ್ಲಾ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಶಿವನಾಗೇಂದ್ರ ಬಾಬು ತಿಳಿಸಿದರು.
ಕಂದಲಿ ಕೃಷಿ ಕಾಲೇಜಿನಲ್ಲಿ ಆಯೋಜಿಸಿದ್ದ ಹಿಪ್ಪುನೇರಳೆ ಬೆಳೆಯಲ್ಲಿ ಬಸವನ ಹುಳುವಿನ ನಿರ್ವಹಣೆ ಬಗ್ಗೆ ಒಳಾವರಣ ತರಬೇತಿ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ.ಎಸ್. ಬಸವರಾಜು ತಾಂತ್ರಿಕ ಮಾಹಿತಿ ನೀಡುತ್ತಾ ಬಸವನ ಹುಳುವು ದ್ವಿಲಿಂಗವನ್ನು ಹೊಂದಿದ್ದರೂ ಒಂದು ಹುಳು ಇನ್ನೊಂದು ಹುಳುವಿನೊಂದಿಗೆ ತಲೆಕೆಳಗಾಗಿ ಅಂಟಿಕೊಂಡು ಸಂಯೋಗ ಹೊಂದುತ್ತದೆ. ನಂತರ ಆ ಎರಡೂ ಹುಳುಗಳು ಗರ್ಭಧರಿಸಿ ಮೊಟ್ಟೆ ಇಡುತ್ತವೆ ಎಂದು ವಿವರಿಸಿದರು.
ಈ ಹುಳುಗಳು 3 ರಿಂದ 5 ವರ್ಷ ಕಾಲ ಜೀವಿಸಬಲ್ಲವು. ಪ್ರತಿ ಹುಳುವು ತನ್ನ ಜೀವಿತ ಅವಧಿಯಲ್ಲಿ 800 ರಿಂದ 1200 ಮೊಟ್ಟೆಗಳನ್ನು ಹಸಿಯಾದ ಮಣ್ಣಿನಲ್ಲಿ 12.5 ಸೆಂ.ಮೀ. ಅಗಲ ಮತ್ತು 31.5 ಸೆಂ. ಮೀ. ಆಳದವರೆಗೆ ಗೂಡನ್ನು ಮಾಡಿ ಮೊಟ್ಟೆ ಇಡುತ್ತವೆ.
ಮೊಟ್ಟೆಗಳಿಂದ ಮರಿಗಳು ಒಂದರಿಂದ ಎರಡು ವಾರಗಳಲ್ಲಿ ಹೊರ ಬರುತ್ತವೆ. ಮಳೆಗಾಲದಲ್ಲಿ ಕೇವಲ ಓಂದು ವಾರದಲ್ಲಿಯೇ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. 10 ರಿಂದ 12 ತಿಂಗಳುಗಳಲ್ಲಿ ಪ್ರೌಢವಸ್ಥೆಯನ್ನು ತಲುಪುತ್ತವೆ ಎಂದು ವಿವರಿಸಿದರು.
ಹುಳುವಿನ ಚಟುವಟಿಕೆ ಮಳೆ ಬಿದ್ದ ನಂತರ ಆರಂಭವಾಗಿ ಚಳಿಗಾಲದವರೆಗೂ ಇದ್ದು, ಬೇಸಿಗೆಯಲ್ಲಿ ನಿದ್ರಾವಸ್ಥೆಗೆ ಹೋಗುತ್ತವೆ. ಹುಳುಗಳ ಚಟುವಟಿಕೆ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 1 ರಿಂದ 2 ಗಂಟೆಯವರೆಗೆ ಇರುತ್ತವೆ. ನಂತರ ಯಥಾಪ್ರಕಾರ ಬೆಳಗಾಗುವುದರೊಳಗೆ ಈ ಹುಳುಗಳು ಅಡಗು ತಾಣಗಳಲ್ಲಿ ಅಡಗಿಕೊಳ್ಳುತ್ತವೆ ಎಂದರು.
ಹತೋಟಿ ಕ್ರಮವಾಗಿ ರೈತರು ಸಾಮೂಹಿಕವಾಗಿ ಹೊಲದಲ್ಲಿ ಪೆಟ್ರೋಮ್ಯಾಕ್ಸ್ ದೀಪ ಅಥವಾ ಟಾರ್ಚ್ ದೀಪದ ಸಹಾಯದಿಂದ ಸಂಜೆ 7 ರಿಂದ ರಾತ್ರಿ 12 ರವರೆಗೆ ಗುಂಪಾಗಿರುವ ಮರಿಹುಳು ಬೆಳೆದ ಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು. ಬಾಧೆ ಅತಿಯಾದಾಗ ಮಿಥೊಯಲ್ ವಿಷ ಆಹಾರ ಬೆಳೆಗಳ ಬದುಗಳ ಸುತ್ತಲೂ ಉದುರಿಸಲು ಸಲಹೆ ನೀಡಿದರು.
ಇಂದು ವಿದ್ಯುತ್ ವ್ಯತ್ಯಯ
ಹಾಸನ: ರಾಮೇಶ್ವರನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ.11 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಎರಡನೇ ತ್ರೈಮಾಸಿಕ ನಿರ್ವಹಣಾ ಕೆಲಸ ಮಾಡಬೇಕಾಗಿರುವುದರಿಂದ ಸತ್ಯಮಂಗಲ, ದೊಡ್ಡಪುರ, ಭೂವನಹಳ್ಳಿ, ಕೆ.ಆರ್,ಪುರಂ, ಬಿ.ಎಂ ರಸ್ತೆ, ಉದಯಗಿರಿ, ಶಂಕರಿಪುರಂ, ಆಡುವಳ್ಳಿ, ರೈಲ್ವೇ ನಿಲ್ದಾಣ, ಆರ್.ಟಿ.ಓ ಕಚೇರಿ ಪ್ರದೇಶ, ರಾಜಘಟ್ಟ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

