ಶಾಲೆ ಮುಂದೆ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್
ಕನ್ನಡಪ್ರಭ ವಾರ್ತೆ, ಆಲೂರು, ಸೆ.11
ತಾಲೂಕಿನ ಪಾಳ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಮಂಗಳವಾರ ರಾತ್ರಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದ ಘಟನೆ ನಡೆದಿದೆ.
ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಟ್ಯಾಂಕರ್ಗೆ, ಸಕಲೇಶಪುರದ ಕಡೆಗೆ ತೆರಳುತ್ತಿದ್ದ ಕಾರೊಂದು ಅಡ್ಡಬಂದ ಪರಿಣಾಮ ಕಾರಿಗೆ ಗುದ್ದುವುದನ್ನು ತಪ್ಪಿಸಲು ಟ್ಯಾಂಕರ್ ಚಾಲಕ ಪ್ರಯತ್ನಿಸಿದ್ದು ಹತೋಟಿ ತಪ್ಪಿದ ಟ್ಯಾಂಕರ್ ಮಗುಚಿ ಬಿದ್ದಿದೆ.
ಹೀಗೆ ಮಗುಚಿ ಬಿದ್ದ ನಂತರ ಸುಮಾರು 25 ಅಡಿ ದೂರಕ್ಕೆ ಉಜ್ಜಿಕೊಂಡು ಹೋಗಿ ಪ್ರಾಥಮಿಕ ಶಾಲೆಯ ಕಾಂಪೌಂಡ್ಗೆ ಬಡಿದಿದ್ದು ಶಾಲೆಯ ಕಾಂಪೌಂಡ್ ಹಾನಿಗೊಳಗಾಗಿದೆ. ಅಕಸ್ಮಾತ್ ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೇನಾದರೂ ಲಾರಿ ಗುದ್ದಿದ್ದರೆ ಭಾರಿ ಅನಾಹುತಗಳಾಗುವ ಸಾಧ್ಯತೆಯಿತ್ತು.
ತುಂಡಾದ ರೆಗ್ಯುಲೇಟರ್: ಟ್ಯಾಂಕರ್ ಬಿದ್ದ ರಭಸಕ್ಕೆ ಟ್ಯಾಂಕರ್ನ ಗ್ಯಾಸ್ ಅಳವಡಿಕೆಯ ರೆಗ್ಯುಲೇಟರ್ವೊಂದು ತುಂಡಾಗಿದ್ದು, ಗ್ಯಾಸ್ ಸೋರಿಕೆಯ ಭಯಭೀತರಾದ ಗ್ರಾಮಸ್ಥರು ಮನೆಗಳಿಂದ ಜಾಗ ಖಾಲಿ ಮಾಡಿ ಬೇರೆಡೆ ಆಶ್ರಯ ಪಡೆದಿದ್ದರು. ಅಪಘಾತ ಸಂಭವಿಸಿದ ಸ್ಥಳದ ಎದುರಿನಲ್ಲೇ ಸರ್ಕಾರಿ ಆಸ್ಪತ್ರೆಯಿದ್ದು, ರೋಗಿಗಳನ್ನು ಮುಂಜಾಗ್ರತಾ ಕ್ರಮವಾಗಿ ಆಲೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟ್ಯಾಂಕರ್ನಲ್ಲಿರುವ ಗ್ಯಾಸ್ ಡಂಪ್ ಮಾಡುವ ವಾಹನ ಹಾಗೂ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ. ಟ್ಯಾಂಕರ್ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಅಪಘಾತ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಗ್ರಾಮದಲ್ಲೇ ತಂಗಿದ್ದು, ಹಾಸನದಿಂದ ಬರುವ ವಾಹನಗಳಿಗೆ ಬೈರಾಪುರ ಗಾಮದಿಂದ ಮಗ್ಗೆ ಮೂಲಕ ಹೋಗಲು ಅವಕಾಶ ಕಲ್ಪಿಸಿದ್ದು, ಸಕಲೇಶಪುರದಿಂದ ಬರುವ ವಾಹನಗಳಿಗೆ ಅರೇಹಳ್ಳಿ, ಬಿಕ್ಕೋಡು ಮೂಲಕ ಬೇಲೂರು ಮಾರ್ಗವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ತೆರವು ಕಾರ್ಯ ಚಾಲನೆಯಲ್ಲಿದೆ. ಟ್ಯಾಂಕರ್ ಚಾಲಕ ಗುರು ಕಾರ್ತಿಕ್ ಹಾಗೂ ಕ್ಲೀನರ್ ಮೈಕಲ್ರಾಜ್ಗೆ ಪೆಟ್ಟಾಗಿದ್ದು, ಆಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ತೆರವು ಕಾರ್ಯ ಪ್ರಗತಿಯಲ್ಲಿರುವುದರಿಂದ ಶಾಲೆಗೆ ರಜೆ ನೀಡಲಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ವಾಹನ ಸಂಚಾರ ಸ್ಥಗಿತಗೊಂಡಿರುವ ಕಾರಣ ತೀವ್ರ ತೊಂದರೆ ಅನುಭವಿಸಿದ್ದು, ಮನೆಯಲ್ಲಿಯೇ ಉಳಿಯಬೇಕಾಗಿದೆ. ಅನಿಲ ವರ್ಗಾವಣೆ ಕಾರ್ಯ ಬುಧವಾರ ಸಂಜೆಯವರೆಗೂ ನಡೆಯುವ ಸಾಧ್ಯತೆಯಿದ್ದು, ನಂತರವಷ್ಟೇ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳಬಹುದಾಗಿದೆ.
ಕಾರ್ಯಾಚರಣೆ ಕೇಂದ್ರ ತೆರೆಯಲಿ: ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಪತ್ರಿಕೆಯೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ರೀತಿಯ ದುರ್ಘಟನೆಗಳು ಹಲವಾರು ಬಾರಿ ಸಂಭವಿಸಿದ್ದು, ಅನಿಲ ಸೋರಿಕೆಯಾದಾಗ ತಜ್ಞರು ಸೂಕ್ತ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುವಂತಾಗಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯುಂಟಾಗುತ್ತದೆ.
ಅನಿಲ ಸೋರಿಕೆಯ ಸಂದರ್ಭದಲ್ಲಿ ಟ್ಯಾಂಕರ್ ಸ್ಫೋಟದಂತಹ ತೀವ್ರ ತೆರನಾದ ಅನಾಹುತಗಳಾದರೆ ಯಾರು ಹೊಣೆ ಎಂದ ಅವರು ಪಾಳ್ಯ ಗ್ರಾಮ ಮಂಗಳೂರು ಹಾಗೂ ಬೆಂಗಳೂರು ನಡುವಿನ ಸಮಾನ ಅಂತರದ ಸ್ಥಳವಾಗಿದ್ದು, ಅಪಘಾತಗಳಾಗಿ ಅನಿಲ ಸೋರಿಕೆಯಾದ ತಕ್ಷಣ ಇಲ್ಲಿ ಮಂಗಳೂರಿನಲ್ಲಿರುವಂತೆ ಕಾರ್ಯಾಚರಣೆ ಕೈಗೊಳ್ಳಲು ಸಹಾಯಕವಾಗುವಂತಹ ಒಂದು ಕೇಂದ್ರವನ್ನು ತೆರೆಯುವಂತೆ ಹಲವಾರು ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಸ್ಥಳದಲ್ಲಿ ಕೇಂದ್ರ ತೆರೆದಲ್ಲಿ ಸುತ್ತಮುತ್ತಲ ಭಾಗದಲ್ಲಿ ಯಾವುದೇ ಅಪಘಾತಗಳಾದರೂ ತಕ್ಷಣ ಕಾರ್ಯ ಪ್ರವೃತ್ತರಾಗಲು ಸಹಕಾರಿಯಾಗುತ್ತದೆ. ಗ್ರಾಮದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದ ಅವರು, ಆಲೂರು ತಾಲೂಕು ಕೇಂದ್ರವಾಗಿದ್ದು ಅಗ್ನಿಶಾಮಕ ಕೇಂದ್ರವನ್ನು ತೆರೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

