ಕಾಂಗ್ರೆಸ್ ಮುಖಂಡರ ವಿರುದ್ಧ ದೂರುಗಳ ಸುರಿಮಳೆ
ಕ.ಪ್ರ. ವಾರ್ತೆ ಆಲೂರು ಸೆ. 12
ಪಟ್ಟಣದಲ್ಲಿ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರ ವಿರುದ್ಧ ದೂರುಗಳ ಸುರಿಮಳೆಗೈದರು. ಇದರಿಂದ ಗೊಂದಲದ ವಾತಾವರಣ ಉಂಟಾಯಿತು.
ಮುಂದಿನ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಹಿನ್ನೆಲೆಯಲ್ಲಿ ನಡೆದ ಸಭೆಗೆ ವೀಕ್ಷಕರಾಗಿ ಬಂದಿದ್ದ ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಇತರರು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಡನೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮುಖಂಡರ ವಿರುದ್ಧ ದೂರು: ಪಕ್ಷದ ಕಾರ್ಯಕರ್ತರಾದ ಕಟ್ಟಾಯ ಮೂರ್ತಿ, ರಂಗಸ್ವಾಮಿ, ಮಗ್ಗೆ ನವಾಬ್, ಸುಜಾತ ಕುಮಾರ್, ಹುಣಸವಳ್ಳಿ ಮಂಜಣ್ಣ, ಜಗದೀಶ್ ಮೊದಲಾದವರು ಮಾತನಾಡಿ, ಪಕ್ಷದ ಸ್ಥಳೀಯ ನಾಯಕರು ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ. ಕಳೆದ ಬಾರಿಯ ಶಾಸಕರ ಚುನಾವಣೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡಿಲ್ಲ. ಆನೇಕ ಮುಖಂಡರು ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿಲ್ಲ. ಆದ್ದರಿಂದ ಪಕ್ಷದ ಅಭ್ಯರ್ಥಿ ಡಿ.ಮಲ್ಲೇಶ್ ಸೋಲು ಅನುಭವಿಸಬೇಕಾಯಿತು. ಈ ಸಾರಿ ಕಾರ್ಯಕರ್ತರೊಂದಿಗೆ ಸ್ಪಂದಿಸಿ ಒಮ್ಮತದ ವ್ಯಕ್ತಿಗೆ ಟಿಕೆಟ್ ನೀಡದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆಂದು ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭಲ್ಲಿ ಗೊಂದಲವೇರ್ಪಟ್ಟ ಕಾರಣ ವೀಕ್ಷಕರಾಗಿ ಬಂದಿದ್ದ ಚಂದ್ರಶೇಖರ್ ಸೇರಿದಂತೆ ಆನೇಕ ನಾಯಕರು ಪ್ರತ್ಯೇಕ ಕೊಠಡಿಯಲ್ಲಿ ಸಭೆ ನಡೆಸಿ ಹೋಬಳಿವಾರು ಕೆಲ ಕಾರ್ಯಕರ್ತರ ಅಭಿಪ್ರಾಯ ಪಡೆದು ಸಕಲೇಶಪುರಕ್ಕೆ ತೆರಳಿದರು.
ನಂತರ ಮಾತನಾಡಿದ ಚಂದ್ರೇಶೇಖರ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲಾ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯಾರೇ ಆದರೂ ಅವರನ್ನು ಗೆಲ್ಲಿಸ ಬೇಕೆಂದರು.
ಕಾರ್ಯಕರ್ತರ ಅಭಿಪ್ರಾಯಗಳನ್ನು ತಿಳಿಯಲೆಂದೇ ಹೈಕಮಾಂಡ್‌ನವರು ತಮ್ಮನ್ನು ವೀಕ್ಷಕರಾಗಿ ಕಳಿಸಿದ್ದಾರೆ. ಈ ಬಾರಿ ಯಾರು ಅಭ್ಯರ್ಥಿ ಆಗುತ್ತಾರೆಂಬುದು ನೀವು ನೀಡುವ ಮಾಹಿತಿಯನ್ನು ಅವಲಂಬಿಸಿದೆ. ಆದುದರಿಂದ ತಾವುಗಳು ಅಗತ್ಯ ಸಲಹೆ ನೀಡಬೇಕು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.
ಕೆಪಿಸಿಸಿ ಹಾಸನ ಉಸ್ತುವಾರಿ ಅಶ್ವಿನಿಕುಮಾರ್ ರೈ, ಅಮರನಾಥ್, ಮಲ್ಲಿಗೆ ವೀರೇಶ್, ಮಾಜಿ ಶಾಸಕ ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ್, ಎಸ್.ಎಂ.ಆನಂದ್, ಎಚ್.ಕೆ.ಜವರೇಗೌಡ, ತಾ. ಕಾಂಗ್ರೆಸ್ ಅಧ್ಯಕ್ಷ ರಂಗನಾಥ್, ಹೆಮ್ಮಿಗೆ ಮೋಹನ್, ಡಿ.ಮಲ್ಲೇಶ್ ಡಿ.ಸಿ.ಸಣ್ಣಸ್ವಾಮಿ, ಎಚ್.ವಿ.ಶಿವರಾಮೇಗೌಡ ಕಾರ್ಯದರ್ಶಿ ಮಹಮ್ಮದ್ ಇಸಾಕ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

