ಗಂಗೋತ್ರಿಯಂತೆ ಕಾಲೇಜು ಅಭಿವೃದ್ಧಿ: ಶಾಸಕ
ಅರಸೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಾನಸ ಗಂಗೋತ್ರಿಯಂತೆ ಅಭಿವೃದ್ಧಿ ಪಡಿಸಬೇಕೆಂಬುದು ನನ್ನ ಕನಸಾಗಿದೆ. ಶಾಲಾ ಅಭಿವೃದ್ಧಿ ಸಮಿತಿ ಗಮನ ಹರಿಸಿ ಕೆಲಸ ಮಾಡಿದರೆ ಅದಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡುವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.
ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ, ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳು ಹಾಗೂ ಕಾಲೇಜು ಕೈಪಿಡಿ, ನೂತನ ವೆಬ್ಸೈಟ್, ಕಾಲೇಜಿನ ನೂತನ ಲಾಂಛನ ಮತ್ತು ಗಾಂಧಿ ಅಧ್ಯಯನ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು, ಸೌಲಭ್ಯ ಒದಗಿಸಲಾಗುವುದು. ವಿದ್ಯಾರ್ಥಿ ಶಕ್ತಿಯೇ, ದೇಶದ ಶಕ್ತಿಯಾಗಿದೆ. ಇಲ್ಲಿ ಪಡೆಯುವ ಶಿಕ್ಷಣದಿಂದ ದೇಶದ ಸಭ್ಯ ನಾಗರಿಕರಾಗಿ ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು ಉದ್ಯೋಗ ದೊರಕಿಸಲು ಯಾವುದೇ ಸರ್ಕಾರಗಳು ಸಮರ್ಥವಾಗಿಲ್ಲ. ಆಯವ್ಯಯದ ಶೇ.50ರಷ್ಟು ಹಣವನ್ನು ಕೈಗಾರಿಕೆಗಾಗಿ ಬಳಸಿದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬಹುದು. ಆದರೆ ಬಜೆಟ್ನ 29ರಷ್ಟು ಹಣವನ್ನು ಸರ್ಕಾರ ಸಹಾಯಧನ ನೀಡಲು ಬಳಸುತ್ತಿದ್ದು ಇದರಿಂದ ದೇಶದ ಸಾಲ ಹೆಚ್ಚಾಯಿತೆ ಹೊರತು ಬಡತನ ದೂರವಾಗಲಿಲ್ಲ. ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನೈಸರ್ಗಿಕ ಹಾಗೂ ಸಾವಯವ ಕೃಷಿ ಮೂಲಕ ಉತ್ತಮ ಬೆಳೆ ಬೆಳೆಯುತ್ತಿದ್ದ ರೈತರಿಗೆ ಹೆಚ್ಚಿನ ಬೆಳೆ ಬೆಳೆಯು ಆಸೆ ಹುಟ್ಟಿಸಿ ರಾಸಾಯನಿಕ ಗೊಬ್ಬರಗಳನ್ನು ನೀಡುವ ಮೂಲಕ ಇಂದು ರೈತನ ಭೂಮಿ ಬರಡಾಗಿದೆ. ಅಲ್ಲದೇ ರಸಗೊಬ್ಬರದ ಬೆಲೆಯೂ ಗಗನಕ್ಕೇರುತ್ತಿದ್ದು ಇದೇ ಡಾಲರ್ ಎದುರು ರೂಪಾಯಿ ಕುಸಿತ ಕಂಡರೆ ಮುಂದಿನ ದಿನಗಳಲ್ಲಿ 1 ಚೀಲ ರಾಸಾಯನಿಕ ಗೊಬ್ಬರದ ಬೆಲೆ 2 ಸಾವಿರಕ್ಕೆ ಏರಬಹುದೆಂದು ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕೆಂದು ಆಗ್ರಹಿಸಿದರು.
ಶಿಕ್ಷಣ ತಜ್ಞ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಏಜಾಸುದ್ದೀನ್ ಮಾತನಾಡಿ, ಗಾಂಧೀಜಿ ತತ್ವ, ಆದರ್ಶ ಪಾಲಿಸಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಿನ ಸ್ಥಿತಿ ನೋಡಿದರೆ ಸ್ವಾತಂತ್ರ್ಯದ ಕನಸು, ಕನಸಾಗಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತಿದೆ. ಇಂದಿನ ಪರಿಸ್ಥಿತಿಗೆ ನಾವು-ನೀವುಗಳೇ ಜವಾಬ್ದಾರರು ಎಂದು ಹೇಳಿದರು. ಬೆಂಗಳೂರಿನ ಗಾಂಧಿ ಭವನದ ಗೌರವ ಕಾರ್ಯದರ್ಶಿ ಜಿ.ಬಿ.ಶಿವರಾಜ್, ಕಾಲೇಜು ಪ್ರಾಂಶುಪಾಲ ಸೈಯದ್ ಪಾಷಾ ಹಾಗೂ ಕನ್ನಡ ಪ್ರಾಧ್ಯಾಪಕ ದೊರೇಶ್ ಕಾಲೇಜಿನ ಸಾಧನೆ ಕುರಿತು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಉದ್ಯಮಿ ಅರುಣಕುಮಾರ್, ನಿವೃತ್ತ ಪ್ರಾಂಶುಪಾಲ ಸಿ.ಎಂ.ಕಪನೇಗೌಡ, ಎಪಿಎಂಸಿ ಅಧ್ಯಕ್ಷ ಮುರುಂಡಿ ಶಿವಯ್ಯ, ಸದಸ್ಯ ಅಜ್ಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷ ಎಂ.ಜಿ. ಮಧು, ನಾಗರಾಜ್, ಜಾಜೂರು ವೀರಭದ್ರಪ್ಪ, ಇದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ನಾಗರಾಜ್ ಸ್ವಾಗತಿಸಿದರು. ಸುಬ್ರಹ್ಮಣ್ಯ ನಿರೂಪಿಸಿದರು. ವಿಶ್ವನಾಥ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

