ನಿಜ ಮೀನುಗಾರರಿಗೆ ಪರವಾನಗಿ: ಜಿಲ್ಲಾಧಿಕಾರಿಗೆ ಮನವಿ
ಕ.ಪ್ರ.ವಾರ್ತೆ ಹಾಸನ ಸೆ.13
ಸರ್ಕಾರ ನಕಲಿ ಗುತ್ತಿಗೆಯನ್ನು ಕೂಡಲೇ ರದ್ದುಪಡಿಸಿ ಅಸಲಿ ಮೀನುಗಾರರಿಗೆ ಪರವಾನಿಗೆ ನೀಡಬೇಕೆಂದು ಹೇಮಾವತಿ ಜಲಾಶಯ ಮೀನುಗಾರರ ಅಭಿವೃದ್ಧಿ ಸಂಘದ ಪ್ರಮುಖರು ಜಿಲ್ಲಾಧಿಕಾರಿ ಅನ್ಬುಕುಮಾರ್ಗೆ ಮನವಿ ಸಲ್ಲಿಸಿದರು.
ಕಳೆದ ತಿಂಗಳು ಮೂವರು ಮೀನುಗಾರರು ಜಲಾಶಯದಲ್ಲಿ ಮುಳುಗಿ ಮೃತಪಟ್ಟು ಅನೇಕ ದಿವಸ ಕಳೆದರೂ ಗುತ್ತಿಗೆ ಪಡೆದಿರುವ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿಯವರಾಗಲಿ, ಮೀನು ಹಿಡಿಯುವ ನಕಲಿ ಗುರುತಿನ ಚೀಟಿ ವಿತರಿಸಿದ ಹೇಮಾವತಿ ಜಲಾಶಯದ ಮೀನುಗಾರಿಕೆ ಅಭಿವೃದ್ಧಿ ಸಂಘದವರಿಗೆ ಸರ್ಕಾರ ನೀಡಿರುವ ಗುತ್ತಿಗೆಯನ್ನು ತಕ್ಷಣ ರದ್ದುಪಡಿಸಿ ನಿಜವಾದ ಮೀನುಗಾರರಿಗೆ ಮೀನು ಹಿಡಿಯಲು ಪರವಾನಗಿ ನೀಡಬೇಕೆಂದು ಆಗ್ರಹಿಸಿದರು.
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮೂವರು ಮೀನುಗಾರರು ಮುಳುಗಿ ಮೃತಪಟ್ಟರೂ ಇದುವರೆಗೂ ಮಹಾಮಂಡಳಿ ಸೌಜನ್ಯಕ್ಕಾದರೂ ಸಾವನ್ನಪ್ಪಿದ ಕುಟುಂಬಗಳನ್ನು ಭೇಟಿ ಮಾಡದೆ ಮೀನುಗಾರರನ್ನು ಅಮಾನವೀಯವಾಗಿ ಕಡೆಗಣಿಸಿದೆ. ಮಹಾಮಂಡಳಿಯ ಮೀನುಪಾಶುವಾರು ಗುತ್ತಿಗೆಯನ್ನು ಜಿಲ್ಲಾಡಳಿತ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಮೀನುಗಾರರ ಸಂಘ ಎಂದು ಸುಳ್ಳು ಹೇಳಿಕೊಂಡು ಮಹಾಮಂಡಳಿಯ ಕಾವಲುಪಡೆ ಸಿಬ್ಬಂದಿ ಶೆಟ್ಟಿಹಳ್ಳಿ ಜಗದೀಶ್, ಮುದ್ದನಹಳ್ಳಿ ಪ್ರಕಾಶ್, ಆಲೂರು ತಾಲೂಕಿನ ವಿಜಿಪುರ ರಂಗಸ್ವಾಮಿ ಅವರ ಜತೆ ಸೇರಿ 7 ಮಂದಿ ಮೀನುಗಾರರು ಸೇರಿಕೊಂಡು ಬೇನಾಮಿ ಸಂಘ ಹೇಮಾವತಿ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಸಂಘದ ಹೆಸರಿನಲ್ಲಿ ನಕಲಿ ಮೀನುಗಾರರ ಗುರುತಿನ ಚೀಟಿ ವಿತರಿಸಿ ಮೀನುಗಾರರ ಅನಾಹುತಕ್ಕೆ ಕಾರಣರಾದವರ ಸಂಘವನ್ನು ನಿಷೇಧಗೊಳಿಸಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಸ್ಥಳೀಯ ಶೆಟ್ಟಿಹಳ್ಳಿ ಮೀನುಗಾರರ ಸಂಘ ಹೊರತುಪಡಿಸಿ ಯಾವುದೇ ಸಂಘ ಸಂಸ್ಥೆಗಳಿಗೆ ಮೀನುಪಾಶುವಾರು ನಿರ್ವಹಣೆ ನೀಡಬಾರದು. ಮೀನುಗಾರರಿಗೆ ಸರ್ಕಾರದಿಂದ 2006 ಆದೇಶದ ಪ್ರಕಾರ ಮೀನು ಹಿಡಿಯಲು ಪರವಾನಿಗೆ ಮೊತ್ತವನ್ನು ಹೆಚ್ಚಿಸಿ ಸರ್ಕಾರದಿಂದಲೇ ಪರವಾನಿಗೆ ನೀಡಬೇಕು. ಸ್ವತಂತ್ರವಾಗಿ ಮೀನುಹಿಡಿಯಲು ಜಿಲ್ಲಾಡಳಿತ ರಕ್ಷಣೆ ನೀಡುವುದರ ಮೂಲಕ ಮೀನು ಹಿಡಿಯುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಈ ವೇಳೆ ದಲಿತ ಸಂಘದ ಮುಖಂಡ ಮರಿಜೋಸೇಫ್, ಹೇಮಾವತಿ ಜಲಾಶಯ ಮೀನುಗಾರರ ಅಭಿವೃದ್ಧಿ ಸಂಘದ ಜಗದೀಶ್, ರುದ್ರಶೆಟ್ಟಿ, ಮಣಿ, ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

