ಡಿ ಗ್ರೂಪ್ ನೌಕರರೂ ಜಾನುವಾರುಗಳಿಗೆ ಔಷಧ ಕೊಡ್ತಾರೆ...
ಕ.ಪ್ರ.ವಾರ್ತೆ ಹೊಳೆನರಸೀಪುರ ಸೆ.13
ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಅನಿವಾರ್ಯ ಸಂದರ್ಭಗಳಲ್ಲಿ ಹಳ್ಳಿಗಳಲ್ಲಿ ರಾಸುಗಳಿಗೆ ಔಷಧಿ ಹಾಗೂ ಇಂಜೆಕ್ಷನ್ ಕೊಡುವ ಡಿ-ಗ್ರೂಪ್ ನೌಕರರನ್ನೂ ಡಾಕ್ಟರ್ ಅಂತಾರೆ, ನಮ್ಮನ್ನೂ ಡಾಕ್ಟರ್ ಅಂತಾರೆ ಹೀಗಾಗಿದೆ ನಮ್ಮ ಪರಿಸ್ಥಿತಿ...
ಹೀಗೆಂದು ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪಶು ವೈದ್ಯಕೀಯ ಇಲಾಖೆ ಅಧಿಕಾರಿ ಡಾ.ಮುರಳಿ ತಮ್ಮ ಇಲಾಖೆಯಲ್ಲಿನ ಸಂಕಷ್ಟವನ್ನು ಸಭೆಯ ಮುಂದೆ ತೆರೆದಿಟ್ಟರು.
ಪುಷ್ಪಾಗೌಡೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಮ್ಮ ಇಲಾಖಾ ಪ್ರಗತಿಯ ಬಗ್ಗೆ ವರದಿ ನೀಡುವ ಸಂದರ್ಭದಲ್ಲಿ ಹೀಗೆ ತಮ್ಮ ಸಂಕಷ್ಟವನ್ನು ತೆರೆದಿಟ್ಟರು. ಇದಕ್ಕೆ ದನಿಗೂಡಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಎಚ್.ಭಾನುಪ್ರಕಾಶ್ ಕೂಡಾ ಕೃಷಿಗೆ ಸಂಬಂಧಿಸಿದಂತೆ 6 ಇಲಾಖೆಗಳಲ್ಲೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ತೀವ್ರ ಇದೆ. ಒತ್ತಡ ಹಾಗೂ ಸಮಸ್ಯೆಗಳ ನಡುವೆಯೇ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ ಎಂದು ಸಭೆಯಲ್ಲಿ ವಿವರಿಸಿದರು.
ವಾರದ ಹಿಂದಷ್ಟೇ ಕರೆಯಲಾಗಿದ್ದ ತಾಪಂ ಸಾಮಾನ್ಯ: ವಾರದ ಹಿಂದಷ್ಟೇ ಕರೆಯಲಾಗಿದ್ದ ತಾಪಂ ಸಾಮಾನ್ಯ ಸಭೆಗೆ ಬೆರಳೆಣಿಕೆಯಷ್ಟು ಇಲಾಖೆ ಅಧಿಕಾರಿಗಳಷ್ಟೇ ಹಾಜರಾಗಿರುವುದನ್ನು ಕಂಡು, ಅಸಮಾಧಾನಗೊಂಡಿದ್ದ ತಾಪಂ ಸದಸ್ಯರು ಸಭೆಯನ್ನೇ ಮುಂದೂಡಿ ಸಾಮಾನ್ಯ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಖುದ್ದಾಗಿ ಹಾಜರಾಗುವಂತೆ ಮತ್ತು ಕೆಳ ಹಂತದ ಸಿಬ್ಬಂದಿ ಸಭೆಗೆ ಕಳಿಸದಂತೆ ಸೂಚಿಸುವಂತೆ ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಈ ಕಾರಣದಿಂದ ಗುರುವಾರ ಸಾಮಾನ್ಯ ಸಭೆಯನ್ನು ಸದಸ್ಯರು ಸೂಚನೆಯ ಮೇರೆಗೆ ಮತ್ತೆ ಕರೆಯಲಾಗಿತ್ತು.
ಶಾಸಕ ದಿಢೀರ್ ಭೇಟಿ: ಸಭೆ ನಡೆಯುತ್ತಿದ್ದಾಗ ಶಾಸಕ ಎಚ್.ಡಿ.ರೇವಣ್ಣ ದಿಢೀರ್ ಭೇಟಿ ನೀಡಿ, ಸಭೆಯಲ್ಲಿ ಕೆಲ ಸಮಯವಿದ್ದು ನಂತರ ನಾನಾ ಕಾರ್ಯಕ್ರಮಗಳಿಗೆ ಭಾಗವಹಿಸುವ ಸಲುವಾಗಿ ನಿರ್ಗಮಿಸಿದರು. ನಂತರ ಮುಂದುವರಿದ ಸಭೆಯಲ್ಲಿ ಕೆಲ ಸದಸ್ಯರು ಆಹಾರ ಸರಬರಾಜು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಅಕ್ಕಿ ಹಾಗೂ ಇನ್ನಿತರ ಪಡಿತರ ಹೆಚ್ಚಿನ ದರಕ್ಕೆ ಮಾರುತ್ತಿರುವುದಲ್ಲದೆ, ಕಡಿಮೆ ಪಡಿತರವನ್ನು ನೀಡುತ್ತಿರುವ ಕುರಿತ ಸಾರ್ವಜನಿಕ ದೂರುಗಳ ಬಗ್ಗೆ ಪ್ರಶ್ನಿಸಿದರು. ಈ ಹಂತದಲ್ಲಿ ಸಮಜಾಯಿಷಿ ನೀಡಲು ಮುಂದಾದ ಆಹಾರ ಇಲಾಖೆಯ ಅಧಿಕಾರಿಗಳ ಉತ್ತರಕ್ಕೆ ಸದಸ್ಯರು ತೃಪ್ತರಾಗಲಿಲ್ಲ.
ಉದ್ಯಮಶೀಲತೆ ಯೋಜನೆಯಡಿ ಸಾಲ: ಪಶು ಇಲಾಖೆಯ ವರದಿ ನೀಡಿದ ಡಾ.ಮುರಳಿ ಅವರು, ರಾಸುಗಳಲ್ಲಿ ಕಂಡುಬರುವ ಕಾಲು ಬಾಯಿ ಜ್ವರದ ನಿಯಂತ್ರಣಕ್ಕಾಗಿ 16 ತಂಡಗಳನ್ನು ರಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕರುಳು ಬೇನೆ ಹಾಗೂ ಗಳಲೆ ರೋಗ ನಿಯಂತ್ರಣ ಕುರಿತಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇಲಾಖೆಯಲ್ಲಿ ಜಾನುವಾರು ವಿಮಾ ಯೋಜನೆ ಜಾರಿಗೆ ತರಲಾಗಿದ್ದು, ಜನಶ್ರೀ ವಿಮಾ ಯೋಜನೆಯಡಿಯಲ್ಲಿ ಕುರಿಗಳಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ನಟರಾಜ್, ಇಲಾಖೆಯಿಂದ ಸ್ವಯಂ ಉದ್ಯೋಗ ಮಾಡುವವರಿಗಾಗಿ ಸಾಲ ಹಾಗೂ ಸಬ್ಸಿಡಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು. ಅಲ್ಲದೇ ಉದ್ಯಮಶೀಲತೆ ಯೋಜನೆಯಡಿಯಲ್ಲಿ ಅಗತ್ಯ ಸಾಲ ಸೌಲಭ್ಯಗಳನ್ನು ಅರ್ಹರಿಗೆ ನೀಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ನಂಜುಂಡಪ್ಪ, ಸದಸ್ಯ ಹುಚ್ಚೇಗೌಡ, ಚಂದ್ರಮತಿ, ಎನ್.ಆರ್.ಅನಂತಕುಮಾರ್, ಸಿ.ಆರ್.ಮಂಜುನಾಥ್, ಕೆ.ಕೆ.ಲೋಕೇಶ್, ಶಶಿಕಲ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

