ಹಾಸನ

ಕಾಮಗಾರಿ ಸ್ಥಗಿತ, ಅಭಿವೃದ್ಧಿ ಹಿನ್ನಡೆ

Published On :

ಹಾಸನ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ರೇಲ್ವೆ ಸಂಚಾರ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಜಿಲ್ಲೆಯಲ್ಲಿ ಸಾಕಷ್ಟು ರೇಲ್ವೆ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದು ವಿಪರ್ಯಾಸದ ಸಂಗತಿ.
ಬಡವರ ಸಾರಿಗೆ ಎಂದೇ ಖ್ಯಾತಿ ಪಡೆದಿರುವ ರೇಲ್ವೆ ಸಂಚಾರ ಕಡಿಮೆ ದರದಲ್ಲಿ ಅತೀ ಹೆಚ್ಚು ದೂರ ಪ್ರಯಾಣ ಬೆಳೆಸುವಂತಹ ಅವಕಾಶ ಇರೋದು ಇದರಲ್ಲಿ ಮಾತ್ರ. ಇತರೆ ಸಾರಿಗೆ ವ್ಯವಸ್ಥೆಗಳು ಕ್ರಮಿಸುವ ದೂರಕ್ಕಿಂತ ಅದರ ದರಗಳೆ ಹೆಚ್ಚಾಗಿರುತ್ತವೆ. ಆದ್ದರಿಂದ ರೈಲು ಬಡವರ ಪಾಲಿಗೆ ಒಂದು ರೀತಿಯಲ್ಲಿ ಬಾದಾಮಿಯಂತೆ.
ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಪ್ರಯಾಣವು ಅತ್ಯಂತ ಸುರಕ್ಷಿತ. ಜೊತೆಗೆ ಕಡಿಮೆ ವೆಚ್ಚವಾಗುವುದರಿಂದ  ಸಾರ್ವಜನಿಕರು ರೇಲ್ವೆ ಸಂಚಾರವನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಪ್ರಯಾಸವಿಲ್ಲದೆ, ನಿಶ್ಚಿಂತೆಯಿಂದ ಪ್ರಯಾಣ ಬೆಳೆಸಬಹುದಾದ ಜಿಲ್ಲೆಯಲ್ಲಿ ಇಂತಹ ಸಾಕಷ್ಟು ರೇಲ್ವೆ ಕಾಮಗಾರಿಗಳು  ಅರ್ಧಕ್ಕೆ ನಿಂತಿದ್ದರೆ, ಮತ್ತೆಕೆಲವು ಇದ್ದರೂ ಇಲ್ಲದಂತಾಗಿದೆ.    
ಜಿಲ್ಲೆಯ ಮಹತ್ವಾಕಾಂಕ್ಷೆ ಯೋಜನೆಯಾದ ಬೆಂಗಳೂರು-ಹಾಸನ ರೇಲ್ವೆ ಮಾರ್ಗ ಅರ್ಧಕ್ಕೆ ನಿಂತಿದೆ. ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ಮಂಜೂರಾಗಿದ್ದ ಬೆಂಗಳೂರು-ಶ್ರವಣಬೆಳೆಗೊಳ-ಹಾಸನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ.  ಕುಣಿಗಲ್ ಬಳಿ ರೇಲ್ವೆ ಮಾರ್ಗಕ್ಕೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಈ ಮಾರ್ಗವು ಸ್ಥಗಿತಗೊಂಡಿದೆ.
ಈ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡರೆ ಹಾಸನ-ಬೆಂಗಳೂರು ನಡುವೆ ನೇರ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಅಷ್ಟೇ ಅಲ್ಲದೆ ಬಸ್ ಮಾರ್ಗಕ್ಕಿಂತ ಕೆಲವು ಕಿಮೀ ನಷ್ಟು ಅಂತರ ಉಳಿಕೆಯಾಗಲಿದೆ. ಬಸ್ ಮಾರ್ಗಕ್ಕಿಂತ ರೈಲು ಮಾರ್ಗದಲ್ಲಿ ಬೆಂಗಳೂರನ್ನು ತಲುಪಲು ಸಾಧ್ಯವಾಗುತ್ತದೆ. ಭೂ ಸ್ವಾಧೀನ ಪಡಿಸಿಕೊಂಡು ರೈಲು ಸಂಚಾರಕ್ಕೆ ಅನುವು ಮಾಡಿಕೊಡುವಂತಹ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಈ ಮಾರ್ಗ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಗೋಚರವಾಗುತ್ತಿಲ್ಲ.
ಹಾಸನ-ಶ್ರಮವಣಬೆಳಗೊಳ-ಬೆಂಗಳೂರು ಮಾರ್ಗ ಪೂರ್ಣಗೊಳ್ಳದ ಕಾರಣ ಶ್ರವಣಬೆಳಗೊಳದಲ್ಲಿನ ರೇಲ್ವೆ ನಿಲ್ದಾಣ ಹದಗೆಡುತ್ತಿದೆ. ರೇಲ್ವೆ ನಿಲ್ದಾಣದಲ್ಲಿ ಗಿಡಗಂಟೆಗಳು ಬೆಳೆದು ಪಾಳು ಬಿದ್ದಂತಾಗಿದೆ. ಅಲ್ಲದೆ ರೇಲ್ವೆ ಹಳಿಗಳು ಮಳೆ, ಗಾಳಿಗೆ ತುಕ್ಕು ಹಿಡಿಯುತ್ತಿದ್ದು, ಮತ್ತೆ ಮಾರ್ಗವನ್ನು ಸರಿಪಡಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  
ಜೊತೆಗೆ ಕಡೂರು- ಚಿಕ್ಕಮಗಳೂರು- ಸಕಲೇಶಪುರ ನಡುವಿನ 93 ಕಿ.ಮೀ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಲಾಗಿತ್ತು. ಈ ಮಾರ್ಗ ನಿರ್ಮಾಣ ಮಾಡುವುದಾಗಿ ಹೇಳಿ ವರ್ಷಗಳೇ ಕಳೆಯುತ್ತಿದ್ದರೂ ಈವರೆಗೂ ಕಾಮಗಾರಿ ಪ್ರಾರಂಭಿಸುವ ಲಕ್ಷಣ ಕಾಣುತ್ತಿಲ್ಲ. ಹಾಸನ- ಅರಸೀಕೆರೆ ಮತ್ತು ಮೈಸೂರು- ಹಾಸನ ನಡುವೆ ಅತ್ಯಗತ್ಯವಾಗಿ ಹಲವಾರು ಮೇಲ್ಸುತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣ ಮತ್ತು ಹಳಿ ದುರಸ್ತಿ ಮಾಡಬೇಕಾಗಿತ್ತು. ಈ ಹಿಂದೆ ರೇಲ್ವೆ ರಾಜ್ಯ ಸಚಿವರಾಗಿದ್ದ ಮುನಿಯಪ್ಪ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಂಗಳೂರು-ಹಾಸನ ಮತ್ತು ಬೆಂಗಳೂರು ನಡುವೆ ಹೆಚ್ಚು ರೈಲುಗಳ ಸಂಚಾರ ಹಾಗೂ ಮೈಸೂರು- ಹಾಸನ ನಡುವೆ ಹೆಚ್ಚುವರಿಯಾಗಿ ಹೊಸ ರೈಲುಗಳನ್ನು ಓಡಿಸಲು ಬಜೆಟ್‌ನಲ್ಲಿ ಅನುಮೋದಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಸಚಿವರು ನೀಡಿದ್ದ ಯಾವೊಂದು ಭರವಸೆಗಳು ಕಾರ್ಯಗತವಾಗದೇ ಕೇವಲ ಭರವಸೆಗಳಾಗಿಯೇ ಉಳಿದಿವೆ.
ಮೇಲ್ಸೆತುವೆ ಅವಶ್ಯಕ: ನಗರದ ಎನ್.ಆರ್.ವೃತ್ತದಿಂದ ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ರೇಲ್ವೆ ಹಳಿ ಹಾದು ಹೋಗಿದೆ. ರೈಲು ಸಂಚರಿಸುವ ಸಂದರ್ಭದಲ್ಲಿ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಶ್ರಮದ ಫಲವಾಗಿ ಇಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತು 36 ಕೋಟಿ ರು.ಗಳ ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಆದರೆ ಕಾಮಗಾರಿ ಪ್ರಾರಂಭವಾಗುವುದೇ ಎಂಬ ಶಂಕೆ ಸಾರ್ವಜನಿಕರಿಂದ ದೂರವಾಗಿಲ್ಲ. ಸಂಬಂಧಪಟ್ಟವರು ಅರ್ಧಕ್ಕೆ ನಿಂತಿರುವ ರೇಲ್ವೆ ಕಾಮಗಾರಿಗಳನ್ನು ಇನ್ನಾದರೂ ಪೂರ್ಣಗೊಳಿಸಿ ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸುವರೇ?

ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.