ದೇವಾಂಗ ಸಮಾಜಕ್ಕೆ ವಿಶೇಷ ಒತ್ತು ನೀಡಿ
ಕನ್ನಡಪ್ರಭ ವಾರ್ತೆ ಹಾಸನ ಸೆ.15
ರಾಜಕೀಯವಾಗಿ ದೇವಾಂಗ ಸಮಾಜ ಹಿಂದುಳಿದಿದ್ದು, ಸರ್ಕಾರ ಸಮಾಜಕ್ಕೆ ಈ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ಜಿಲ್ಲಾ ದೇವಾಂಗ ನೇಕಾರ ನೌಕರರ ಸಂಘದ ವತಿಯಿಂದ ಭಾನುವಾರ ನಡೆದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ದೇವಾಂಗ ಪ್ರತಿನಿಧಿಗಳಿಗೆ ಸನ್ಮಾನ ಮತ್ತು ಸಂಘದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೇಕಾರರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಬೇಕು. ದೇವಾಂಗ ಸಮಾಜ ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದ್ದು, ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯದಲ್ಲಿ ಪ್ರಸ್ತುತ ಉಮಾಶ್ರೀ ಅವರು ಉತ್ತಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಅವಕಾಶಗಳು ಹೆಚ್ಚಬೇಕು. ಜೊತೆಗೆ ಈ ಸಮಾಜದಲ್ಲಿ ಕೇವಲ ಒಬ್ಬ ಐಎಎಸ್ ಅಧಿಕಾರಿ ಇದ್ದಾರೆ ಎಂದ ಅವರು, ಜನಾಂಗದ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಉತ್ತಮ ಶಿಕ್ಷಣ ನೀಡುವ ಮೂಲಕ ಶಿಕ್ಷಿತ ಸಮಾಜವನ್ನಾಗಿಸಬೇಕು ಎಂದು ಹೇಳಿದರು.
ಜನಾಂಗದ ಮಕ್ಕಳು ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜಕ್ಕೆ ಕೀರ್ತಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಲು ಮುಂದಾಗಬೇಕು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ಜನಾಂಗದ ಸೇವೆಯನ್ನು ಮಾಡಬೇಕು ಎಂದರು.
ಈ ಸಮಾಜದಲ್ಲಿ ಇರುವಂತಹ 21 ಒಳಪಂಗಡಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿ ಒಳಪಂಗಡಗಳ ಅಭಿವೃದ್ಧಿಗೆ ಸಹಕರಿಸಬೇಕು.
ಜೊತೆಗೆ ರಾಜ್ಯದಲ್ಲಿ ನೇಕಾರರನ್ನು ಒಗ್ಗೂಡಿಸಿ ಸಮಾಜ ಕಟ್ಟುವ ಕಾರ್ಯ ಮಾಡಬೇಕು. ಪ್ರತಿ ರಾಜ್ಯದಲ್ಲಿ ನೇಕಾರರನ್ನು ಸಂಘಟಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಸಮಾಜ ಬಾಂಧವರು ಹಕ್ಕುಗಳನ್ನು ಪಡೆಯಲು ಮೊದಲು ಸಂಘಟಿತರಾಗಬೇಕು. ಇದಕ್ಕೆ ನೇಕಾರರೆಲ್ಲರೂ ಒಂದೇ ವೇದಿಕೆಗೆ ಬರುವಂತೆ ಒಟ್ಟಾಗಿ ಕೆಲಸ ಮಾಡಬೇಕು. ಪ್ರಸ್ತುತ ರಾಜ್ಯದಲ್ಲಿ ಜನಾಂಗವು 26ನೇ ಸ್ಥಾನದಲ್ಲಿದೆ. ಸರ್ಕಾರ ನಡೆಸುವಂತಹ ಜನಗಣತಿ ಸಂದರ್ಭದಲ್ಲಿ ಜನಾಂಗದವರು ನೇಕಾರ ಎಂಬ ಹೆಸರನ್ನು ನಮೂದಿಸಬೇಕು. ಇಲ್ಲವಾದರೆ ಸರ್ಕಾರದ ಸವಲತ್ತುಗಳು ಸಿಗುವಲ್ಲಿ ಸಮಾಜ ವಿಫಲವಾಗಲಿದೆ ಎಂದು ಹೇಳಿದರು.
ಎಲ್ಲಾ ಜಿಲ್ಲೆಗಳಲ್ಲಿ ನೇಕಾರರ ಶಕ್ತಿ ಬಲಗೊಳ್ಳಲಿ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನೇಕಾರರ ಶಕ್ತಿ ಬಲಗೊಳ್ಳಬೇಕಾಗಿದ್ದು, ಯಾವುದೇ ಒಂದು ಗುರಿ ತಲುಪಬೇಕಾದರೆ ಗುರು ಮತ್ತು ಗುರಿ ಎರಡನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಸಾಗಿದರೆ ಸಾಧನೆ ಮಾಡಲು ಸಾಧ್ಯ ಎಂದ ಅವರು, ದೇವರ ದಾಸಿಮಯ್ಯ ಜಯಂತಿಯನ್ನು ಆಚರಣೆ ಮಾಡಲು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮಕ್ಕೂ ಮೊದಲು ವಚನಕಾರ ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ದೇವಾಂಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ದೇವಾಂಗ ನೌಕರರಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ದೇವಾಂಗ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ದೇವಾಂಗ ನೌಕರರ ಸಂಘ ಅಧ್ಯಕ್ಷ ಹಾಗೂ ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಸೋಮಶೇಖರ್, ಬಿಎಂಟಿಸಿ ನಿರ್ದೇಶಕ ಜಿ.ರಮೇಶ್, ಸಂಘ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ರಾಜ್ಯ ದೇವಾಂಗ ನೌಕರರ ಸಂಘದ ಅಧ್ಯಕ್ಷ ಕೆ.ಆರ್.ಸುರೇಶ್, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮತ್ತು ರಾಜ್ಯ ದೇವಾಂಗ ನೌಕರರ ಸಂಘದ ಜಿ.ಆರ್.ಮಂಜೇಶ್, ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎ.ನಂಜುಂಡಸ್ವಾಮಿ, ರಾಜ್ಯ ದೇವಾಂಗ ಸಂಘದ ಸಹ ಕಾರ್ಯದರ್ಶಿ ಕೋದಂಡರಾಮು, ಟಿ.ಎಂ. ಪರಮೇಶ್ವರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

