ಹಾಸನ

ಕಾಡಾನೆ ಹಾವಳಿ, ಲಕ್ಷಾಂತರ ರು. ಮೌಲ್ಯದ ಬೆಳೆ ನಾಶ

Published On :

ಕನ್ನಡಪ್ರಭ ವಾರ್ತೆ೤ ಆಲೂರು೤ ಸೆ.16
ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಕಾಡಾನೆ ಹಾವಳಿಯಿಂದಾಗಿ ಲಕ್ಷಾಂತರ ರು.ಮೌಲ್ಯದ ಬೆಳೆ ನಾಶಗೊಂಡಿದೆ. ಇದರಿಂದ ರೊಚ್ಚಿಗೆದ್ದ ಕಾಗನೂರು ಹಾಗೂ ಬೆಂಬಳೂರು ಗ್ರಾಮಸ್ಥರು ಸೋಮವಾರ ಅರಣ್ಯಾಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಕೆಂಚಮ್ಮನಹೊಸಕೋಟೆ ಹೋಬಳಿಯ ಕಾಗನೂರು, ಹರಿಹಳ್ಳಿ, ಕಾಗನೂರು ಹೊಸಹಳ್ಳಿ, ಬೋಸ್ಮಾನಹಳ್ಳಿ, ಬೆಂಬಳೂರು, ಶಿರಗಾವರ, ಕಾರ್ಗೋಡು, ಸುಳುಗೋಡು, ಹೆಮ್ಮಿಗೆ, ಕೆಂಚಮ್ಮನಹೊಸಕೋಟೆ, ಹುಸ್ಕೂರ್, ಅಡಿಬಯಲು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಡಾನೆಗಳು ಭತ್ತ, ಕಾಫಿ, ಏಲಕ್ಕಿ, ಬಾಳೆ, ಅಡಿಕೆ, ತೆಂಗು, ಕಾಳುಮೆಣಸು ಮುಂತಾದ ಬೆಳೆಗಳನ್ನು ನಾಶಪಡಿಸಿದ್ದು, ಸುಮಾರು 10 ಲಕ್ಷ ರು.ಗೂ ಹೆಚ್ಚು ಬೆಳೆ ನಾಶವಾಗಿದೆ.
ಬೆಳೆ ನಾಶಗೊಂಡಿರುವ ಪ್ರದೇಶಗಳಿಗೆ ಪರಿಶೀಲನೆಗೆ ತೆರಳಿದ್ದ ಆರ್‌ಎಫ್‌ಓ ದೇವರಾಜ್ ಹಾಗೂ ಸಿಬ್ಬಂದಿ ಇದ್ದ ಜೀಪನ್ನು ತಡೆದ ಕಾಗನೂರು, ಬೋಸ್ಮಾನಹಳ್ಳಿ ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್ ಹಾಕಿ ಘೋಷಣೆ ಕೂಗಿದರು.
ಪ್ರತಿಭಟನಾಕಾರರು ಮಾತನಾಡಿ, ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆ ಕೊಯ್ಲಿಗೆ ಬರುವ ಮೊದಲೆ ಕಾಡಾನೆಗಳು ನಾಶಪಡಿಸಿದ್ದು, ಇದರಿಂದ ಬಡ ರೈತರು ಸಾಲದ ಶೂಲಕ್ಕೆ ಸಿಲುಕಿ ನರಳುವಂತಾಗಿದೆ. ಬೆಳೆದ ಬೆಳೆ ಕೈಗೆ ಬಾರದೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಉಳ್ಳವರು ಸೋಲಾರ್ ಬೇಲಿಗಳನ್ನು ಹಾಕಿಕೊಂಡು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ ಬಡ ರೈತರು ಸೋಲಾರ್ ಬೇಲಿ ಹಾಕಿಸಿಕೊಳ್ಳಲು ಸಾಧ್ಯವಾಗದೆ ಬೆಳೆದ ಬೆಳೆಯನ್ನು ಆನೆಗಳ ಪಾಲಿಗೆ ಬಿಟ್ಟು ಪರಿತಪಿಸುವಂತಾಗಿದೆ ಎಂದು ಹೇಳಿದರು.
ಗಾಯದ ಮೇಲೆ ಬರೆ ಎಳೆದಂತೆ ಬೆಳೆ ಪರಿಹಾರ ಹಣ ಸರಿಯಾಗಿ ದೊರೆಯುತ್ತಿಲ್ಲ. ಹಣವಂತರು ತಮ್ಮ ತೋಟಕ್ಕೆ ಹಾಕಿಕೊಂಡಿರುವ ಸೋಲಾರ ಬೇಲಿಯಿಂದಾಗಿ ಆನೆಗಳು ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು ಬೆಳಗಿನ ಸಮಯದಲ್ಲೇ ಓಡಾಡಲು ಹೆದರುವಂತಾಗಿದೆ. ಇದರಿಂದ ತೋಟ ಗದ್ದೆಗಳಲ್ಲಿ ಕೆಲಸ ಮಾಡಲು ಯಾರೂ ಬರುತ್ತಿಲ್ಲ. ಗದ್ದೆ ತೋಟ ಮಾರೋಣವೆಂದರೆ, ಖರೀದಿಸಲು ಸಹ ಯಾರೂ ಮುಂದೆ ಬರುತ್ತಿಲ್ಲ.  ಅಲ್ಲದೆ ಈ ಭಾಗದ ಗ್ರಾಮಗಳಿಗೆ ಹೆಣ್ಣು ನೀಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ನೇರ ಕಾರಣ ನಗರ ಪ್ರದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದು, ಸಮಯ ಕಳೆಯಲು ಹಾಗೂ ಪ್ರಚಾರಕ್ಕಾಗಿ ಪರಿಸರವಾದಿಗಳ ಸೋಗು ಹಾಕಿಕೊಂಡು ಡೋಂಗಿ ಪರಸರಿವಾದಿಗಳೇ ಕಾರಣ. ಅಂತಹವರನ್ನು ಹಿಡಿದು ತಂದು ಆನೆ ಹಾವಳಿ ಇರುವ ಈ ಪ್ರದೇಶಗಳಲ್ಲಿ ಒಂದು ತಿಂಗಳು ಜೀವನ ನಡೆಸುವಂತೆ ಮಾಡಿ ಎಂದು ಆರ್‌ಎಫ್‌ಓ ಅವರನ್ನು ಪಟ್ಟು ಹಿಡಿದು ಆಗ್ರಹಿಸಿದರು. ಆರ್‌ಎಫ್‌ಓ ದೇವರಾಜ್ ಗ್ರಾಮಸ್ಥರೊಂದಿಗೆ ಚರ್ಚಿಸಿ ಗ್ರಾಮಸ್ಥರು ಹಾಕಿದ ಘೇರಾವ್ ಹಿಂಪಡೆಯುವಂತೆ ಕೋರಿದರು. ನಂತರ ಘೇರಾವ್ ಹಿಂಪಡೆದ ಗ್ರಾಮಸ್ಥರು ಆನೆಗಳ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಂಡು ಸುತ್ತಮುತ್ತಲ ಸಾವಿರಾರು ಗ್ರಾಮಸ್ಥರು, ಜಿಲ್ಲಾ ಕೇಂದ್ರಕ್ಕೆ ತೆರಳಿ ಜಿಲ್ಲಾ ಅರಣ್ಯಾಧಿಕಾರಿಯನ್ನು ಅವರ ಕಚೇರಿಯಲ್ಲಿಯೇ ಕೂಡಿ ಹಾಕಿ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ನಾಗರಿಕ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ದಿನೇ ದಿನೇ ಕಾಡಾನೆ ಹಾವಳಿ ವಿಪರೀತವಾಗುತ್ತಿದೆ.
ಕೆಂಚಮ್ಮನಹೊಸಕೋಟೆ ಹೋಬಳಿಯ ಸುತ್ತಮುತ್ತ ಬೀಡುಬಿಟ್ಟಿರುವ 42 ಕಾಡಾನೆಗಳು, 3 ಗುಂಪಾಗಿ ಸಂಚಾರ ನಡೆಸುತ್ತಿವೆ. ಅದರಲ್ಲಿ ಅಪಾಯಕಾರಿಯಾದ ಒಂಟೀ ಆನೆ ಮಕ್ನಾ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದು, ಕಳ್ಳಬಟ್ಟಿ ರುಚಿಕಂಡಿರುವ ಈ ಆನೆ ಮನೆಯ ಒಳ ಭಾಗಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದು, ಈ ಭಾಗದ ಜನರ ಭಯವನ್ನು ಹಿಮ್ಮಡಿಗೊಳಿಸಿದೆ.
ಭಾನುವಾರ ರಾತ್ರಿ ಹರಿಹಳ್ಳಿಯ ಸುರೇಂದ್ರ ಎಂಬವರ ಕೊಟ್ಟಿಗೆ ನುಗ್ಗಿ ಅಲ್ಲಿದ್ದ ನೀರಿನ ಟ್ರಂ ಗಳನ್ನು ದಂತದಿಂದ ತಿವಿದು ನೀರನ್ನು ಪರಿಶೀಕ್ಷಿಸಿ, ನಂತರ ಕಳ್ಳಭಟ್ಟಿ ಸಿಗದ ಕಾರಣ ರಾತ್ರಿ ಇಡೀ ಮನೆಯ ಸುತ್ತಮುತ್ತಲೆ ಗೀಳಿಡುತ್ತಾ ದಾಂದಲೇ ನಡೆಸಿದೆ ಎಂದರು.
ಸೆ.24ರಂದು ನ್ಯಾಯಾಲಯದಲ್ಲಿ ಕಾಡಾನೆಯ ಸಮಸ್ಯೆಗೆ ಸಂಬಂಧಪಟ್ಟ ಅರ್ಜಿ ವಿಚಾರಣೆ ನಡೆಯಲಿದ್ದು, ನ್ಯಾಯಾಧೀಶರು ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಗ್ರಾಮಸ್ಥರ ಪರವಾಗಿ ತೀರ್ಪು ನೀಡುವ ನಂಬಿಕೆ ಇದೆ ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.